ಚಂದ್ರಯಾನ-3 ಯಶಸ್ವಿ: ಬೆಟಗೇರಿ ಗ್ರಾಮಸ್ಥರಿಂದ ಸಂಭ್ರಮಾಚರಣೆ
ಬೆಟಗೇರಿ 24: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಬುಧವಾರದಂದು ಯಶಸ್ವಿಯಾಗಿ ಚಂದ್ರನ ಅಂಗಳವನ್ನು ಸ್ಪರ್ಶಿಸಿದ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರು, ಯುವಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸ್ಥಳೀಯ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಮಾತನಾಡಿ, ಚಂದ್ರಯಾನ-3 ವಿಕ್ರಮ ಲ್ಯಾಂಡರ್ ನಿಗದಿತ ಸಮಯದಲ್ಲಿ ಆ.23ರಂದು ಸಂಜೆ 6:04ಕ್ಕೆ ಚಂದ್ರನ ದಕ್ಷಿಣ ದ್ರುವವನ್ನು ಸ್ಪರ್ಶಿಸಿದೆ. ಈ ಮೂಲಕ ಇಸ್ರೋ ವಿಜ್ಞಾನಿಗಳ ಹಾಗೂ ಕೋಟ್ಯಾಂತರ ಭಾರತೀಯರ ಚಂದ್ರಯಾನ-3 ಕನಸು ನನಸಾಗಿದೆ ಎಂದರು.
ಬೆಟಗೇರಿ ಗ್ರಾಮದ ಮನೆ, ಮೊಬೈಲ್ಗಳಲ್ಲಿ ಚಂದ್ರಯಾನ-3 ಕುರಿತು ವಿಕ್ಷಣೆ ಮಾಡುತ್ತಿದ್ದ ಸ್ಥಳೀಯ ಗ್ರಾಮಸ್ಥರು, ಯುವಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳವನ್ನು ಸ್ಪರ್ಶಿಸುತ್ತಿದ್ದಂತೆ ಇಸ್ರೋ ವಿಜ್ಞಾನಿಗಳಿಗೆ ಚಪ್ಪಾಳೆ ತಟ್ಟಿ, ಭಾರತ ಮಾತಾ ಕಿ ಜೈ ಎನ್ನುತ್ತಾ ಹರ್ಷೋದ್ಗಾರದ ಮೂಲಕ ಅಭಿನಂದನೆ ಸಲ್ಲಿಸಿದರು. ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಟ್ಟು ಸ್ಥಾಪಿಸಿದೆ ಭಾರತದ ಹಾಗೂ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಸ್ಥಳೀಯರು ಶ್ಲಾಘಿಸಿದರು.
ಸ್ಥಳೀಯ ಹಿರಿಯ ನಾಗರಿಕರು, ಯುವಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಕ್ಕಳು ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಟಗೇರಿ: ಗ್ರಾಮದ ಅಂಬೇಡ್ಕರ ವೃತ್ತದಲ್ಲಿ ಗ್ರಾಮಸ್ಥರು, ಯುವಕರು ಪಟಾಕಿ ಸಿಡಿಸುತ್ತಿರುವದು.