ಸಂಭ್ರಮದ ದುರ್ಗಾಮಾತಾ ದೌಡ: ವಿವಿಧ ಸ್ಪರ್ಧೆ




ಸಂಕೇಶ್ವರ 20: ದಸರಾ ಹಬ್ಬದ ನವರಾತ್ರಿ ಪ್ರಯುಕ್ತ ಶಕ್ತಿ ದೇವತೆ ದುರ್ಗಾಮಾತೆಯ ಮೂರ್ತಿಗಳ ಪ್ರತಿಷ್ಠಾಪನೆಗೊಂಡಾಗಿನಿಂದ ನಗರದಲ್ಲಿ ಸಡಗರ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ. ರಾತ್ರಿ 11 ಗಂಟೆಯವರೆಗೆ ನಗರದಲ್ಲಿ ಸುಮಾರು 27 ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಇಲ್ಲಿ ಧಾರ್ಮಿಕ ಪೂಜೆ, ಯಜ್ಞ ಹೋಮ ಹವನಗಳು ನಡೆದಿವೆ. ರಾತ್ರಿ ಕೋಲಾಟ ಯುವಕರ ಯುವತಿಯರು ಸೇರಿ ಕೋಲಾಟ ಆಡುವ ದೃಶ್ಯಗಳು ಜನತೆಯನ್ನು ಆಕರ್ಷಿತಗೊಳಸುತ್ತಿವೆ. ಮಡ್ಡಿಗಲ್ಲಿ ಮತ್ತು ಹೊಸ ಓಣಿಯ ದುರ್ಗಾಮಾತಾ ಇಲ್ಲಿಯವರೆಗೆ ಪ್ರತಿಷ್ಠಾಪನೆಗೊಂಡು ಈ ವರ್ಷ ಬೆಳ್ಳಿ ಹಬ್ಬವನ್ನು ಆಚರಿಸುತ್ತಿವೆ. ಅಂಕಲಿ ವೇಸ್, ಬಣ್ಣದ ಚಾವಡಿ ಮುಂತಾದ ಸ್ಥಳಗಳಲ್ಲಿ ದುರ್ಗಾಮಾತೆಯ ಮೂರ್ತಿಗಳು ಆಕರ್ಷಣೀಯವಾಗಿವೆ. ಬೆಳಿಗ್ಗೆ 6 ಗಂಟೆಗೆ ಶಂಕರಲಿಂಗ ಮಠದಿಂದ ದುರ್ಗಾಮಾತೆಯ ದೌಡ (ಓಟ) ಯುವಕ ಯುವತಿಯರು ಇದರಲ್ಲಿ ಪಾಲ್ಗೊಂಡು ನಗರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಎಲ್ಲ 27 ದುರ್ಗಾಮಾತೆಯ ಸ್ಥಳಗಳಿಗೆ ತೆರಳಿ ಜಯ ಮಾತಾಜಿ ಎಂಬ ಘೋಷಣೆಗಳೊಂದಿಗೆ ನಗರದಲ್ಲಿ ಸಂಚರಿಸುತ್ತವೆ. ದೌಡ ಕಾರ್ಯಕ್ರಮದಲ್ಲಿ ಜಯಪ್ರಕಾಶ ಸಾವಂತ, ಸುಭಾಷ ಕಾಸರಕರ, ಅಮೊಲ ಗೊಂಧಳಿ, ಸಮೀರ ಪಾಟೀಲ, ವಾಳಕಿ ಮೊದಲಾದವರು ಭಾಗವಹಿಸಿದ್ದರು.
ಧರ್ಮ ಹಾಗೂ ಶಾಂತಿಯ ಪ್ರತೀಕವಾಗಿರುವ ಈ ದುರ್ಗಾಮಾತಾ ದೌಡ ನಡೆಯುತ್ತದೆ. ನವರಾತ್ರಿ ಹಬ್ಬದ ಪ್ರಯುಕ್ತವಾಗಿ ರಂಗೋಲಿ ಸ್ಪರ್ಧೆ, ಕೋಲಾಟ ಸ್ಪರ್ಧೆ, ವೇಷಭೂಷಣ, 1 ನಿಮಿಷ ಶೋ, ಭಾಷಣ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ, ಪಕ್ಷಿ ಪ್ರಾಣಿಗಳ ಧ್ವನಿ ಅನುಕರಿಸುವುದು ಮುಂತಾದ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರತಿನಿತ್ಯ ಬೆಳಗ್ಗೆ ಸೂರ್ಯೋದಯಕ್ಕಿಂತ ಪೂರ್ವದಲ್ಲಿ ಬಾಹ್ಮೀ ಮುಹೂರ್ತದಲ್ಲಿ ಸುಮಂಗಲೆಯರು ಸ್ನಾನ ಕರ್ಮಗಳನ್ನು ಮುಗಿಸಿ ಆರತಿ ಹಿಡಿದು ಕಾಳಿಕಾದೇವಿಯ ದರ್ಶನ ಪಡೆದು ಬನ್ನಿ ಮರಕ್ಕೆ ಪೂಜೆ ಮಾಡುತ್ತಿರುವುದು ಕಂಡು ಬರುತ್ತದೆ.