ವಾಯುಮಾಲಿನ್ಯದಿಂದ ಕೂದಲಿನ ಹೊಳಪು ಕಡಿಮೆಯಾಗಿ, ಒಣಗುವಿಕೆ ಹಾಗೂ ತುಂಡಾಗುವಿಕೆ ಸಮಸ್ಯೆ: ಸೂರ್ಯ ಬ್ರೆಸಿಲ್ ಸಿಇಒ
ವಾಯುಮಾಲಿನ್ಯವು ಕೂದಲಿನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಮಾಹಿತಿ ನೀಡಿದ ಅವರು, ಪರಿಸರದಲ್ಲಿನ ಮಾಲಿನ್ಯಕಾರಕಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಕೂದಲು ಕ್ರಮೇಣ ಹಾನಿಗೊಳಗಾಗುತ್ತದೆ. ಇದರಿಂದ ಕೂದಲಿನ ನೈಸರ್ಗಿಕ ಹೊಳಪು ಕಡಿಮೆಯಾಗುವುದರ ಜೊತೆಗೆ ಒರಟುತನ ಮತ್ತು ಕೂದಲು ತುಂಡಾಗುವ ಸಮಸ್ಯೆ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.
ಗಾಳಿಯಲ್ಲಿರುವ ಧೂಳು ಮತ್ತು ಹೊಗೆಯ ಕಣಗಳು ಕೂದಲು ಹಾಗೂ ತಲೆಚರ್ಮದಲ್ಲಿನ ನೈಸರ್ಗಿಕ ಎಣ್ಣೆಯೊಂದಿಗೆ ಬೆರೆತು ಪದರವನ್ನು ರೂಪಿಸುತ್ತವೆ. ಇದರಿಂದ ಕೂದಲಿನ ಮೇಲ್ಮೈ ಅಸಮವಾಗುತ್ತದೆ. ಪರಿಣಾಮವಾಗಿ ಬೆಳಕನ್ನು ಪ್ರತಿಫಲಿಸುವ ಸಾಮರ್ಥ್ಯ ಕಡಿಮೆಯಾಗಿ ಕೂದಲು ಹೊಳಪು ಕಳೆದುಕೊಂಡಂತೆ ಕಾಣುತ್ತದೆ ಎಂದು ವಿವರಿಸಿದ್ದಾರೆ.
ಮಾಲಿನ್ಯಕಾರಕಗಳು ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡಿ ಕೂದಲಿನ ಹೊರಪದರ ಹಾಗೂ ನೈಸರ್ಗಿಕ ಕೊಬ್ಬಿನ ಅಂಶಗಳಿಗೆ ಹಾನಿ ಮಾಡಬಹುದು. ಇದರಿಂದ ಕೂದಲು ಒಣಗುವುದು, ಸಿಕ್ಕು ಬೀಳುವುದು ಹಾಗೂ ಸುಲಭವಾಗಿ ತುಂಡಾಗುವ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಆದರೆ, ವಾಯುಮಾಲಿನ್ಯ ಮತ್ತು ಕೂದಲು ಉದುರುವಿಕೆಯ ನಡುವಿನ ನೇರ ಸಂಬಂಧದ ಕುರಿತು ಸಂಶೋಧನೆಗಳು ಇನ್ನೂ ನಡೆಯುತ್ತಿವೆ. ಮಾಲಿನ್ಯದಿಂದ ತಲೆಚರ್ಮದಲ್ಲಿ ಕೊಳೆ ಸಂಗ್ರಹವಾಗುವುದು ಹಾಗೂ ಕಿರಿಕಿರಿ ಉಂಟಾಗುವುದು ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಅಡ್ಡಿಯಾಗಬಹುದು. ಒತ್ತಡ, ಆಹಾರ ಪದ್ಧತಿ ಮತ್ತು ಋತುಮಾನ ಬದಲಾವಣೆಗಳೂ ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಕೂದಲಿನ ಆರೋಗ್ಯ ಕಾಪಾಡಲು ನಿಯಮಿತ ಆರೈಕೆ ಅಗತ್ಯ
ವಾಹನಗಳ ಹೊಗೆ, ಧೂಳು ಹಾಗೂ ವಾಯುಮಾಲಿನ್ಯಕ್ಕೆ ಹೆಚ್ಚು ಒಡ್ಡಿಕೊಳ್ಳುವವರು ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಸೌಮ್ಯವಾದ ಶಾಂಪೂ ಬಳಸಿ ಕೂದಲು ತೊಳೆಯಬೇಕು ಎಂದು ಏಂಜೆಲಾನ್ ಸಲಹೆ ನೀಡಿದ್ದಾರೆ.
