ಜಾತಿ ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ಮಾರಕ: ನಡಹಳ್ಳಿ
ತಾಳಿಕೋಟೆ17: ಜಗತ್ತಿನ ಶ್ರೇಷ್ಠವಾದ ಪ್ರಜಾಪ್ರಭುತ್ವ ಆಡಳಿತ ನಮ್ಮ ದೇಶದಲ್ಲಿದೆ. ದೇಶಕ್ಕಿಂತ ದೊಡ್ಡದು ಯಾವುದು ಇಲ್ಲ. ಧರ್ಮ, ಜಾತಿಯನ್ನು ಜಾಗೃತಿ ಮಾಡಿದಷ್ಟು ದೇಶಾಭಿಮಾನದ ಜಾಗೃತಿ ಮಾಡಿಲ್ಲ. ಧರ್ಮ ಮತ್ತು ಜಾತಿಯ ಆಧಾರದಲ್ಲಿ ದೇಶವನ್ನು ಒಡೆಯುತ್ತಿರುವದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಮುದ್ದೇಬಿಹಾಳ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ವಿಠ್ಠಲ ಮಂದಿರ ಆವರಣದಲ್ಲಿ ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ನಡೆದ ಸ್ವಾತಂತ್ರ್ಯ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವ ದೇಶ ಸಂಸ್ಕೃತಿ ಮತ್ತು ಸಂಸ್ಕಾರ ಮರೆಯುತ್ತದೆಯೋ ಅಂತಹ ದೇಶ ವಿನಾಶದಂಚಿಗೆ ತಲುಪಲಿದೆ. ಹಿಗಾಗಿ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿಕೊಳ್ಳಬೇಕಾಗಿದೆ. ನಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಭಾರತೀಯರಾಗಬೇಕು. ಜಾತಿ ವ್ಯವಸ್ಥೆ ಹೋಗಲಾಡಿಸಿದಾಗ ಮಾತ್ರ ನಾವೆಲ್ಲಾ ಒಂದೇ ಎನ್ನುವ ಅಭಿಪ್ರಾಯ ಮೂಡುತ್ತದೆ.
ಕುತಂತ್ರಿಗಳು ದೇಶ ಪ್ರೇಮಿಗಳ ಸಾವಿಗೆ ಕಾರಣವಾಗಿದ್ದಾರೆ. ಜಗತ್ತಿನ ಯಾವ ರಾಷ್ಟ್ರಗಳಲ್ಲಿಯೂ ಸಹ ಇರದ ಸಂಪತ್ತು ನಮ್ಮ ದೇಶದಲ್ಲಿದೆ. ಪುರ್ವಜರು 75 ವರ್ಷ ದೇಶವನ್ನು ನಡೆಸಿಕೊಂಡು ಬಂದಿದ್ದಾರೆ. ಅದನ್ನು ಉಳಿಸಿಕೊಂಡು ಹೋಗಬೇಕಾದ ಕರ್ತವ್ಯ ಯುವಕರ ಮೇಲಿದೆ. ಭಯೋತ್ಪಾದನೆ ದೇಶದ ಅಭಿವೃದ್ಧಿಗೆ ಸದಾ ಅಡ್ಡಗಾಲು ಆಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಹಾಗೂ ಅವರ ಪರಿವಾರದವರನ್ನು ಗೌರವಿಸುವ ಮೂಲಕ ಯುವಪೀಳಿಗೆಗೆ ಈ ನೆಲದ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವ ಕೆಲಸ ಮಾಡಿರುವದು ಸ್ವಾಗತಾರ್ಹವಾಗಿದೆ ಎಂದರು.
ಸಾಹಿತಿ ಅಶೋಕ ಹಂಚಲಿ ಮಾತನಾಡಿ, ಸ್ವಾತಂತ್ರ ಹೊರಾಟದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಹೋರಾಟಗಾರರು ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದರು ಎನ್ನುವದನ್ನು ತಿಳಿಸಿ, ಅವರ ಪರಿಚಯ ಮಾಡಿಸಿರುವದು ಸ್ತುತ್ತಾರ್ಹವಾಗಿದೆ. ಹೋರಾಟಗಾರರನ್ನು ಗುರುತಿಸುವ ಕಾರ್ಯ ಮಾಡಿದ ಆಜಾದಿ ಕಾ ಅಮೃತ ಮಹೋತ್ಸವ ಸಮಿತಿ ಕಾರ್ಯ ಮೆಚ್ಚುವಂತದ್ದಾಗಿದೆ. ಯುವಕರಲ್ಲಿ ದೇಶ ಭಕ್ತಿ ಮುಡಿಸಲು ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಬೇಕು ಎಂದರು.
ಆಜಾದಿಕಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ, ಪುರಸಭೆ ಸದಸ್ಯ ಜೈಸಿಂಗ ಮೂಲಿಮನಿ ಮಾತನಾಡಿದರು. ಸ್ವಾತಂತ್ರ ಹೋರಾಟದಲ್ಲಿ ಬಾಗವಹಿಸಿದ ಸ್ಥಳಿಯ ಹೋರಾಟಗಾರರ ಕುರಿತ ಸಿಂಹ ಘರ್ಜನೆ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು. ಪಟ್ಟಣದ ಸೇರಿದಂತೆ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಪರಿವಾರದವರನ್ನು ಗೌರವಿಸಲಾಯಿತು. ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟ ಸಂಬಂಧಿಸಿ ನೃತ್ಯರೂಪಕಗಳು ಜರುಗಿದವು.
ಪಟ್ಟಣದ ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಕುಂಬಾರ, ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಅರ್ಬನ್ ಬ್ಯಾಂಕ ಅಧ್ಯಕ್ಷ ವಿ.ಎ.ಹಜೇರಿ, ಸಿಆಆರ್ಪಿಎಫ್ ಯೋಧ ಶ್ರೀಕಾಂತ ಕಲಬುಗರ್ಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶಾಂತಗೌಡ ಬಿರಾದಾರ, ಸುರೇಖಾ ಸಾಲಂಕಿ, ಚಿದಂಬರ ಕರಮಕರ, ದೇವರಾಜ ಬಾಗೇವಾಡಿ ವೇದಿಕೆಯ ಮೇಲಿದ್ದರು.
ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ದಿನಕರ ಜೋಶಿ ವಂದೆ ಮಾತರಂ ಗೀತೆ ಹಾಡಿದರು. ಪುರಸಭೆ ಸದಸ್ಯ ರಾಘವೇಂದ್ರ ವಿಜಾಪೂರ ಸ್ವಾಗತಿಸಿದರು. ಅಜಿತ ಯಾಳಗಿ, ಶ್ರೀಕಾಂತ ಪತ್ತಾರ, ಸದ್ದಾಂ ಕಕನೋಡಿ ನಿರೂಪಿಸಿದರು.