ಸಿಎಂ ದಾವೋಸ್ ಪ್ರವಾಸ: ರೋಮ್ ಉರಿಯುತ್ತಿದ್ದರೆ, ನೀರೊ ಪೀಟೀಲು ಬಾರಿಸಿದಂತೆ: ಆರೋಪ
ರಾಣೇಬೆನ್ನೂರು 22: ಕಳೆದ 4-5 ದಿನಗಳಿಂದ ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ಕೊರೊನಾ ಸಂಕಷ್ಠಗಳ ಮಧ್ಯ ರೈತ ಬೆಳೆದ ಲಕ್ಷಾಂತರ ಹೆಕ್ಟರ್ ಕೃಷಿ ಪ್ರದೇಶ ಲಕ್ಷಾಂತರ ಹೆಕ್ಟರ್ ತೋಟಗಾರಿಕಾ ಪ್ರದೇಶದಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶಗೊಂಡಿವೆ. ಲಕ್ಷಾಂತರ ಮನೆಗಳು ಜಖಂಗೊಂಡಿವೆ. ರೈತರು, ಕೃಷಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ವೈಜ್ಞಾನಿಕ ಮಾದರಿಯಲ್ಲಿ ಯುದ್ದೋಪಾದಿಯಲ್ಲಿ ಪರಿಹಾರವನ್ನು ಘೋಷಿಸಿ ಸಂತ್ರಸ್ತರ ನೆರವಿಗೆ ಧಾವಿಸಬೇಕಾದ ಮುಖ್ಯಮಂತ್ರಿಗಳು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ “ದಾವೋಸ್” ಪ್ರವಾಸ ಕೈಗೊಂಡಿರುವುದು ರೋಮ್ ನಗರ ಬೆಂಕಿ ಹೊತ್ತಿ ಉರಿಯುತ್ತಿದ್ದರೆ, ನೀರೊ ಮಹಾರಾಜ ಪೀಟೀಲು ಬಾರಿಸಿದಂತಾಗಿದೆ ಎಂದೂ ಕರ್ನಾಟಕ ರಾಜ್ಯ ರೈತ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ರವೀಂದ್ರಗೌಡ ಎಫ್ ಪಾಟೀಲ ಮುಖ್ಯಮಂತ್ರಿಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲ ಮಾತನಾಡುತ್ತಾ ಅಕಾಲಿಕ ಮಳೆಯಿಂದ ರೈತರು ದಿಗಿಲುಗೊಂಡಿದ್ದಾರೆ. ಅಷ್ಟೇ ಅಲ್ಲ ನದಿ ಪಾತ್ರದಲ್ಲಿದ್ದ ರೈತರ ಕೃಷಿ ಪಂಪ್ಸೆಟುಗಳು, ಎಲೆಕ್ಟ್ರಿಕಲ್ ಸಾಮಗ್ರಿಗಳು ತೇಲಿ ಹೋಗಿವೆ. ಅವುಗಳನ್ನು ಮತ್ತೆ ದುರಸ್ತಿಗೊಳಿಸಿಕೊಳ್ಳುವುದೇ ದುಸ್ತರವಾಗಿದೆ ಮನೆ ಕಳೆದುಕೊಂಡವರು ಗುಡಿ ಗುಂಡಾರಗಳಲ್ಲಿ ಜೀವಿಸುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಪರಿಸ್ಥಿತಿ ಹೇಳತೀರದು ಅವರ ಗೋಳನ್ನು ಕೇಳುವವರೆ ಇಲ್ಲದಂತಾಗಿದೆ. ಡಿ.