ತಡವಲಗಾ ಆಸ್ಪತ್ರೆಗೆ ಸಿಇಓ ಸಿಂಧೆ ಭೇಟಿ : ತನಿಖೆಗೆ ತಂಡ ರಚನೆ
ಇಂಡಿ 08: ಉಪಹಾರ ಸೇವಿಸಿದ 25 ವಿದ್ಯಾರ್ಥಿನಿಯರು ವಾಂತಿ ಬೇಧಿಯಿಂದ ಬಳಲಿ ಆಸ್ಪತ್ರೆ ಸೇರಿದ ತಾಲೂಕಿನ ತಡವಲಗಾ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಲ್ಲಿ ಆರೋಗ್ಯ ಚೇತರಿಗೆಯಾಗಿದ್ದು ವಿದ್ಯಾರ್ಥಿನಿಯರು ತಡವಲಗಾ ಸರಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ಬೆಳಗ್ಗೆ ಭೇಟಿ ನೀಡಿದ ಸಿಇಓ ರಾಹುಲ್ ಶಿಂಧೆ ಮಕ್ಕಳ ಯೋಗಕ್ಷೇಮ ವಿಚಾರಿಸಿ ಕಸ್ತುರಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ವೀಕ್ಷಿಸಿ ತಂಡ ರಚಿಸಿ ತನಿಖಾ ವರದಿ ನೀಡಲು ತಿಳಿಸಿದ್ದಾರೆ.
ತಂಡದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಅಂಕಿತ ಅಧಿಕಾರಿಗಳು, ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ವಿಜಯಪುರ, ತಾಲೂಕಾ ಆರೋಗ್ಯಾಧಿಕಾರಿಗಳು ಇಂಡಿ, ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ತಡವಲಗಾ ಇವರು ತಂಡದಲ್ಲಿದ್ದಾರೆ.
ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ಕಾರಣವೇನು ಮತ್ತು ಯಾರು ಜವಾಬದಾರರು ಮತ್ತು ಕಾರಣೀಭೂತರು ಎಂಬುದರ ಪರೀಶೀಲನೆ ನಡೆಸಿ 7 ದಿನದಲ್ಲಿ ಸ್ಪಷ್ಟ ವಿವರದೊಂದಿಗೆ ವರದಿ ಸಲ್ಲಿಸಲು ತಿಳಿಸಿದ್ದಾರೆ.
ಈ ಮಧ್ಯೆ ಮಂಗಳವಾರ ಸಂಜೆ ಆಸ್ಪತ್ರೆಗೆ ಮತ್ತು ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು, ಇಂಡಿಯ ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ, ತಹಸೀಲ್ದಾರ ನಾಗಯ್ಯ ಹಿರೇಮಠ ಬುಧವಾರ ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ.ಪಾಟೀಲ ಹಂಜಗಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಇಓ ಸುನೀಲ ಮದ್ದಿನ, ತಾಲೂಕು ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ, ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಭೇಟಿ ನೀಡಿ ಮಕ್ಕಳಲ್ಲಿ ಧೈರ್ಯ ತುಂಬಿದರು.
ತಡವಲಗಾ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಚಂದು ರಾಠೋಡ, ಫಾಯಿಜಲ್ ಫಾರುಕಿ, ಡಾ.ಸುಜಾತಾ ಆಕಾಶ, ಡಾ.ಗೀರೀಶ ಪಾಟೀಲ, ಡಾ. ಗುರುರಾಜ ಜಹಾಗೀರದಾರ, ಡಾ.ದ್ರಾಕ್ಷಾಯಿಣಿ, ಡಾ. ಸುರೇಶ ನಾಯಿಕ ಮತ್ತು ಇಲಾಖೆ ಸಿಬ್ಬಂದಿ ವರ್ಗದ ಸೇವೆಯನ್ನು ಕೊಂಡಾದಿದರು.
ಕುಡಿಯುವ ನೀರು, ವಸತಿ ನಿಲಯದಲ್ಲಿ ಫಿಲ್ಟರ್ ನೀರಿನ ವ್ಯವಸ್ಥೆ ಇದೆ. ಆದರೆ ಟ್ಯಾಂಕಿನಲ್ಲಿ ಕುಡಿಯುವ ನೀರೇ ಬರುವದಿಲ್ಲ. ಹೀಗಾಗಿ ಫಿಲ್ಟರ್ ನೀರು ವಿದ್ಯಾರ್ಥಿನಿಯರಿಗೆ ಇದ್ದು ಇಲ್ಲದಂತಾಗಿದೆ.
100 ವಿದ್ಯಾರ್ಥಿನಿಯರು ಸುಮಾರು 100 ವಿದ್ಯಾರ್ಥಿನಿಯರಿಗೆ ಒಂದೇ ಕೋಣೆಯಲ್ಲಿ ಇರುವ ವ್ಯವಸ್ಥೆ ಇದೆ. ವಿದ್ಯಾರ್ಥಿನಿಯರಿಗೆ ಕಾಟ್ ಅಥವಾ ಬೆಡ್ ವ್ಯವಸ್ಥೆ ಇಲ್ಲ. ಎಲ್ಲರೂ ತಮ್ಮ ತಮ್ಮ ಹಾಸಿಗೆ ಹಾಕಿ ನೆಲದ ಮೇಲೆಯೇ ಮಲಗಬೇಕು.
ಸ್ವಚ್ಛವಾಗಿರದ ಶೌಚಾಲಯಗಳು, ಸ್ನಾನ ಗೃಹಗಳು ಎಲ್ಲೆಂದರೆಲ್ಲಿ ಗಲೀಜು, ಉಡುಗದೇ ಸ್ವಚ್ಛವಾಗಿರದ ಕೋಣೆಗಳು ಸೇರಿದಂತೆ ಎಲ್ಲಿ ನೋಡಿದರಲ್ಲಿ ಗಲೀಜು ಮನೆ ಮಾಡಿತ್ತು.