ಚಿಕ್ಕೋಡಿ: ಪತ್ರಿಕಾ ದಿನಾಚರಣೆ ಕಾರ್ಯಕ್ರಮ
ಚಿಕ್ಕೋಡಿ 02: ಪತ್ರಿಕೋದ್ಯಮ ಬಹಳ ಪವಿತ್ರವಾಗಿರುವ ವೃತ್ತಿಯಾಗಿದ್ದು, ಪತ್ರಕರ್ತನಾದವನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಸುದ್ದಿಯನ್ನು ಕೊಡಬೇಕಾಗುತ್ತದೆ. ಹೀಗಿದ್ದರೂ ಕೂಡ ಈ ವೃತ್ತಿಯಲ್ಲಿ ಸಮಾಜ ಸೇವೆ ಮಾಡಿದ ತೃಪ್ತಿ ದೊರೆಯುತ್ತದೆ. ಇದೀಗ ಸಾಮಾಜಿಕ ಜಾಲತಾಣ ಸಾಕಷ್ಟು ಬೆಳೆದಿದ್ದರಿಂದ ಪತ್ರಿಕೆಗಳು ಜಾಣ ನಡೆಯನ್ನು ಅನುಸರಿಸಿ ಬೆಳೆಯಬೇಕಿದೆ ಎಂದು ಯುವ ಪತ್ರಕರ್ತೆ ಕುಮಾರಿ ಶಾಹಿನ್ ಮೊಕಾಶಿ ಹೇಳಿದರು.
ಎ ಎ ಪಾಟೀಲ ಮಹಿಳಾ ಮಹಾವಿದ್ಯಾಲಯ ಹಾಗೂ ಚಿಕ್ಕೋಡಿಯ ಉನ್ನತಿ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ವಿವಿಧ ಕನ್ನಡ ದಿನಪತ್ರಿಕೆಗಳ ಮುಖಪುಟದ ಹೆಡ್ ಲೈನ್ ಓದುವ ಮೂಲಕ ಉದ್ಘಾಟಿಸಿ ಮಾತನಾಡಿ, ಚಿಕ್ಕೋಡಿಯಂತಹ ಪ್ರದೇಶದಲ್ಲಿ ಪತ್ರಿಕೋದ್ಯಮ ಬೆಳೆಯಬೇಕಿದೆ. ಅದರಲ್ಲೂ ಯುವತಿಯರು ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಲ್ಲಿ ಮಹಿಳಾ ಸಂವೇದನೆಗಳನ್ನು ಪ್ರಚುರ ಪಡಿಸಲು ಸಾಧ್ಯವಾಗುತ್ತದೆ. ಪತ್ರಕರ್ತರಾದವರು ಎದೆಗುಂದದರೆ ವರದಿಗಾರಿಕೆ ಮಾಡುವುದನ್ನು ಕರಗತ ಮಾಡಿಕೊಂಡಿರುತ್ತಾರೆ. ಏನೆ ಸಮಸ್ಯೆ ಬಂದರೂ ಎದುರಿಸುವ ಎದೆಗಾರಿಕೆ ಪತ್ರಕರ್ತರಲ್ಲಿ ಇರುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉನ್ನತಿ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ವಿಮಲಾ ಚಿನಕೇಕರ ಮಾತನಾಡಿ, ಉನ್ನತಿ ಸ್ವಯಂ ಸೇವಾ ಸಂಸ್ಥೆಯು ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿಯ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರಲ್ಲಿ ಧೈರ್ಯ ಸ್ತೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದು, ಇದಕ್ಕೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಹಕಾರ ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಎ ಎ ಪಾಟೀಲ ಮಹಿಳಾ ಮಹಾವಿದ್ಯಾಲಯದ ಕ್ರೀಢಾ ವಿಭಾಗದ ಮುಖ್ಯಸ್ಥ ವಿ ಟಿ ಬಿಕ್ಕನ್ನವರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕ ಎಲ್ ಎಸ್ ಪಡತಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಲ್ಲವಿ ಮಠಪತಿ ಸ್ವಾಗತಿಸಿದರು. ಪ್ರತಿಭಾ ಬನಗೊಂಡ ನಿರೂಪಿಸಿದರು. ದರ್ಶನಿ ಬತ್ತೆ ವಂದಿಸಿದರು.