ಕೋವಿಡ್ ಭಯ : ಹೋಳಿ ನಂತರದ ಸಮುದ್ರ ಸ್ನಾನಕ್ಕೆ ಹಾಕಿದ ಬ್ರೇಕ್ ಯಶಸ್ವಿ :
ಗಲ್ಲಿ ಗಲ್ಲಿಗೆ ಸೀಮಿತವಾದ ಹೋಳಿ ಬಣ್ಣದಾಟ- ವೇಷಧಾರಿಗಳು ಮಾಯ
ಕಾರವಾರ 30: ಹೋಳಿ ಹಬ್ಬದ ಸಂಭ್ರಮ ಈ ಸಲ ಕೊಚ್ಚಿಹೋಯಿತು. ಡಿಜೆ ಅಬ್ಬರ, ವಾದ್ಯಗಳ ಸಪ್ಪಳ, ಪೀಪಿಗಳ ಅರಚಾಟ ಯಾವುದೂ ಇರಲಿಲ್ಲ. ಎಲ್ಲವಕ್ಕೂ ಈ ಸಲ ಕೋವಿಡ್ ಭಯ ಎಂಬುದು ಬ್ರೇಕ್ ಹಾಕಿತ್ತು. ಕೋವಿಡ್ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿದ ಕಾರಣ ಜಿಲ್ಲಾಡಳಿತ ಮೊದಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಸಾವಿರಾರು ಜನ ಸೇರುವ ಸಮುದ್ರ ಸ್ನಾನಕ್ಕೆ ಅವಕಾಶ ನೀಡದ ಕಾರಣ ಹೋಳಿ ಹಬ್ಬದ ಬಣ್ಣದಾಟ ಕಡಲದಂಡೆಯನ್ನು ತಲುಪಲಿಲ್ಲ. ಸಮುದ್ರಸ್ನಾನಕ್ಕೆ ಯಾರು ಸಹ ಇಳಿಯುವ ಸಾಹಸ ಮಾಡಲಿಲ್ಲ. ಪೊಲೀಸ್ ಬಿಗಿ ಬಂದೋಬಸ್ತ ಇದ್ದ ಕಾರಣ ಸಮುದ್ರದ ಕಡೆಗೆ ಬಣ್ಣ ಆಡಿದ ಯುವಕ ಯುವತಿಯರು, ಮಹಿಳೆಯರು, ಮಕ್ಕಳು ತೆರಳಲಿಲ್ಲ.
ಇನ್ನು ಗಲ್ಲಿಗೆ ಮಾತ್ರ ಸೀಮಿತವಾದ ಬಣ್ಣದಾಟ:
ನಗರದ ವಿವಿಧ ಗಲ್ಲಿಗಳಲ್ಲಿ ಅಬ್ಬರ ವಿಲ್ಲದೆ, ಬಣ್ಣ ಆಡಲಾಯಿತು. ಅತ್ಯಂತ ಸರಳ ಹಾಗೂ ಸೌಮ್ಯವಾಗಿ ಬಣ್ಣ ಆಡಲಾಯಿತು. ರವಿವಾರ ರಾತ್ರಿ ಕೆಲವೆಡೆ ಕಾಮಣ್ಣನ ಸುಡಲಾಯಿತು. ಅಲ್ಲಿ ಸಹ ಸಂಭ್ರಮ ಕಾಣಲಿಲ್ಲ. ಉತ್ಸಾಹವೇ ಇಲ್ಲದ ಹೋಳಿ ಹಬ್ಬ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಮುಗಿದು ಹೋಗಿತ್ತು. ಮನೆ ಮನೆಗೆ ಹೋಳಿ ಹಬ್ಬದ ನಾಲ್ಕುದಿನದ ಮುಂಚೆ ಬರುತ್ತಿದ್ದ ಸುಗ್ಗಿ ಕುಣಿತ ತಂಡಗಳು ಹಾಗೂ ವೇಷಧಾರಿಗಳು ಸಹ ಈ ಸಲ ಅಷ್ಟಾಗಿ ಕಾಣಲಿಲ್ಲ. ಕೋವಿಡ್ ಭಯ ಎಲ್ಲವನ್ನೂ ನುಂಗಿ ಹಾಕಿದ್ದು, ಜನರ ಸಂತೋಷ ಸಂಭ್ರಮಗಳು ಅಷ್ಟಾಗಿ ಕಾಣಲಿಲ್ಲ. ಹೊರ ರಾಜ್ಯದ ನಿವಾಸಿಗಳು ಸಹ ತಮ್ಮ ವಾಸಸ್ಥಾನದಲ್ಲಿ ಸರಳವಾಗಿ ಹೋಳಿ ಆಚರಿಸಿದರು. ಕಾರವಾರಿಗರು ದೊಡ್ಡ ಪ್ರಮಾಣದಲ್ಲಿ ಆಚರಿಸುವ ಹೋಳಿ ಹಬ್ಬದ ಸಂಭ್ರಮ ಈಸಲ ಸರಳವಾಗಿ ಮುಗಿದು ಹೋಯಿತು. ವರ್ಷಕ್ಕೆ ಒಮ್ಮೆ ಮಾಡುತ್ತಿದ್ದ ಸಮುದ್ರಸ್ನಾನಕ್ಕೆ ಬ್ರೇಕ್ ಬಿದ್ದ ಕಾರಣ ಹೋಳಿಯ ರಂಗು ತೇಲಿಹೋಯಿತು.
ಕೋವಿಡ್ ನಮ್ಮ ಎಲ್ಲಾ ಉತ್ಸಾಹ ಕಸಿದುಕೊಂಡಿದೆ ಎಂದು ಯುವಕರು ಬೇಸರ ವ್ಯಕ್ತಪಡಿಸಿದರು. ಜನರ ಬಳಿ ಈಗ ಹಬ್ಬ ಆಚರಿಸಲು ದುಡ್ಡು ಸಹ ಇಲ್ಲ. ಉತ್ಸಾಹವೂ ಇಲ್ಲ ಎಂದು ನಗರದ ವ್ಯಾಪಾರಿ ಪುರುಷೋತ್ತಮ ಶೇಟ್ ಆತಂಕ ತೋಡಿಕೊಂಡರು. ಎಲ್ಲದಕ್ಕೂ ಕಾನೂನು ಕಟ್ಟಳೆಗಳು ಮನುಷ್ಯರನ್ನು ಹಣಿದಿವೆ. ಜನರು ಸೋತು ಹೋಗಿದ್ದಾರೆ ಎಂದು ತರಕಾರಿ ವ್ಯಾಪಾರಿ ಸುಕ್ರು ಗೌಡ ವಿಷಾಧಿಸಿದರು.
ಇಷ್ಟೊಂದು ನಿರಾಶಾದಾಕ ಹೋಳಿಯನ್ನು ಮೊದಲ ಸಲ ಕಂಡಿದ್ದು, ಇಲ್ಲದ ಭಯ ತುಂಬಿಕೊಂಡ ಮನುಷ್ಯರು ನಗುವುದನ್ನೇ ಮರೆತಿದ್ದಾರೆ, ಸಂಭ್ರಮ, ಹಬ್ಬದ ಆವರಣೆ ಇನ್ನೆಲ್ಲಿಂದ ತರೋದು .
- ಗಣೇಶ ಹಬ್ಬು , ಚೆಂಡಿಯಾ. (ಕಾರವಾರ)