ಮಕ್ಕಳಲ್ಲಿ ದೇವರು, ಧರ್ಮ, ಆಚಾರ ವಿಚಾರಗಳ ಆಸಕ್ತಿ ಕಡಿಮೆ: ದೀಪಕಸ್ವಾಮಿ
ತಲ್ಲೂರ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ದೀಪಕಸ್ವಾಮಿ
ಯರಗಟ್ಟಿ 09ಽ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ದೇವರು, ಧರ್ಮ, ಆಚಾರ ವಿಚಾರಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು, ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವುದು ಅವಶ್ಯವಾಗಿದೆ ಎಂದು ತೊರಗಲ್ಲಮಠದ ದೀಪಕಸ್ವಾಮಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀಲಕ್ಷ್ಮೀದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವಿಂದು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡಬೇಕೆಂದರೆ ಅವರಿಗೆ ಶ್ರೀಗಳ ಮಾತುಗಳನ್ನು ಕೇಳಿಸುವ ಜತೆಗೆ ಮಠಗಳು ಮತ್ತು ಧರ್ಮಗಳ ಕುರಿತು ತಿಳವಳಿಕೆ ನೀಡಬೇಕು. ಪ್ರಸ್ತಕ ವರ್ಷ ಭೀಕರ ಬರಗಾಲ, ಕುಡಿಯುವ ನೀರಿನ ಆಹಾಕಾರ, ಸೂರ್ಯನ ಪ್ರಖರ ತಾಪಕ್ಕೆ ಭೂಮಿ ಮೇಲಿನ ಸಕಲ ಜೀವ ರಾಶಿಗಳಿಗೆ ಸಂಕಷ್ಟ ಪರಿಸ್ಥಿತಿ ಎದುರಾಗಿದೆ. ಪರಿಶುದ್ಧ ಪ್ರಾರ್ಥನೆಯಿಂದ ಸಕಲ ಜೀವಿಗಳ ರಕ್ಷಕ ಭಗವಂತನ ಅನುಗ್ರಹದಿಂದ ವರುಣ ದೇವ ಕೃಪೆ ತೋರಿ ಸಕಲ ಜೀವರಾಶಿಗಳಿಗೆ ಒಳಿತನ್ನು ಕರುಣಿಸಲಿ ಎಂದರು.
ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ ಮಾತನಾಡಿ, ಜಾತ್ರೆ, ಉತ್ಸವಗಳು ಜನರಲ್ಲಿ ಧಾರ್ಮಿಕ ಭಾವನೆ ಹೆಚ್ಚಿಸಲು ಪೂರವಾಗಿವೆ. ಜಾತ್ರೆಗಳಿಂದ ಸೌಹಾರ್ದಭಾವ ಮೂಡುತ್ತದೆ ಎಂದರು.
ಮುಂಜಾನೆ ಗ್ರಾಮ ದೇವಿಗೆ ಮಲಪ್ರಭಾ ನದಿ ನೀರು ತಂದು ರುದ್ರಾಭಿಷೇಕ ನೆರವೇರಿಸಲಾಯಿತು. ಗದ್ದುಗೆ ಪೂಜೆ ಮಹಾ ಮಂಗಳಾರತಿ, ಪುಷ್ಪಾರ್ಚನೆ, ಕುಂಕುಮಾರ್ಚನೆ, ನೈವೇದ್ಯ ಜರುಗಿದವು.
ಸಾಯಂಕಾಲ ಪೂರ್ಣ ಸುಮಂಗಲೆಯರಿಂದ ಆರತಿ, ದೇವಿ ಪಲ್ಲಕ್ಕಿ ಉತ್ಸವದೊಂದಿದೆ ಸಕಲ ವಾದ್ಯ ಮೇಳಗಳು, ಪ್ರಮುಖ ಬೀದಿಗಳಲ್ಲಿ ಹಾದಿ ಬಸವೇಶ್ವರ ದೇವಸ್ಥಾನದಿಂದ ಗ್ರಾಮ ದೇವಿ ದೇವಸ್ಥಾನದವರೆಗೆ ಭಂಡಾರ ಎರಚುತ್ತ ಭವ್ಯ ಮೆರವಣಿಗೆ ನಡೆಯಿತು. ನಂತರ ಸಾಮೂಹಿಕವಾಗಿ ಗ್ರಾಮಸ್ಥರಿಂದ ಉಡಿ ತುಂಬಿದರು. ಈರಗಾರ ಮನೆತನದವರಿಂದ ಉಕ್ಕಿನ ಸರಪಳಿಯಿಂದ ಮೈಯಿಗೆ ಹೊಡೆದು ಕೊಳ್ಳುವ ಕಾರ್ಯಕ್ರಮದೊಂದಿಗೆ ಅನ್ನ ಪ್ರಸಾದ ನಡೆಯಿತು.
ಗ್ರಾಮ ದೇವಿ ಅಭಿವೃದ್ಧಿ ಸದಸ್ಯ ಶಂಕರಗೌಡ ಪಾಟೀಲ, ಬಾಬುಗೌಡ ಅಣ್ಣಿಗೇರಿ, ಬಸಪ್ಪ ಲಕ್ಕನ್ಮನವರ, ಈರ್ಪ ಹುದ್ದಾರ, ಅಪ್ಪಾಸಾಹೇಬ ಇಂಗಳೆ, ವಿರೇಶ ಉಪ್ಪಿನ, ದುಂಡಪ್ಪ ಹಂಜಿ, ರಾಜು ಪೂಜೇರ, ನಿಂಗಪ್ಪ ಕುಂಬಾರ, ನೀಲಕಂಠ ಸರದಾರ, ವೀರಭದ್ರ್ಪ ಬೆನಕಟ್ಟಿ, ಫಕ್ರುಸಾಭ ಬಾಗವಾನ, ಸಿದ್ದಪ್ಪ ಮಾದರ ಸೇರಿದಂತೆ ಇತರರು ಇದ್ದರು.