ಮೊದಲ ಹಂತದಲ್ಲಿ 30 ಕೋಟಿ ಜನರಿಗಷ್ಟೆ ಲಸಿಕೆ : ಡಾ. ವಿನೋದ್ ಪಾಲ್
ನವದೆಹಲಿ, ಜನವರಿ 2: ಕೊರೋನ ವಿರುದ್ಧ ಕೊನೆಗೂ ಲಸಿಕೆ ಬಂದಿದೆ. ಹಂಚಿಕೆಯ ಕಾರ್ಯ ಸಹ ಚುರುಕುಗೊಂಡಿದೆ. ಆದರೆ ಎಲ್ಲರಿಗೂ ಲಸಿಕೆ ಸಿಗಲಿದೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ .ದೇಶದಲ್ಲಿ ಸುಮಾರು 30 ಕೋಟಿ ಜನರಿಗೆ ಉಚಿತವಾಗಿ ಮೊದಲ ಹಂತದಲ್ಲಿ ಲಸಿಕೆ ನೀಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ನಿಭಾಯಿಸಲಿದೆ ಎಂದು ನೀತಿ ಆಯೋಗದ ಸದಸ್ಯ ಮತ್ತು ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ. ವಿನೋದ್ ಪಾಲ್ ತಿಳಿಸಿದ್ದಾರೆ.ಲಸಿಕೆ ಕಾರ್ಯಕ್ರಮದ ಮೊದಲ ಹಂತದಲ್ಲಿನ 30 ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಅನಾರೋಗ್ಯಪೀಡಿತರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ.
ಮುಂದಿನ 6-8 ತಿಂಗಳವರೆಗೆ ಮುಂಚೂಣಿ ಕಾರ್ಯಕರ್ತರು, ಮುಖ್ಯವಾಗಿ ಆರೋಗ್ಯ ಕಾಳಜಿ ಕಾರ್ಯಕರ್ತರು ಮತ್ತು ವೃದ್ಧರನ್ನು ಮೊದಲ ಹಂತದಲ್ಲಿ ಪರಿಗಣಿಸಲಾಗುತ್ತದೆ. ಪ್ರತಿ ಮೂಲೆಗೂ ಲಸಿಕೆ ಲಭ್ಯವಾಗುವಂತೆ ಪೂರೈಕೆ ಮಾಡಲು 31 ಹಬ್ಗಳನ್ನು ಸ್ಥಾಪಿಸಲಾಗಿದ್ದು, ದೇಶಾದ್ಯಂತ 29 ಸಾವಿರ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕೋವಿಡ್ ಲಸಿಕಾ ವಿತರಣೆಗೆ ಅಗತ್ಯ ಸಿದ್ಧತೆ ಕೂಡ ಈಗಾಗಲೇ ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಔಷಧ ಕ್ಷೇತ್ರ, ಸರ್ಕಾರ ಮತ್ತು ಉತ್ಪಾದಕರು ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ರಾಷ್ಟ್ರವ್ಯಾಪಿ ಆರೋಗ್ಯ ಕಾರ್ಯಕರ್ತರನ್ನು ತಕ್ಷಣದ ಚುಚ್ಚುಮದ್ದು ಹಂತದಲ್ಲಿ ಪರಿಗಣಿಸಲಾಗಿದ್ದು, ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಮಾತ್ರ ಲಸಿಕೆ ಲಭ್ಯವಾಗಲಿದೆ ಎಂದೂ ಅವರು ಸ್ಪಷ್ಟಪಡಿಸಿದರು.