ಕಾಂಗ್ರೆಸ್ನಲ್ಲಿ 20 ವರ್ಷದಿಂದ ಹೋರಾಟಗಾರನಾಗಿಯೇ ಉಳಿದೆ ;
ನನಗೆ ಏನೂ ಸಿಗಲಿಲ್ಲ ; ಹಾಗಾಗಿ ಬಿಜೆಪಿಗೆ ಬಂದೆ ' ; ಚಲವಾದಿ ನಾರಾಯಣ ಸ್ವಾಮಿ ಟೀಕೆ
ಕಾರವಾರ 03: ಕಾಂಗ್ರೆಸ್ನಲ್ಲಿ ನಾನು 20 ವರ್ಷಗಳ ಕಾಲ ಹೋರಾಟಗಾರನಾಗೇ ಉಳಿದುಬಿಟ್ಟೆ. ಹೀಗಾಗಿ ನನ್ನನ್ನು ಅಲ್ಲಿ ತುಳಿದರು. ಕಾಂಗ್ರೆಸ್ನಲ್ಲಿ ಓರ್ವ ದಲಿತನನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲು 70 ವರ್ಷ ತೆಗೆದುಕೊಂಡರು. ಪರಮೇಶ್ವರ್ ಅವರು ತುಂಬಿದ ಸಭೆಯಲ್ಲಿ ಕಣ್ಣೀರು ಹಾಕಿ ಕೇಳಿದರೂ ಕೊಟ್ಟಿರಲಿಲ್ಲ. ಹೀಗಾಗಿ ಕಾಂಗ್ರೆಸ್ನಲ್ಲಿ ಭವಿಷ್ಯ ಇಲ್ಲವೆಂದು, ದಲಿತ ಸಮುದಾಯದ ಏಳ್ಗೆಗಾಗಿ ಅವರನ್ನು ವಿರೋಧಿಸಿ ಬಿಜೆಪಿಗೆ ಬಂದೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 70 ವರ್ಷ ದಲಿತರನ್ನು ಮತದಾರರನ್ನಾಗಿ ಮಾಡಿಕೊಂಡಿತು. ದೊಡ್ಡ ದೊಡ್ಡ ನಾಯಕರು ತಮಗೆ ಮುಖ್ಯಮಂತ್ರಿ ಸ್ಥಾನ ಬೇಕು ಎಂದು ಕೇಳಿಕೊಂಡರು. ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂಬ ನಮ್ಮ ಒತ್ತಾಯವೂ ಇತ್ತು. ಆದರೆ ಕಾಂಗ್ರೆಸ್ನ ಮುಖಂಡರು ದಲಿತರ ವೋಟ್ ಬ್ಯಾಂಕ್ ಅನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು, ಅವರನ್ನು ತಮ್ಮ ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿ ಸಂಪೂರ್ಣವಾಗಿ ಎಕ್ಸ್ಪೋಸ್ ಆಗಿದ್ದಾರೆ. ಬಿಜೆಪಿ ದಲಿತರಿಗೆ ಗೌರವ ಕೊಡುತ್ತದೆ ಹೊರತು ಅವರಿಗೆ ಅನ್ಯಾಯ ಮಾಡುವುದಿಲ್ಲ. ಕಾಂಗ್ರೆಸ್ನವರು ತಪ್ಪು ಅಭಿಪ್ರಾಯ ಮೂಡಿಸುವ ಕುತಂತ್ರಗಳನ್ನು ಮಾಡಬಾರದು. ದಲಿತರಿಗೆ ನ್ಯಾಯ ಕೊಡಿಸಲಿಕ್ಕೆ ಸಾಧ್ಯವಿದ್ದರೆ ಅದು ಬಿಜೆಪಿಯಿಂದ ಮಾತ್ರ. ಇದಕ್ಕೆಲ್ಲ ತಾರ್ಕಿಕ ಅಂತ್ಯ ಕಾಣುವುದಿದ್ದರೆ ಅದು ನಮ್ಮ ಸರ್ಕಾರದ ಅವಧಿಯಲ್ಲಿ ಮಾತ್ರ. ದಲಿತರ ವಿಚಾರದಲ್ಲಿ ಬಿಜೆಪಿಗೆ ಹೆಚ್ಚಿನ ಕಾಳಜಿ ಇದೆ ಎಂದರು.
