ಬ್ಯಾಡ್ಗಿ

ಸ್ವಸಹಾಯ ಸಂಘಗಳ ರಚನೆ ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆ: ಡಾ. ಸೋಮಶೇಖರ ಶಿವಾಚಾರ್ಯ ಶ್ರೀ

ಸ್ವಸಹಾಯ ಸಂಘಗಳ ರಚನೆ ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆ: ಡಾ. ಸೋಮಶೇಖರ ಶಿವಾಚಾರ್ಯ  ಶ್ರೀ

ಬ್ಯಾಡಗಿ 06: ಗ್ರಾಮೀಣ ಭಾಗದ ಜನತೆ ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆ ನೀಡುವ ಸದುದ್ದೇಶದಿಂದ ಸ್ವಸಹಾಯ ಸಂಘಗಳ ರಚನೆಯ ಮೂಲಕ ಆರ್ಥಿಕ ಸದೃಢತೆಯನ್ನು ಸಾಧಿಸಲು ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಸಹಾಯ ಧನವನ್ನು ನೀಡಲಾಗುತ್ತಿದೆ ಎಂದು ಪುಷ್ಪಗಿರಿ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಅತ್ತಿಕಟ್ಟಿ ಗ್ರಾಮದ ಬಸವೇಶ್ವರ ಸ್ವಾಮಿಯ ಜಾತ್ರೆಯ ಅಂಗವಾಗಿ ನಡೆದ ಧಾರ್ಮಿಕ ಸಭೆ ಹಾಗೂ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಣೆ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ಅತಿಥಿಯಾಗಿ ಆಗಮಿಸಿದ್ದ ಚಿತ್ರನಟ ದೊಡ್ಡಣ್ಣ ಅವರು ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಪುಷ್ಪಗಿರಿ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿ ಗದ್ದುಗೆ ಏರಿದ ಸ್ವಾಮೀಜಿಯವರು "ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದಿದೆ ಎಂಬಂತೆ ಸಣ್ಣ ವಯಸ್ಸಿನಲ್ಲಿಯೇ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅವರು ಸಾಧನೆಗಳನ್ನು ತಾವು ಕಣ್ಣಾರೆ ಕಂಡಿದ್ದು, ಅದರ ಬಗ್ಗೆ ಮಾತನಾಡಲು ನಮಗೆ ಬಹಳಷ್ಟು ಹೆಮ್ಮೆಯಾಗುತ್ತದೆ ಎಂದರಲ್ಲದೇ ಅವರ ಮಾರ್ಗದರ್ಶನದಲ್ಲಿ ನಡೆಸುತ್ತಿರುವ ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹಧನ ಚೆಕ್ ವಿತರಿಸುತ್ತಿರುವುದು ಬಹು ಸಂತಸದ ವಿಷಯವೆಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಿಮಿಕ್ರಿ ಕಲಾವಿದ ಗೋಪಿ ಮತ್ತು ಸಂಗಡಿಗರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಅಲ್ಲದೆ ಸ್ಥಳಿಯ ಕಲಾವಿದರಿಂದ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಹರಿಹರ ತಾಲೂಕಿನ ಯಳವಟ್ಟಿ ಶ್ರೀಮಠದ ಯೋಗಾನಂದ ಸ್ವಾಮೀಜಿ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಮುಖಂಡರಾದ ಜಗದೀಶ ಕಣಗಲಬಾವಿ, ಪ್ರಭು ದೊಡ್ಡಮನಿ, ಎಸ್.ಎನ್. ಕೆಂಪಗೊಂಡರ, ಸಂಸ್ಥೆಯ ಶಿವಮೊಗ್ಗ ಜಿಲ್ಲಾ ನಿರ್ದೇಶಕ ಪರಶುರಾಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