ರಾಜ್ಯ

ಅಮೆರಿಕ ರಾಜಕೀಯದಲ್ಲಿ ಗಮನ ಸೆಳೆದ ಭಟ್ಕಳದ ಕುಟುಂಬದ ರಾಜಕೀಯ ಪರಂಪರೆ

ಅಮೆರಿಕ ರಾಜಕೀಯದಲ್ಲಿ ಗಮನ ಸೆಳೆದ ಭಟ್ಕಳದ ಕುಟುಂಬದ ರಾಜಕೀಯ ಪರಂಪರೆ

ಅಮೆರಿಕ ರಾಜಕೀಯದಲ್ಲಿ ಗಮನ ಸೆಳೆದ ಭಟ್ಕಳದ ಕುಟುಂಬದ ರಾಜಕೀಯ ಪರಂಪರೆ

ಬೆಂಗಳೂರು, ನ. 5 : ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪಟ್ಟಣ ಭಟ್ಕಳ ಮೂಲದ ಕುಟುಂಬವೊಂದು ಅಮೆರಿಕದ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಮಿಚಿಗನ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ಅಬ್ದುಲ್ ಎಲ್-ಸಯೀದ್ ಅವರ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರ ಪತ್ನಿ ಡಾ. ಸಾರಾ ಜುಕಾಕು ಅವರ ಕುಟುಂಬದ ಕರ್ನಾಟಕದ ನಂಟು ಮುನ್ನೆಲೆಗೆ ಬಂದಿದೆ.

ಅಬ್ದುಲ್ ಎಲ್-ಸಯೀದ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರು ಮೈಸೂರು ರಾಜ್ಯದ ಮಾಜಿ ಉಪ ಹಣಕಾಸು ಸಚಿವ, ಖ್ಯಾತ ವಕೀಲ ಹಾಗೂ ಶಿಕ್ಷಣತಜ್ಞ ಜೆ.ಎಚ್. ಶಂಸುದ್ದೀನ್ ಜುಕಾಕು ಅವರ ಮೊಮ್ಮಗಳು.

ನವಾಯತ್ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿದ್ದ ಶಂಸುದ್ದೀನ್ ಜುಕಾಕು ಅವರು 1946ರಲ್ಲಿ ಬಾಂಬೆ ವಿಧಾನಸಭೆಯ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಬಳಿಕ 1957 ಮತ್ತು 1962ರಲ್ಲಿ ಹೊನ್ನಾವರ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಆಯ್ಕೆಯಾಗಿದ್ದರು.

1958ರಲ್ಲಿ ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರ ಸರ್ಕಾರದಲ್ಲಿ ಉಪ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು, ನಂತರ ಎಸ್. ನಿಜಲಿಂಗಪ್ಪ ಅವರ ಸರ್ಕಾರದಲ್ಲಿ ವಿದ್ಯುತ್ ಖಾತೆಯ ಉಪ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಭಟ್ಕಳ ಪಟ್ಟಣದ ಅಭಿವೃದ್ಧಿಯಲ್ಲಿ ಶಂಸುದ್ದೀನ್ ಜುಕಾಕು ಮಹತ್ವದ ಪಾತ್ರ ವಹಿಸಿದ್ದರು. ವಿಶೇಷವಾಗಿ ವಿದ್ಯುತ್ ಸೌಲಭ್ಯ, ಮೂಲಸೌಕರ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ್ದರು. ಪಟ್ಟಣದ ಶಿಕ್ಷಣ ಮತ್ತು ಸಮಾಜಸೇವಾ ಸಂಸ್ಥೆಯಾದ ಅಂಜುಮನ್ ಹಾಮಿ-ಎ-ಮುಸ್ಲಿಮೀನ್‌ನೊಂದಿಗೂ ಅವರು ನಿಕಟ ಸಂಪರ್ಕ ಹೊಂದಿದ್ದರು. ಅವರ ಸೇವೆಯನ್ನು ಸ್ಮರಿಸಲು ಭಟ್ಕಳದ ಪ್ರಮುಖ ವೃತ್ತವೊಂದಕ್ಕೆ 'ಶಂಸುದ್ದೀನ್ ಸರ್ಕಲ್' ಎಂದು ಹೆಸರಿಡಲಾಗಿದೆ.

ಈ ಕುಟುಂಬದ ಅಮೆರಿಕದ ನಂಟು 1980ರ ದಶಕದಲ್ಲಿ ಆರಂಭವಾಯಿತು. ಶಂಸುದ್ದೀನ್ ಅವರ ಪುತ್ರ ಡಾ. ಜುಕಾಕು ಎಸ್. ತಯೇಬ್ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದು, ಬಳಿಕ ಅಮೆರಿಕಕ್ಕೆ ತೆರಳಿದರು. ಮೂತ್ರಪಿಂಡ ತಜ್ಞರಾಗಿದ್ದ ಅವರು ಮಿಚಿಗನ್‌ನಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದರು.

ಅವರ ಪುತ್ರಿ ಸಾರಾ ಜುಕಾಕು ಅವರು ಮಿಚಿಗನ್‌ನಲ್ಲಿಯೇ ಹುಟ್ಟಿ ಬೆಳೆದರೂ ಕರ್ನಾಟಕದೊಂದಿಗೆ ನಿಕಟ ಸಂಬಂಧ ಉಳಿಸಿಕೊಂಡಿದ್ದರು. ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಅಬ್ದುಲ್ ಎಲ್-ಸಯೀದ್ ಅವರನ್ನು ಭೇಟಿಯಾದರು. 2006ರ ಮೇ ತಿಂಗಳಲ್ಲಿ ಇಬ್ಬರೂ ವಿವಾಹವಾದರು.

ಸಾರಾ ಅವರು ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಮನೋವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿದರು.

ಅಬ್ದುಲ್ ಎಲ್-ಸಯೀದ್ ಅವರು ತಮ್ಮ ಪತ್ನಿಯ ಭಾರತೀಯ ಮೂಲದ ಬಗ್ಗೆ ಹಲವು ಸಂದರ್ಭಗಳಲ್ಲಿ ಹೆಮ್ಮೆಯಿಂದ ಮಾತನಾಡಿದ್ದಾರೆ. ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳೊಂದಿಗೆ ತಮಗಿರುವ ನಂಟನ್ನೂ ವ್ಯಕ್ತಪಡಿಸಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.

ಭಟ್ಕಳದಿಂದ ಅಮೆರಿಕದ ಮಿಚಿಗನ್‌ವರೆಗೆ ಸಾಗಿರುವ ಈ ಕುಟುಂಬದ ಪಯಣವು ಕರ್ನಾಟಕದ ರಾಜಕೀಯ ಹಾಗೂ ಸಾಮಾಜಿಕ ಪರಂಪರೆ ಹಲವು ತಲೆಮಾರುಗಳನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತನ್ನ ಛಾಪು ಮೂಡಿಸಿರುವುದಕ್ಕೆ ಉದಾಹರಣೆಯಾಗಿದೆ.


ಸುದ್ದಿ ಓದಿ