ತಲೆಚರ್ಮದಲ್ಲಿ ಸಂಗ್ರಹವಾಗಿರುವ ಧೂಳು ಮತ್ತು ಕೊಳೆಯನ್ನು ತೆಗೆದುಹಾಕಲು ಬೆರಳ ತುದಿಗಳಿಂದ ಮೃದುವಾಗಿ ಮಸಾಜ್ ಮಾಡಬೇಕು. ಹೆಚ್ಚು ಸಮಯ ಮಾಲಿನ್ಯಯುಕ್ತ ವಾತಾವರಣದಲ್ಲಿದ್ದ ನಂತರ ಕೂದಲನ್ನು ನೀರಿನಿಂದ ತೊಳೆಯುವುದು ಹಾಗೂ ವಾರಕ್ಕೊಮ್ಮೆ ಕೂದಲಿನ ಮಧ್ಯಭಾಗದಿಂದ ತುದಿಯವರೆಗೆ ಕಂಡೀಷನಿಂಗ್ ಮಾಸ್ಕ್ ಬಳಸುವುದು ತೇವಾಂಶವನ್ನು ಕಾಪಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ನಿಯಮಿತವಾಗಿ ಕೂದಲಿನ ತುದಿಗಳನ್ನು ಕತ್ತರಿಸುವುದರಿಂದ ಸೀಳಿದ ತುದಿಗಳ ಸಮಸ್ಯೆ ಹಾಗೂ ಹೆಚ್ಚಿನ ಹಾನಿಯನ್ನು ತಡೆಯಬಹುದು ಎಂದು ಹೇಳಿದ್ದಾರೆ.
ತೆಂಗಿನಕಾಯಿ, ಶಿಯಾ ಬಟರ್, ಅಲೋವೆರಾ, ಅಮೆಜಾನ್ ಪ್ರದೇಶದ ಮುರುಮುರು ಹಾಗೂ ಅಸಾಯಿ ಮುಂತಾದ ಸಸ್ಯಜನ್ಯ ಪದಾರ್ಥಗಳು ಕೂದಲಿನ ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ಮೃದುತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ವಿವರಿಸಿದ್ದಾರೆ.
ಭಾರತೀಯ ಸಾಂಪ್ರದಾಯಿಕ ಕೂದಲಿನ ಆರೈಕೆಯಲ್ಲಿ ಬಳಸಲಾಗುವ ಮೆಹಂದಿಯನ್ನು ಅಮೆಜಾನ್ ಪ್ರದೇಶದ ಗಿಡಮೂಲಿಕೆಗಳೊಂದಿಗೆ ಸಂಯೋಜಿಸಿ ಹೊಸ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇಂತಹ ಸಸ್ಯಜನ್ಯ ಪದಾರ್ಥಗಳು ಕೂದಲಿನ ಆರೋಗ್ಯ ಮತ್ತು ಹೊಳಪನ್ನು ಕಾಪಾಡಲು ನೆರವಾಗಬಹುದು ಎಂದು ತಿಳಿಸಿದ್ದಾರೆ.
ಕೂದಲಿನ ಉತ್ಪನ್ನಗಳ ಆಯ್ಕೆಯಲ್ಲಿ ಎಚ್ಚರಿಕೆ ಅಗತ್ಯ
ಕೂದಲಿನ ಆರೈಕೆ ಉತ್ಪನ್ನಗಳನ್ನು ಖರೀದಿಸುವಾಗ ಅವುಗಳಲ್ಲಿರುವ ಪದಾರ್ಥಗಳ ವಿವರವನ್ನು ಪರಿಶೀಲಿಸಬೇಕು. ಅಮೋನಿಯಾ, ಎಥನೋಲಮೈನ್, ಡೈಎಥನೋಲಮೈನ್ ಮತ್ತು ಟ್ರೈಎಥನೋಲಮೈನ್ ಮುಂತಾದ ಪದಾರ್ಥಗಳಿಲ್ಲದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಏಂಜೆಲಾನ್ ಸಲಹೆ ನೀಡಿದ್ದಾರೆ.
ಒದ್ದೆಯಾದ ಕೂದಲಿನ ಸಿಕ್ಕು ಬಿಡಿಸಲು ಅಗಲ ಹಲ್ಲುಗಳಿರುವ ಬಾಚಣಿಗೆಯನ್ನು ಬಳಸಬೇಕು. ಕೂದಲಿನ ತುದಿಯಿಂದ ನಿಧಾನವಾಗಿ ಬಾಚಲು ಪ್ರಾರಂಭಿಸಬೇಕು. ಕೂದಲಿನ ಬೇರುಗಳ ಮೇಲೆ ಹೆಚ್ಚಿನ ಒತ್ತಡ ಬೀರುವಂತೆ ಬಿಗಿಯಾಗಿ ಕಟ್ಟುವ ಕೇಶವಿನ್ಯಾಸಗಳನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.
ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಸ್ವಚ್ಛಗೊಳಿಸುವುದು, ಅಗತ್ಯ ತೇವಾಂಶ ಒದಗಿಸುವುದು ಹಾಗೂ ಸೂಕ್ತ ಉತ್ಪನ್ನಗಳನ್ನು ಬಳಸುವುದು ಮುಖ್ಯವಾಗಿದೆ.
ಕೂದಲು ನಿರಂತರವಾಗಿ ಉದುರುವುದು, ತಲೆಚರ್ಮದಲ್ಲಿ ತುರಿಕೆ ಅಥವಾ ಸೂಕ್ಷ್ಮಸಂವೇದನೆ ಕಾಣಿಸಿಕೊಂಡರೆ ಚರ್ಮರೋಗ ತಜ್ಞರು ಅಥವಾ ಕೂದಲಿನ ಆರೋಗ್ಯ ತಜ್ಞರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯಬೇಕು ಎಂದು ಏಂಜೆಲಾನ್ ಸಲಹೆ ನೀಡಿದ್ದಾರೆ.