ಯಾವ ಜಾತಿಯವರು ಎಷ್ಟಿದ್ದಾರೆ ಎಂಬ ಸತ್ಯ ಹೊರ ಬರಲೇಬೇಕು : ಜಾತಿ ಗಣತಿಯನ್ನು ಬಿಜೆಪಿ ಸರ್ಕಾರ ಈವರೆಗೆ ಯಾಕೆ ಬಹಿರಂಗಪಡಿಸಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಜಾತಿ ಎಷ್ಟಿದೆ ಎನ್ನುವುದು ಸತ್ಯ. ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಆಯಾ ಜಾತಿಗಳು ನಾವು ಹೆಚ್ಚು ನಾವು ಹೆಚ್ಚು ಎನ್ನುತ್ತವೆ. ಸತ್ಯ ಯಾವತ್ತಿದ್ರೂ ಹೊರ ಬರಲೇ ಬೇಕು. ಜಾತಿ ಗಣತಿ ಮಾಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಅವರಿಗೆ ಅದನ್ನು ಬಿಡುಗಡೆ ಮಾಡಲು ಎರಡು ವರ್ಷಗಳ ಅವಧಿ ಇತ್ತು. ಆದರೂ ಅವರು ಅದನ್ನು ಹೊರತರದಿರುವುದಕ್ಕೆ ಕಾರಣವೇನು? ದೋಷ ಇರುವುದು ಅವರ ಕಡೆಯಲ್ಲಿ, ನಮ್ಮಲ್ಲಲ್ಲ. ತಾವು ಮಾಡಲಾಗದ್ದನ್ನ ತಾಕತ್ತಿದ್ದರೆ ನೀವು ಹೊರ ತನ್ನಿ ಎಂದು ಈಗ ಹೇಳುತ್ತಿದ್ದಾರೆ. ಸದಾಶಿವ ಆಯೋಗದ ವರದಿಯನ್ನೂ ಜಗದೀಶ್ ಶೆಟ್ಟರ್ ಕಾಲದಲ್ಲಿ ಕೊಟ್ಟರು. ಅವರ ನಂತರ ಆರೂವರೆ ವರ್ಷಗಳ ಕಾಲ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರಕಾರವಿದ್ದರೂ ವರದಿ ಜಾರಿಗೆ ತಂದಿಲ್ಲ. ಈಗ ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ಇವರು ನಮ್ಮ ತಾಕತ್ತು ನೋಡಲು ಮಾತ್ರ ಇರುವುದಾ? ಎಂದು ಪ್ರಶ್ನಿಸಿದ್ದಾರೆ.
ಸಿಡಿ ಪ್ರಕರಣದಲ್ಲಿರುವ ಇಬ್ಬರೂ ದಲಿತರೇ!! ;
ಜಾರಕಿಹೊಳಿ ಸಿಡಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಚಲವಾದಿ ನಾರಾಯಣ ಸ್ವಾಮಿ, ಈ ಪ್ರಕರಣದಲ್ಲಿ ಮೊದಲು ಆಕೆಯನ್ನು ಕೇವಲ ಯುವತಿ ಎನ್ನಲಾಯಿತು; ನಂತರ ದಲಿತ ಮಹಿಳೆ ಎಂದಾಯಿತು. ಮಾಡಿದವರೂ ದಲಿತರೇ! ಇಬ್ಬರೂ ದಲಿತರೇ. ಅವರ ನಡುವೆ ಒಡಂಬಡಿಕೆ ಇತ್ತು ಎನ್ನಲಾಗುತ್ತಿದೆ. ಎಸ್ಐಟಿಯಲ್ಲಿ ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ. ಆಕೆ ಕೂಡ ಹೇಳಿಕೆ ಕೊಟ್ಟಿದ್ದಾಳೆ. ಹೀಗಾಗಿ ಇದನ್ನು ದಾರಿ ತಪ್ಪಿಸುವುದು ಬೇಡ. ಸತ್ಯಾಸತ್ಯತೆ ಹೊರಬರಬೇಕು ಎಂದು ಅವರು ಆಗ್ರಹಿಸಿದರು. 2019 ರಿಂದ ಇಂಥ ಪ್ರಕರಣಗಳು ನಡೆಯುತ್ತಿದ್ದು, ಅಲ್ಲಿಂದಲೂ 2021ರವರೆರಗೆ ಕೇವಲ ಅತ್ಯಾಚಾರವೇ ನಡೆಯಿತಾ ಎನ್ನುವುದು ಈಗ ಪ್ರಶ್ನೆಯಾಗಿದೆ. ಒಬ್ಬ ವ್ಯಕ್ತಿ ವ್ಯಕ್ತಿಯ ನಡುವೆ ಏನು ಸಂಬಂಧ ಬೇಕಾದರೂ ಇರಬಹುದು. ಅದು ವೈಯಕ್ತಿಕ. ರಾಜಕೀಯ ಕಾರಣಗಳಿಗೆ ತಿರುಗಿಸಿಕೊಂಡಾಗ ಪರಿಸ್ಥಿತಿ ಬೇರೆ ಆಗುತ್ತದೆ ಎಂದು ಅವರು ಹೇಳಿದರು.