ಕೋವಿಡ್-19 ತಡೆಗಾಗಿ ಜಿಲ್ಲೆಯ ಕೆಲವಡೆ ಚೆಕ್ಪೋಸ್ಟ್ಗಳ ಸ್ಥಾಪನೆ
ಕಾರವಾರ 19: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಅಂತರಾಜ್ಯಗಡಿ ಹೊಂದಿರುವ ಮತ್ತು ಜನದಟ್ಟಣೆ ಇರುವಂತಹ ಪ್ರದೇಶಗಳಾದ ಮಾಜಾಳಿ, ಚಿತ್ತಾಕುಲಾ, ಅನಮೋಡ, ರಾಮನಗರ, ಗೋಕರ್ಣ, ಕುಮಟಾ, ಮುರ್ಡೇಶ್ವರ ಹಾಗೂ ಭಟ್ಕಳದಲ್ಲಿ ಚೆಕ್ಪೋಸ್ಟ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದ್ದಾರೆ.
ರಾಜ್ಯ ಸರಕಾರ ಕೇರಳ ಮತ್ತು ಮಹರಾಷ್ಟ್ರಗಳಿಂದ ಬರುವವರಿಗೆ ಆರ್ಟಿಪಿಸಿಆರ್ ನೆಗಟಿವ್ ಪರೀಕ್ಷಾ ವರದಿ ತರುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಆರ್ಟಿಪಿಸಿಆರ್ ನೆಗಟಿವ್ ಪರೀಕ್ಷಾ ವರದಿಯನ್ನು ಪರಿಶೀಲಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಜನರನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಲು ಹಾಗೂ ಆರ್ಟಿಪಿಸಿಆರ್ ನೆಗಟಿವ್ ಪರೀಕ್ಷಾ ವರದಿ ತಂದವರಿಗೆ ಮಾತ್ರ ಪ್ರವೇಶ ನೀಡಲಾಗುವುದೆಂದು ತಮ್ಮ ಅಧಿಕೃತ ಜ್ಞಾಪನಾ ಪತ್ರದಲ್ಲಿ ಅವರು ಹೇಳಿದ್ದಾರೆ.
ಒಂದು ವೇಳೆ ತಪಾಸಣಾ ವರದಿ ಇಲ್ಲದಿದ್ದಲ್ಲಿ ಅಂತವರನ್ನು ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಆರ್ಎಟಿಗೆ ಒಳಪಡಿಸಿ ವರದಿ ನೆಗಟಿವ್ ಬಂದರೆ ಮಾತ್ರ ಜಿಲ್ಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ವರದಿ ಪಾಸಿಟಿವ್ ಬಂದರೆ ಅಂತವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮವಹಿಸಬೇಕು. ಜೊತೆಗೆ ಪ್ರತಿ ಚೆಕ್ಪೋಸ್ಟ್ನಲ್ಲಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.