ಉಪಕೇಂದ್ರ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚನೆ
ಚೆಂಡಿಯಾ ವಿದ್ಯುತ್ ಉಪಕೇಂದ್ರಕ್ಕೆ ಅನುದಾನ ನೀಡಲು ಮುಖ್ಯಮಂತ್ರಿಗೆ ಮನವಿ ಮಾಡಿದ ರೂಪಾಲಿ ಎಸ್.ನಾಯ್ಕ.
ಕಾರವಾರ 23: ಕಾರವಾರ ತಾಲೂಕಿನ ವಿದ್ಯುತ್ ಸಮಸ್ಯೆ ನೀಗಿಸಲು ಚೆಂಡಿಯಾದಲ್ಲಿ 110-33 ಕೆ.ವಿ.ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಅವರ ಮನವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕಾರವಾರಕ್ಕೆ ಕದ್ರಾದಿಂದ ವಿದ್ಯುತ್ ಪೂರೈಕೆಯಾಗುತ್ತಿದೆ. ವಿದ್ಯುತ್ ಮಾರ್ಗ ದಟ್ಟವಾದ ಅರಣ್ಯದಲ್ಲಿ ಹಾದುಹೋಗಿ ಶೇಜವಾಡ ವಿದ್ಯುತ್ ಕೇಂದ್ರದಿಂದ ಎಲ್ಲ ಉಪ ಕೇಂದ್ರಗಳಿಗೆ ಪೂರೈಕೆಯಾಗುತ್ತಿದೆ. ಕೋಣೆ ವಿದ್ಯುತ್ ಉಪಕೇಂದ್ರದಿಂದ ಕಾರವಾರ ನಗರ, ಚಿತ್ತಾಕುಲ, ಅರಗಾ, ಚೆಂಡಿಯಾ, ತೊಡೂರು, ಅಮದಳ್ಳಿ, ಮುದಗಾ ಗ್ರಾಮಗಳಿಗೆ ಪೂರೈಕೆಯಾಗುತ್ತಿದೆ. ಕೋಣೆ ವಿದ್ಯುತ್ ಉಪಕೇಂದ್ರದಲ್ಲಿ 7 ಫೀಡರ್ ಗಳು ಕಾರ್ಯನಿರ್ವಹಿಸುತ್ತಿವೆ. ಈ ಉಪಕೇಂದ್ರಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ಇದರಿಂದ ಅಮದಳ್ಳಿ, ಚೆಂಡಿಯಾ, ಮುದಗಾ, ತೊಡೂರು ಮತ್ತಿತರ ಕಡೆಗಳಲ್ಲಿ ವಿದ್ಯುತ್ ಸಮರ್ಕವಾಗಿ ಪೂರೈಕೆಯಾಗುತ್ತಿಲ್ಲ. ದಿನಕ್ಕೆ 8-10 ಗಂಟೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಕಾರವಾರ ತಾಲೂಕು ಇಡಿ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡುತ್ತಿದ್ದರೂ ನಮ್ಮ ತಾಲೂಕಿನಲ್ಲೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.
ಈ ಸಮಸ್ಯೆ ನಿವಾರಿಸಲು ಚೆಂಡಿಯಾದಲ್ಲಿ ಹಾದುಹೋಗಿರುವ 110 ಕೆವಿ ವಿದ್ಯುತ್ ಮಾರ್ಗ ಬಳಸಿಕೊಂಡು 110-33 ಕೆ.ವಿ. ವಿದ್ಯುತ್ ಉಪ ಕೇಂದ್ರ ನಿರ್ಮಿಸಬೇಕಾಗಿದೆ. ಇದರಿಂದ ಚೆಂಡಿಯಾ, ಅರಗಾ, ಅಮದಳ್ಳಿ, ತೊಡೂರು, ಬಿಣಗಾ, ಅರಗಾ, ಮುದಗಾ ಮತ್ತಿತರ ಗ್ರಾಮಗಳಿಗೆ ಸಮರ್ಕವಾಗಿ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಿದೆ. ಕಾರಣ ಚೆಂಡಿಯಾದಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಶಾಸಕರಾದ ಶ್ರೀಮತಿ ರೂಪಾಲಿ ಎಸ್.ನಾಯ್ಕ, ಮುಖ್ಯಮಂತ್ರಿ ಯಡಿಯೂರ್ಪ ಅವರನ್ನು ವಿನಂತಿಸಿದ್ದರು.
ಕಾರವಾರ ನಗರದಲ್ಲೂ ಮೇಲಿಂದ ಮೇಲೆ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ನಗರದಲ್ಲೂ ವಿದ್ಯುತ್ ಉಪ ಕೇಂದ್ರ ನಿರ್ಮಿಸಿದಲ್ಲಿ ಸಮಸ್ಯೆ ನಿವಾರಣೆಯಾಗಲಿದೆ. ನಗರದಲ್ಲಿ ವಿದ್ಯುತ್ ಕೇಂದ್ರ ನಿರ್ಮಾಣಕ್ಕೂ ಪ್ರಕ್ರಿಯೆ ನಡೆಯುತ್ತಿದೆ. ಚಿತ್ತಾಕುಲ, ಸದಾಶಿವಗಡ, ಮಾಜಾಳಿ ಮತ್ತಿತರ ಗ್ರಾಮಗಳಲ್ಲಿ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆ ನಿವಾರಣೆಗೆ ಶಾಸಕರು ರೂಪಾಲಿ ಪ್ರಯತ್ನಿಸುತ್ತಿದ್ದು, ಚಿತ್ತಾಕುಲದಲ್ಲಿ ಜಾಗದ ಸಮಸ್ಯೆಯಿಂದ ಉಪಕೇಂದ್ರಕ್ಕೆ ತೊಡಕಾಗಿತ್ತು. ಆ ಸಮಸ್ಯೆ ಈಗ ಬಗೆಹರಿಯುತ್ತಿದ್ದು, ಸದ್ಯದಲ್ಲಿಯೇ ಚಿತ್ತಾಕುಲದಲ್ಲಿ ಉಪಕೇಂದ್ರ ನಿರ್ಮಾಣವಾಗಿ ಆ ಪ್ರದೇಶದಲ್ಲೂ ಸಮರ್ಕವಾಗಿ ವಿದ್ಯುತ್ ಪೂರೈಕೆ ಆಗಲಿದೆ.