ಸಿಡಿ ಪ್ರಕರಣ: ಜಾರಕಿಹೊಳಿ ಬಂಧನವೇಕಿಲ್ಲ?: ರಬ್ಬಾನಿ
ಶಿಗ್ಗಾವಿ 30 : ರಮೇಶ ಜಾರಕಿಹೊಳಿಯವರ ರಾಸಲೀಲೆಯ ಸಿಡಿ ವಿಚಾರವಾಗಿ ಇಲ್ಲಿಯವರೆಗೂ ಅವರ ಬಂಧನವೇಕಿಲ್ಲ? ಇದು ಗೃಹ ಸಚಿವರ ಇಬ್ಬಗೆ ನೀತಿಯನ್ನು ಎದ್ದು ತೋರಿಸುತ್ತದೆ ಎಂದು ಶಿಗ್ಗಾವಿ ತಾಲೂಕಿನ ಯುತ್ ಕಾಂಗ್ರೆಸ್ನ ಅಧ್ಯಕ್ಷ ರಬ್ಬಾನಿ ತರೀನ್ ಹೇಳಿದ್ದಾರೆ.
ಸೋಮವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಯುತ್ ಕಾಂಗ್ರೆಸ್ನ ಸಭೆಯಲ್ಲಿ ಮಾತನಾಡಿದ ಅವರು 130 ವರ್ಷಗಳ ಇತಿಹಾಸ ವಿರುವ ಪಕ್ಷ ಕಾಂಗ್ರೆಸ್ ಪಕ್ಷ, ರಾಸಲೀಲೆ ಅನ್ನೋದನ್ನು ಕೇವಲ ನೋಡುತ್ತಿದ್ದರು ಆದರೆ ಇಂದಿನ ಬಿಜೆಪಿ ಸರಕಾರದವರು ಅದನ್ನು ಮಾಡಿಯೇ ಬಿಟ್ಟರು ಎಂದು ಕಟುವಾಗಿ ಟೀಕಿಸಿದರು, ರಾಸಲೀಲೆ ವಿಚಾರವಾಗಿ ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಎಲ್ಲಿಯೂ ಈ ವಿಷಯವಾಗಿ ಮಾತನಾಡುತ್ತಿಲ್ಲ, ಬಿಜೆಪಿಯವರು ಕಾನೂನಾತ್ಮವಾಗಿ ರಕ್ಷಣೆ ಕೊಡಲು ಮುಂದಾಗುತ್ತಿದ್ದಾರೆಯೇ ವಿನಃ ಅವರ ಮೇಲೆ ಕಾನೂನಾತ್ಮಕವಾಗಿ ಕ್ರಮ ಜರುಗಿಸುತ್ತಿಲ್ಲ ಜರಿದರು.
ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಎನ್ ವೆಂಕೋಜಿ ಮಾತನಾಡಿ, ಬಿಜೆಪಿ ಸರಕಾರ ನಮ್ಮ ಮಕ್ಕಳ ಮೇಲೆ ದುಷ್ಪರಿಣಾಮಗಳನ್ನು ಬೀರುವ ಕಾರ್ಯ ಮಾಡುತ್ತಿದೆ, ದಿನಕ್ಕೊಂದು ಹೇಳಿಕೆ ನೀಡಿ ಪ್ರಜ್ಞಾವಂತರ ದಿಕ್ಕು ತಪ್ಪಿಸುವ ಕಾರ್ಯ ನಡೆದಿದೆ, ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿ, 224 ಶಾಸಕರೂ ಸಾಚಾ ಅಲ್ಲ ಎನ್ನುವ ರೀತಿ ಹೇಳಿಕೆ ಕೊಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಸದಸ್ಯ ಶ್ರೀಕಾಂತ ಪೂಜಾರ, ಜಿಲ್ಲಾ ಕಾಂಗ್ರೇಸ್ ಸಂಘಟನಾ ಕಾರ್ಯದರ್ಶಿ ಹನುಮಂತ ಬಂಡಿವಡ್ಡರ, ವಕ್ತಾರ ಮಂಜುನಾಥ ಮಣ್ಣಣ್ಣವರ ಹಾಗೂ ತಾಲೂಕಾ ಅಲ್ಪ ಸಂಖ್ಯಾತ ಘಟಕದ ಅದ್ಯಕ್ಷ ಬಾಬರ್ ಭೋವಾಜಿ ಮಾತನಾಡಿದರು.
ಡಿಕೆ ಶಿವಕುಮಾರ ಅಭಿಮಾನಿ ಬಳಗದ ಅದ್ಯಕ್ಷ ಗದಿಗೆಪ್ಪ ಬಳ್ಳಾರಿ, ಗದಿಗೆಪ್ಪ ಕೊಡ್ಲಿವಾಡ, ಅಮ್ಮದಖಾನ ಪಠಾಣ, ದೇವೇಂದ್ರಪ್ಪ ಕರೆಕ್ಕನವರ, ಅಬ್ದುಲ್ಖಾದರ್ ನೆಲಮನಿ, ದಾದಾಪೀರ್ ನೆಲಮನಿ, ನಿಸಾರ್ ಅಹ್ಮದ್ ತೋಕಲ್ಲಿ, ಅಜೀದ್ ಬಟ್ಟಿಪುರಿ ಸೇರಿದಂತೆ ಬ್ಲಾಕ್ ಕಾಂಗ್ರೆಸ್, ಯುತ್ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು.