ಸಿಪಿಐ(ಎಂಎಲ್) ಲಿಬರೇಶನ್ 57ನೇ ಸಂಸ್ಥಾಪನಾ ದಿನಾಚರಣೆ; ಅಮೆರಿಕಾ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟಕ್ಕೆ ಅಜೀಜ್ ಜಾಗೀರದಾರ್ ಕರೆ
ರಾಯಚೂರು 22: ಜಾಗತಿಕ ಮಟ್ಟದಲ್ಲಿ ಯುದ್ಧ ಮತ್ತು ಅಶಾಂತಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅಮೆರಿಕಾ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟ ನಡೆಸುವುದು ಅಗತ್ಯವಾಗಿದೆ ಎಂದು ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ತಾಲೂಕು ಕಾರ್ಯದರ್ಶಿ ಅಜೀಜ್ ಜಾಗೀರದಾರ್ ಹೇಳಿದರು. ನಗರದ ಚನ್ನದಾಸರ ಭವನದಲ್ಲಿ ಬುಧವಾರ ನಡೆದ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ 57ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತಿಕ ರಾಜಕೀಯ ಪರಿಸ್ಥಿತಿಯಲ್ಲಿ ಯುದ್ಧ, ಅರಾಜಕತೆ ಹಾಗೂ ರಾಜಕೀಯ ಹಸ್ತಕ್ಷೇಪ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರಾಯಿಲ್ ನಡೆಸುತ್ತಿರುವ ಯುದ್ಧ ಈಗ ಎರಡನೇ ತಿಂಗಳಿಗೆ ಮುಂದುವರೆದಿದ್ದು, ಇದು ವಿಶ್ವ ರಾಜಕೀಯದಲ್ಲಿ ಗಂಭೀರ ಪರಿಣಾಮ ಬೀರಿದೆ. ಟ್ರಂಪ್ ಮತ್ತು ನೇತನ್ಯಾಹು ಆಡಳಿತ ಬದಲಾವಣೆ ಉದ್ದೇಶದಿಂದ ದಾಳಿ ನಡೆಸಿದರೂ, ಇರಾನ್ ಪ್ರತಿರೋಧ ತೋರಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ಯುದ್ಧದ ಪರಿಣಾಮವಾಗಿ ಅಮೆರಿಕಾದೊಳಗೇ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಯುರೋಪಿನ ರಾಷ್ಟ್ರಗಳು ಕೂಡ ಅಮೆರಿಕಾದಿಂದ ದೂರವಾಗುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ ಎಂದು ಹೇಳಿದರು.ಪಶ್ಚಿಮ ಏಷ್ಯಾದಲ್ಲಿ ಉದ್ಯೋಗದಲ್ಲಿರುವ ಭಾರತೀಯರ ಭದ್ರತೆ ಪ್ರಶ್ನಾರ್ಥಕವಾಗಿದ್ದು, ದೇಶದಲ್ಲಿ ಇಂಧನ ಮತ್ತು ಗೊಬ್ಬರದ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ ಅವರು, ಅಮೆರಿಕಾ ಮತ್ತು ಇಸ್ರಾಯಿಲ್ ಜೊತೆಗಿನ ಹತ್ತಿರದ ಸಂಬಂಧವು ದೇಶದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗೆ ಹೊರೆ ಆಗುತ್ತಿದೆ ಎಂದು ಹೇಳಿದರು.ಇದಲ್ಲದೆ, ದೇಶದ ಒಳಗಿನ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಹೊಸ ಕಾರ್ಮಿಕ ಕಾಯ್ದೆಗಳು, ಕೃಷಿಗೆ ಹಾನಿಕಾರಕವಾಗಬಹುದಾದ ವ್ಯಾಪಾರ ಒಪ್ಪಂದಗಳು, ಮನರೇಗಾ ದುರ್ಬಲಗೊಳಿಸುವ ಕ್ರಮಗಳು ಹಾಗೂ ಯುಜಿಸಿ ನಿಯಮಗಳು ಜನರ ಅಸಮಾಧಾನವನ್ನು ಹೆಚ್ಚಿಸುತ್ತಿವೆ ಎಂದು ಹೇಳಿದರು. ಎಸ್‌ಐಆರ್ ಮೂಲಕ ದಲಿತರು, ಅಲ್ಪಸಂಖ್ಯಾತರು ಹಾಗೂ ಆದಿವಾಸಿಗಳ ಮತದಾನದ ಹಕ್ಕು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
2026-27ರಲ್ಲಿ ಮಹಾಡ್ ಸತ್ಯಾಗ್ರಹ ಮತ್ತು ಮನುಸ್ಮೃತಿ ದಹನದ ಶತಮಾನೋತ್ಸವಗಳು ಹಾಗೂ ಜ್ಯೋತಿಬಾ ಫುಲೆ ಅವರ 200ನೇ ಜನ್ಮದಿನದ ಹಿನ್ನೆಲೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹೋರಾಟವನ್ನು ಬಲಪಡಿಸುವ ಅಗತ್ಯವಿದೆ ಎಂದು ಕರೆ ನೀಡಿದರು. ಸಾಮ್ರಾಜ್ಯಶಾಹಿ ಮತ್ತು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಸಂಘಟಿತ ಹೋರಾಟವನ್ನು ಬಲಪಡಿಸಲು ಪಕ್ಷ ಬದ್ಧವಾಗಿದೆ. ದೇಶವನ್ನು ಸ್ವಾಯತ್ತ, ಧರ್ಮನಿರಪೇಕ್ಷ ಮತ್ತು ಸಮಾಜವಾದಿ ಪ್ರಜಾತಂತ್ರ ಗಣರಾಜ್ಯವನ್ನಾಗಿ ರೂಪಿಸುವುದೇ ಗುರಿಯಾಗಿದೆ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಜಿಲಾನಿ ಯರಿಗೇರಾ, ಭೀಮಯ್ಯ, ಹನೀಫ್ ಅಬಕಾರಿ, ಮಹಾದೇವಮ್ಮ, ಶಾಂತಮ್ಮ, ರಂಗಮ್ಮ, ಯಂಕಮ್ಮ, ಎನ್ ಮಹಾದೇವಮ್ಮ, ಸುನಿತಾ, ನರಸಿಂಹಲು, ಸಣ್ಣ ತಾಯಪ್ಪ ಹಾಗೂ ಆಂಜನೇಯ ಉಪಸ್ಥಿತರಿದ್ದರು.