ತಾಳಿಕೋಟಿ

ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ನಡೆ ಆರೋಗ್ಯದಡೆ ಅಭಿಯಾನ

ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ನಡೆ ಆರೋಗ್ಯದಡೆ ಅಭಿಯಾನ

ತಾಳಿಕೋಟೆ02: ಉತ್ತಮ ಆರೋಗ್ಯ ಅತ್ಯಮೂಲ್ಯ ಸಂಪತ್ತಾಗಿದೆ. ಆರೋಗ್ಯದ ಮಹತ್ವ ಜನರು ತಿಳಿಯುವಂತಾಗಲೂ ಮುಂದಿನ ದಿನಗಳಲ್ಲಿ ಅನುಗ್ರಹ ಸಂಸ್ಥೆಯ ನೇತೃತ್ವದಲ್ಲಿ ನಮ್ಮ ನಡೆ ಆರೋಗ್ಯದಡೆ ಅಭಿಯಾನವನ್ನು ಹಮ್ಮಿಕೊಂಡು ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವದು ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು. 

ಅವರು ತಾಲೂಕಿನ ಚಬನೂರ ಗ್ರಾಮದಲ್ಲಿ ಅಮೋಘಸಿದ್ದೇಶ್ವರ ಜಾತ್ರೋತ್ಸವ ಅಂಗವಾಗಿ ನಡೆದ ಉಚಿತ ಆರೋಗ್ಯ ಶಿಬಿರ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಕಳೆದ 22 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತೀದ್ದೇನೆ. ಜನರ ಸೇವೆ ಮಾಡಿದ ತೃಪ್ತಿ ಇದೆ. 50 ಸಾವಿರ ಜನರಿಗೆ ಉಚಿತ ಚಿಕಿತ್ಸೆ ಮಾಡಿದ್ದೇನೆ. ಮಾಡಿದ್ದು ಎಳ್ಳು ಕಾಳಷ್ಟು, ಮಾಡಬೇಕಾದದ್ದು ಇನ್ನೂ ಸಾಕಷ್ಠಿದೆ, ಯಾವ ಕಾರಣಕ್ಕೂ ಜನರು ದೃಷ್ಠಿಹೀನರಾಗಬಾರದೆಂಬುದು ನನ್ನ ಕಳಕಳಿಯಾಗಿದೆ. ಕಣ್ಣಿನ ಬಗ್ಗೆ ಮಾತ್ರ ತಪಾಸಣೆ ನಡೆಸುತ್ತಿದ್ದ ನಮ್ಮಲ್ಲಿ ಇನ್ನು ಮುಂದೆ ಎಲ್ಲ ಆರೋಗ್ಯದ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವದು. ಜನರು ನನ್ನ ರಾಜಕೀಯ ಪ್ರವೇಶದ ಕುರಿತು ಮಾತನಾಡುತ್ತಿದ್ದಾರೆ. ನಾನು ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದಿದ್ದೇನೆ. ನನಗೆ ರಾಜಕೀಯದ ಎಲ್ಲ ಏಳು -ಬೀಳುಗಳು ಗೊತ್ತು. ಆದರೆ ಈಗ ಅಂಥಹ ಯೋಚನೆ ಸದ್ಯಕ್ಕೆ ಇಲ್ಲ. ನಿಮ್ಮೆಲ್ಲರ ಅಭಿಪ್ರಾಯ ಇದ್ದದ್ದೆ ಆದಲ್ಲಿ ಖಂಡಿತಾ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು. 

ಸಾನಿಧ್ಯ ವಹಿಸಿದ್ದ ಚಬನೂರ ಹಿರೇಮಠದ ಪಿಠಾಧಿಪತಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಮಲಿಂಗಯ್ಯ ಮಹಾಸ್ವಾಮಿಗಳು ಮಾತನಾಡಿ, ಜನರ ವಿಶ್ವಾಸವನ್ನು ಕಳೆದುಕೊಂಡು ಹಾಳಾಗಿ ಹೋಗುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಲು ನೇತ್ರತಜ್ಞ ಡಾ. ಪ್ರಭುಗೌಡರಂಥಹ ಸೇವಾ ಮನೋಭಾವದ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕು. ರಾಜಕೀಯ ಕ್ಷೇತ್ರ ಸಾರ್ವಜನಿಕ ಬದುಕಿನ ಅವಿಭಾಜ್ಯ ಅಂಗ. ಅದು ಪರಿಶುದ್ಧ, ಪ್ರಾಮಾಣಿಕ ಹಾಗೂ ಸೇವಾಮನೋಭಾವದ ವ್ಯಕ್ತಿಗಳಿಂದ ಕೂಡಿದ್ದಾಗಿರಬೇಕು, ಆಗ ಮಾತ್ರ ಜನರ ಸೇವೆ ಮಾಡಲು ಸಾಧ್ಯ ಈ ಎಲ್ಲ ಅರ್ಹತೆಗಳು ಡಾ. ಪ್ರಭುಗೌಡರಲ್ಲಿವೆ ಎಂದರು.  

ಶಿಪ್ಪಿಂಗ ಕಾರ​‍್ೋರೆಶನ್ ಆಫ್ ಇಂಡಿಯಾದ ನಿರ್ದೇಶಕ ಹಾಗೂ ಸಾಹಿತಿ ಶ್ರೀಕಾಂತ ಪತ್ತಾರ ಮಾತನಾಡಿದರು. 

ಶ್ರೀ ಸಿದ್ದರಾಮಪ್ಪ ಮುತ್ಯಾ ಒಡೆಯರ, ಇಟಗಿ ಗದ್ದುಗೆ ಮಠದ ಶ್ರೀಗಳು, ಶಿವು ಮುತ್ಯಾ ಒಡೆಯರ, ಈರತಯ್ಯ ಹಿರೇಮಠ, ಬಸನಗೌಡ ಲಿಂಗದಳ್ಳಿ ವೇದಿಕೆಯ ಮೇಲಿದ್ದರು. ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ ಹಾಗೂ ಬಸವರಾಜ ಮಾಮನಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು. 

ಇದೇ ಸಂದರ್ಭದಲ್ಲಿ ಈ ಬಾರಿ ಎಸ್‌.ಎಸ್‌.ಎಲ್‌.ಸಿ ಪರಿಕ್ಷೇಯಲ್ಲಿ ಅತ್ಯತ್ತಮ ಸಾಧನೆಗೈದ ಶ್ರೇಯಾ ದೇಸಾಯಿ,  ತೇಜಸ್ವಿನಿ ಕೋಗಿಲ, ಸ್ನೇಹಾ ತೋನಶ್ಯಾಳ, ಸುವರ್ಣ ಕೋಳೂರ, ಹಾಗೂ ಸುಕನ್ಯಾ ಪಾಟೀಲರಿಗೆ ಸನ್ಮಾನಿಸಿ ಪ್ರೋತ್ಸಾಹಧನ ನೀಡಲಾಯಿತು. ವೀರೇಶ ವಾಲಿ ಪ್ರಾರ್ಥಿಸಿದರು. ಅಶೋಕ ಹಂಚಲಿ ನಿರೂಪಿಸಿದರು. ದತ್ತಾತ್ರೇಯ ಹೊಸಮಠ ಸ್ವಾಗತಿಸಿದರು. ಶಿಕ್ಷಕ ಎಂ.ಎಂ.ಮಾಳಿ ವಂದಿಸಿದರು. 


ಸುದ್ದಿ ಓದಿ