ನೀಟ್: ಸಿಎಲ್ಇ ಸಂಸ್ಥೆಯ ಪಪೂ ಮಹಾವಿದ್ಯಾಲಯ ಉತ್ತಮ ಸಾಧನೆ
ಚಿಕ್ಕೋಡಿ 16: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಸಿ.ಎಲ್.ಇ. ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಸೋಯಿಲ್ ಖಪ್ರೇಲ್ (555/720) ಸಯಿದ್ ಜಮಾದಾರ (473/720) ಮಸೀರಾ ಪಠಾಣ (434/720) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ ಎಂದು ಆಡಳಿತಾಧಿಕಾರಿ ಸಾಗರ ಬಿಸ್ಕೋಪ್ ಹೇಳಿದರು.
ಅವರು ಶುಕ್ರವಾರ ಸಂಸ್ಥೆಯ ಸಭಾಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಂಸ್ಥೆಯು ಕೇವಲ ಸಂಖ್ಯೆಗೆ ಸೀಮಿತವಾಗಿರದೆ ಅದು ಗುಣಮಟ್ಟದಲ್ಲಿಯೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತುಂಗದಲ್ಲಿದೆ.
ಇತ್ತೀಚಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲ್ಪಟ್ಟ ಸಿ.ಇ.ಟಿ. ಪರೀಕ್ಷೆಯಲ್ಲಿ ವಿಠಲ ಮಾಳಿ 3402, ಕುಮಾರ. ಸಾಗರ ಮಿರ್ಜೆ 7354, ಜ್ಞಾನೇಶ್ವರ ಭಜಂತ್ರಿ 8190, ರೋಹಿತ ಕುಂಬಾರ 8586 ಹಾಗೂ ಕಾಮೇಡ್-ಕೆ ಪರೀಕ್ಷೆಯಲ್ಲಿ ಸಮದ್ ಮಾಂಜರೆಕರ್ 18213 ರಾ್ಯಂಕ್ ಪಡೆಯುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ.
ಸಿ.ಎಲ್.ಇ. ಸಂಸ್ಥೆಯ ಅಂಗ ಸಂಸ್ಥೆಯಾದ ಪದವಿ ಪೂರ್ವ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯವು ಸನ್ 2012-13 ನೇ ಶೈಕ್ಷಣಿಕ ಸಾಲಿನಲ್ಲಿ 238 ವಿದ್ಯಾರ್ಥಿಗಳ ಪಟ ಸಂಖ್ಯೆಯೊಂದಿಗೆ ಪ್ರಾರಂಭವಾಗಿ ಇಂದು 1000 ವಿದ್ಯಾರ್ಥಿಗಳ ಸಂಖ್ಯೆಯೊಂದಿಗೆ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪದವಿಪೂರ್ವ ಮಹಾವಿದ್ಯಾಲಯದ ಆಡಳಿತಾಧಿಕಾರಿ ಪ್ರಶಾಂತ ಕೊಂಡೆಬೆಟ್ಟು, ಪ್ರಾಚಾರ್ಯ ದೀಪಕ ಪಾಟೀಲ ಉಪಸ್ಥಿತರಿದ್ದರು.