ಮತ್ತೂರಿನಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ
ಬ್ಯಾಡಗಿ, ಆ. 6: ಪ್ರತಿಯೊಬ್ಬ ಮಗುವಿಗೂ ಮೂಲಭೂತ ಹಕ್ಕುಗಳಿದ್ದು, ಅವುಗಳ ಉಲ್ಲಂಘನೆಯಾದರೆ ಧೈರ್ಯವಾಗಿ ಧ್ವನಿಯೆತ್ತಿ ಸಹಾಯ ಪಡೆಯಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಲೋಚಕ ರಮೇಶ್ ನಾಯ್ಕ್ ಹೇಳಿದರು. ತಾಲೂಕಿನ ಮತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಗುವಿಗೂ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿಯ ಹಕ್ಕು ಹಾಗೂ ಭಾಗವಹಿಸುವ ಹಕ್ಕುಗಳಿವೆ. ಈ ಹಕ್ಕುಗಳ ಬಗ್ಗೆ ಅರಿವು ಮೂಡಿದಾಗ ಮಾತ್ರ ಮಕ್ಕಳ ಸುರಕ್ಷಿತ ಹಾಗೂ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಕ್ಕಳಿಗೆ ಯಾವುದೇ ರೀತಿಯ ದೌರ್ಜನ್ಯ, ಶೋಷಣೆ ಅಥವಾ ಹಕ್ಕುಗಳ ಉಲ್ಲಂಘನೆ ನಡೆದರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ದೂರುದಾರರ ಹೆಸರು ಹಾಗೂ ಮಾಹಿತಿ ಗೌಪ್ಯವಾಗಿರಿಸಲಾಗುತ್ತಿದ್ದು, ಅಗತ್ಯ ರಕ್ಷಣೆ ಮತ್ತು ನೆರವು ಒದಗಿಸಲಾಗುತ್ತದೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಸಿದ್ದಪ್ಪ ಮಾಸಣಗಿ ಮಾತನಾಡಿ, ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶದ ಬಗ್ಗೆ ಪ್ರತಿಯೊಬ್ಬ ಮಗುವಿಗೂ ಅರಿವು ಇರಬೇಕು. ದೈಹಿಕ, ಮಾನಸಿಕ ಅಥವಾ ಲೈಂಗಿಕ ದೌರ್ಜನ್ಯ ಎದುರಾದರೆ ಪೋಷಕರು, ಆಪ್ತರು ಅಥವಾ ವಿಶ್ವಾಸಾರ್ಹ ಶಿಕ್ಷಕರಿಗೆ ತಕ್ಷಣ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಿರಂಜನ್ ಹಿರೇಮಠ ಮಾತನಾಡಿ, ಮಕ್ಕಳ ಸಮಸ್ಯೆಗಳ ಪರಿಹಾರಕ್ಕೆ ವಿವಿಧ ಇಲಾಖೆಗಳು, ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಕ್ಕಳ ಹಕ್ಕುಗಳ ಸಮರ್ಕ ರಕ್ಷಣೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಆರಿ್ಡ. ಮಾಸಣಗಿ, ಆರ್.ಎನ್. ದೊಡ್ಡಮ್ಮನವರ, ವಿ.ಎಸ್. ಅರಳಿ, ವೈ.ಎಚ್. ನ್ಯಾಮತಿ, ರಮ್ಯಾ ಆರ್., ಸುಭದ್ರಾ ವಿ. ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.