ದೂರದೃಷ್ಟಿಯ ಚಿಂತಕ ನೆಹರು: ಬಸವರಾಜ ಕರಜಗಿ
ಇಂಡಿ15: ಸ್ವತಂತ್ರ ಭಾರತಕ್ಕೆ ವಿಶ್ವ ಮಾನ್ಯತೆಯನ್ನು ತಂದು ಕೊಟ್ಟು ಅಲಿಪ್ತನೀತಿ, ಪಂಚಾಶೀಲ ತತ್ವಗಳ ಮೂಲಕ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಸೆದ ಶಿಲ್ಪಿ ಮಾಜಿ ಪ್ರಧಾನಿ ಜವಾಹಾರಲಾಲ್ ನೆಹರು ಅವರ ದೂರ ದೃಷ್ಟಿಯಿಂದ ಚಿಂತನೆಗಳ ಪುನರ್ಮನನ ಇಂದಿನ ಭಾರತಕ್ಕೆ ಅತೀ ಅವಶ್ಯಕವಾಗಿದೆ ಎಂದು ಕನ್ನಡ ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಕ್ಕಳ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ದಿನವು ನಮ್ಮಲ್ಲಿನ ಪ್ರತಿಯೊಬ್ಬರಿಗೂ ಮಕ್ಕಳ ಕಲ್ಯಾಣದ ಬಗೆಗಿನ ನಮ್ಮ ಬದ್ದತೆಯನ್ನು ಪುನರ್ ನವೀಕರಿಸಲು ನೆನಪು ಮಾಡುವುದು ಮತ್ತು ಮಕ್ಕಳಿಗೆ ಚಾಚಾ ನೆಹರುವಿನ ಆದರ್ಶದಂತೆ ಮತ್ತು ಅವರ ಮಾದರಿಯಲ್ಲಿ ಬದುಕಲು ಕಲಿಸುವದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಅರಿವನ್ನು ಮೂಡಿಸುವ ಸಲುವಾಗಿ ಭಾರತದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ.ಇಂದಿನ ಮಕ್ಕಳು ನಾಳಿನ ಭಾರತವನ್ನು ನಿರ್ಮಿಸುತ್ತಾರೆ. ನಾವು ಮಕ್ಕಳನ್ನು ಬೆಳೆಸುವ ವಿಧಾನ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ ಅಧ್ಯಕ್ಷತೆ ವಹಿಸಿದ್ದರು. ಟಿಜಿಟಿ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಾದ ಹುಸೇನಬಿ ಬಾಗವಾನ, ಜಕಿಯಾ ಬಾಗವಾನ, ಆಲಿಯಾ ಮಕಾನದಾರ,ಅಕಿಲ ಮಕಾನದಾರ, ಫರ್ಹಾನ್ ಮಕಾನದಾರ, ಗಜಾಲಾ ಬಾಗವಾನ,ಸನಾ ಅಂಗಡಿ,ಸಾಜಿದಾ ಬಾಗವಾನ, ಬಿಬಿಆಯಿಷಾ ಮುಲ್ಲಾ,ಸಾಲಿಯಾ ಬಾಗವಾನ,ವೇದಿಕೆಯ ಮೇಲೆ ಆಸೀನರಾಗಿದ್ದರು. ಎಸ್ಎಚ್ ಮೈದರಗಿ ಸ್ವಾಗತಿಸಿದರು. ಎನ್ ಬಿ ಚೌಧರಿ ನಿರೂಪಿಸಿದರು. ಎಸ್ ಬಿ ಹೆಬ್ಬಾಳ ವಂದಿಸಿದರು.