ಉಪಚುನಾವಣೆ: ರೈತಸಂಘದ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಕಣಕ್ಕೆ
ಸಿಂದಗಿ 25: ಉಪಚುನಾವಣೆ ಅಖಾಡಕ್ಕೆ ರೈತಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಅಭ್ಯರ್ಥಿಯನ್ನು ನಿಲ್ಲಿಸುವುದರ ಕುರಿತು ಸಂಘಟನೆಯ ರಾಜ್ಯ ಕಮಿಟಿ ನಿರ್ಧರಿಸಿದೆ ಎಂದ ರೈತಸಂಘ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿಂದಗಿ ಕ್ಷೇತ್ರದಲ್ಲಿ ಈ ಮೊದಲು ಶಾಸಕರಾದವರೆಲ್ಲರೂ ರೈತರ ಸಮಸ್ಯೆಗಳಿಗೆ ಕಿಂಚಿತ್ತೂ ಸ್ಪಂದಿಸಿಲ್ಲ ಮತ್ತು ವಿಧಾನಸಭೆಯಲ್ಲಿ ಧ್ವನಿ ಎತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ರೈತಸಂಘದ ರಾಜಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕಮೀಟಿ ಸಭೆಯಲ್ಲಿ ಸಿಂದಗಿ ಉಪಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರವಾಗಿದೆ. ರೈತಸಂಘದ ಅಭ್ಯರ್ಥಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದಿದ್ದಾರೆ.
ಕ್ಷೇತ್ರದಲ್ಲಿ ಅತೀವೃಷ್ಟಿ, ಅನಾವೃಷ್ಟಿ, ನೆರೆ, ಬರ ಆವರಿಸಿ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೀಡಾದರೂ ರೈತರ ಬೆನ್ನಿಗೆ ಶಾಸಕರಾದವರು ನಿಂತಿಲ್ಲ. ಮೇಲಾಗಿ ಸರಕಾರದ ಗಮನ ಸೆಳೆದಿಲ್ಲ. ಇದರ ಜೊತೆ ಕ್ಷೇತ್ರದ ಅಸಂಘಟಿತ ಕಾರ್ಮಿಕರ, ಬಡವರ ನೆರವಿಗೆ ಧಾವಿಸಿಲ್ಲ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ರೈತಸಂಘವು ಉಪಚುನಾವಣೆಗೆ ನನ್ನನ್ನು ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಿದೆ ಎಂದಿದ್ದಾರೆ.
ದೇಶದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳು ರೈತರನ್ನು ಕೇವಲ ಮತ ಬ್ಯಾಂಕ್ಗಳನ್ನಾಗಿ ಬಳಸಿಕೊಂಡಿವೆ ವಿನಃ ಅನ್ನದಾತರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿವಹಿಸಿಲ್ಲ. ಇದರಿಂದಾಗಿ ರೈತಾಪಿ ವರ್ಗವು ಎಲ್ಲ ಪಕ್ಷಗಳ ನಡೆಯಿಂದ ರೋಷಿ ಹೋಗಿದ್ದಾರೆ. ಇದು ನಮಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.