ಸಿ. ಸಂಜಯ ಶೆಟ್ಟೆಣ್ಣನವರ ರಾಣೇಬೆನ್ನೂರಿಗೆ ಹೋದ ಪುಟ್ಟ ಬಂದ ಪುಟ್ಟ ಎನ್ನುವಂತೆ ಕಾಟಾಚಾರಕ್ಕೆ ಭೇಟಿ ಕೊಟ್ಟು ಹೋಗಿದ್ದಾರೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ ಮುಖ್ಯಮಂತ್ರಿಗಳು ಆ ಸಭೆಯಿಂದ ಡಿ.ಸಿ.ಗಳು ಸಮಸ್ಯೆ ಬಗೆ ಹರಿಸುತ್ತಾರೆಂಬ ಭ್ರಮೆಯಲ್ಲಿದ್ದಾರೆ. ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಸುಳಿವೇ ಇಲ್ಲಾ ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳು ಬಂದಾಗಲೊಮ್ಮೆ ಅವರ ಜೊತೆ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುವ ಅವರು ಸಂಕಷ್ಟದಲ್ಲಿರುವ ರೈತರ ಸಮಸ್ಯೆ, ಜನ ಸಾಮಾನ್ಯರ ಸಮಸ್ಯೆಯನ್ನು ಅರಿಯದೆ ಕೇವಲ ಹೆಸರಿಗೆ ಮಾತ್ರ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಓಖಿಖ ಗೆ ಒತ್ತಾಯಿಸಿ ಕಳೆದ 60 ದಿನಗಳಿಂದ ರಾಣೇಬೆನ್ನೂರು ತಾಲೂಕಿನ ರೈತರು ಮಾಕನೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಂದೆ ಅಯೋರಾತ್ರಿ ಧರಣಿ ನಡೆಸುತ್ತಿದ್ದರೂ ಸ್ಥಳಕ್ಕೆ ಬಂದು ರೈತರೊಂದಿಗೆ ಚರ್ಚಿಸದೆ ಇರುವುದು ಯಾವ ಸೀಮೆಯ ಉಸ್ತುವಾರಿ ಇವರದು ಎಂದು ರವೀಂದ್ರಗೌಡ ಎಫ್ ಪಾಟೀಲರು ಗೇಲಿ ಮಾಡಿದ್ದಾರೆ.
ಉಚಿತ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ: ಅಕಾಲಿಕ ಮಳೆಯಿಂದ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಉಚಿತ ಬಿತ್ತನೆ ಬೀಜ, ಅದಕ್ಕೆ ತಕ್ಕಂತೆ ರಾಸಾಯನಿಕ ಗೊಬ್ಬರವನ್ನು ಪೂರೈಸಿ ತಾವುಗಳು ನಿಜವಾದ ರೈತರ ಮಕ್ಕಳೆಂಬುದನ್ನು ಮುಖ್ಯಮಂತ್ರಿಗಳು ಸಾಬೀತು ಪಡಿಸಬೇಕಾಗಿದೆ. ಇಲ್ಲದಿದ್ದರೆ ಇನ್ನು ಮುಂದೆ ರೈತರ ಶಾಲನ್ನು ಹೊದ್ದುಕೊಂಡು ರೈತರ ಬಗ್ಗೆ ಅನುಕಂಪದ ಮಾತನಾಡುವುದನ್ನು, ಮೊಸಳೆ ಕಣ್ಣೀರನ್ನು ಸುರಿಸುವುದನ್ನು ಇಲ್ಲಿಗೆ ನಿಲ್ಲಿಸಬೇಕೆಂದು ಪಾಟೀಲರು ಸವಾಲು ಹಾಕಿದ್ದಾರೆ.
ತುರ್ತು ಪರಿಹಾರ ವಿತರಣೆಗೆ ಆಗ್ರಹ: ನಿರಂತರ ಮಳೆಯಿಂದ ಹಾನಿಗೊಂಡ ಮನೆಗಳಿಗೆ, ನಾಶಗೊಂಡ ಬೆಳೆಗಳಿಗೆ ವೈಜ್ಞಾನಿಕ ಮಾದರಿಯಲ್ಲಿ ಈಗಿನ ಮಾರುಕಟ್ಟೆ ದರದ ರೂಪದಲ್ಲಿ ಯುದ್ಧೋಪಾದಿಯಲ್ಲಿ ಸರ್ವೆ ಮಾಡಿ ಪರಿಹಾರ ವಿತರಿಸಬೇಕು ಓಬಿರಾಯನ ಕಾಲದ ಮಾದರಿಯ ಪರಿಹಾರ ನಮಗೆ ಬೇಕಾಗಿಲ್ಲ. ಮೊನ್ನೆ ಶಾಸಕರ, ಸಚಿವರ ವೇತನ ಮತ್ತು ಖಿಂ, ಆಂ ಕ್ಷೇತ್ರ ಭತ್ಯಾ, ಪೋನ್ ಭತ್ಯಾ, ಕಂ ಭತ್ಯಾ, ಸಹಾಯಕನ ಭತ್ಯಾ ಎಂದು ಲಕ್ಷಾಂತರ ರೂಪಾಯಿ ಹೆಚ್ಚಿಸಿಕೊಂಡಿರುವ ನಿಮಗೆ ರೈತರ ಬೆಳೆ ಪರಿಹಾರ, ಮನೆ ಪರಿಹಾರ ಕೊಡಬೇಕೆಂದು 1968 ನೇ ಇಸ್ವಿಯ ಪರಿಹಾರವನ್ನು ಮುಂದಿಟ್ಟುಕೊಂಡು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ರೈತರಿಗೆ ಪರಿಹಾರ ವಿತರಿಸಲು ಮುಂದಾಗುತ್ತಿರಲ್ಲ ನಿಮಗೆ ನಾಚಿಕೆಯಾಗುವುದಿಲ್ಲವೆ? ರೈತರನ್ನು ಈ ರೀತಿ ಅವಮಾನಿಸುತ್ತೀರಲ್ಲ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷದ ಪರಿಹಾರದ ಪಟ್ಟಿ ಬಿಡುಗಡೆಗೆ ಒತ್ತಾಯ : ಕಳೆದೆರಡು ವರ್ಷಗಳಿಂದ ರೈತರಿಗೆ ನೀಡಿದ ಬೆಳೆ ನಷ್ಟ ಪರಿಹಾರ ಸರಿಯಾಗಿ ರೈತರಿಗೆ ಮುಟ್ಟಿರುವುದಿಲ್ಲ. ಹೀಗಾಗಿ ಬೆಳೆನಷ್ಟ, ಮನೆನಷ್ಟ, ಪರಿಹಾರ ನೀಡಿದ ರೈತರ ಮತ್ತು ಮನೆಯ ಸಂತ್ರಸ್ತರ ಪಟ್ಟಿಯನ್ನು ಬಹಿರಂಗವಾಗಿ ಬಿಡುಗಡೆ ಮಾಡಬೇಕು ಇದರಲ್ಲಿ ದೊಡ್ಡ ಪ್ರಮಾಣದ ಗೋಲ್ಮಾಲ್ ನಡೆದಿದೆ. ಸರಕಾರ ನೋಡಿದರೆ ಕೋಟಿ ಕೋಟಿ ಹಣದ ಲೆಕ್ಕ ಹೇಳುತ್ತಿದೆ. ರೈತರಿಗೆ ನೋಡಿದರೆ ಅದು ಪರಿಹಾರ ಮುಟ್ಟಿಲ್ಲ. ಪರಿಹಾರ ಮುಟ್ಟಿರುವುದಾದರೂ ಯಾರಿಗೆ? ಈ ಬಗ್ಗೆ ತನಿಖೆ ನಡೆಯಬೇಕು. ಪರಿಹಾರ ತೆಗೆದುಕೊಂಡ ರೈತರ ಹೆಸರನ್ನು ಬಹಿರಂಗ ಪಡಿಸಬೇಕೆಂದು ರವೀಂದ್ರಗೌಡ ಎಫ್ ಪಾಟೀಲ ಒತ್ತಾಯಿಸಿದ್ದಾರೆ.