ಪುಣೆ ಆಸ್ಪತ್ರೆಯಿಂದ ಶರದ್ ಪವಾರ್ ಡಿಸ್ಚಾರ್ಜ್; ಎರಡು ದಿನಗಳ ಚಿಕಿತ್ಸೆ ಬಳಿಕ ಮುಂಬೈಗೆ ಪ್ರಯಾಣ
ಕೆಮ್ಮು ಮತ್ತು ಆಯಾಸದ ಸಮಸ್ಯೆಯಿಂದ ಬಳಲುತ್ತಿದ್ದ ಶರದ್ ಪವಾರ್ ಅವರನ್ನು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಯ ಬಳಿಕ ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಶರದ್ ಪವಾರ್ ಅವರು ತಮ್ಮ ಹುಟ್ಟೂರು ಬಾರಾಮತಿಗೆ ತೆರಳದೆ, ನೇರವಾಗಿ ಮುಂಬೈನ ಸಿಲ್ವರ್ ಓಕ್ ನಿವಾಸಕ್ಕೆ ಪ್ರಯಾಣ ಬೆಳೆಸಿದರು. ಈ ವೇಳೆ ಅವರ ಪತ್ನಿ ಪ್ರತಿಭಾ ಪವಾರ್ ಹಾಗೂ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಜೊತೆಗಿದ್ದರು.
ಆಸ್ಪತ್ರೆಗೆ ದಾಖಲಾದ ನಂತರ ವೈದ್ಯರು ಪವಾರ್ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದರು. ಎರಡು ದಿನಗಳ ಚಿಕಿತ್ಸೆ ಮತ್ತು ವೈದ್ಯಕೀಯ ನಿಗಾದ ಬಳಿಕ ಆರೋಗ್ಯ ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ನಿರ್ಧರಿಸಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಶರದ್ ಪವಾರ್ ಅವರು ಬರಪೀಡಿತ ಪ್ರದೇಶಗಳಿಗೆ ಕೈಗೊಳ್ಳಬೇಕಿದ್ದ ಪರಿಶೀಲನಾ ಪ್ರವಾಸ ಸೇರಿದಂತೆ ತಮ್ಮ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು.
ಆಸ್ಪತ್ರೆಯಿಂದ ಗಾಲಿಕುರ್ಚಿಯಲ್ಲಿ ಹೊರಬಂದ ಶರದ್ ಪವಾರ್ ಅವರು ಹೊರಗೆ ನೆರೆದಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರತ್ತ ಕೈಬೀಸಿ ಅಭಿನಂದನೆ ಸ್ವೀಕರಿಸಿದರು. ಈ ದೃಶ್ಯಗಳ ಫೋಟೊಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.
ಆಸ್ಪತ್ರೆಯಿಂದ ಹೊರಡುವ ಮುನ್ನ ಸಂಸದೆ ಸುಪ್ರಿಯಾ ಸುಳೆ ಅವರು ತಮ್ಮ ತಂದೆಗೆ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.
ಶರದ್ ಪವಾರ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದರೂ, ಸಂಪೂರ್ಣ ಚೇತರಿಸಿಕೊಳ್ಳುವವರೆಗೆ ಸಾಕಷ್ಟು ವಿಶ್ರಾಂತಿ ಪಡೆಯುವಂತೆ ಹಾಗೂ ಶ್ರಮದಾಯಕ ಚಟುವಟಿಕೆಗಳಿಂದ ದೂರವಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ.