ಕಾರವಾರ

ಕದ್ರಾ ಅಣೆಕಟ್ಟಿನ ನೀರಿನಿಂದ ಕೃತಕ ಪ್ರವಾಹ ಉಂಟಾಗದಂತೆ ನೋಡಿಕೊಳ್ಳಿ : ಶಾಸಕಿ ಕಿವಿಮಾತು

ಕದ್ರಾ ಅಣೆಕಟ್ಟಿನ ನೀರಿನಿಂದ ಕೃತಕ ಪ್ರವಾಹ ಉಂಟಾಗದಂತೆ ನೋಡಿಕೊಳ್ಳಿ : ಶಾಸಕಿ ಕಿವಿಮಾತು

ಕಾರವಾರ 23: ಕದ್ರಾ ಡ್ಯಾಂ ನಿಂದ ಪ್ರವಾಹ ಉಂಟಾಗದಂತೆ  ಮುಂಜಾಗ್ರತಾ ಕ್ರಮವಹಿಸಿ ಸಾರ್ವಜನಿಕ ಆಸ್ತಿ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೆಪಿಸಿ ಅಧಿಕಾರಿಗಳಿಗೆ ಶಾಸಕಿ  ರೂಪಾಲಿ ಎಸ್‌.ನಾಯ್ಕ ಅವರು ಸೂಚನೆ ನೀಡಿದರು 

ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ  ಕೆಪಿಸಿ ಅಧಿಕಾರಿಗಳೊಂದಿಗೆ ಇಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕುಂಬಾರವಾಡ ಮತ್ತು ಅಣಶಿಯಲ್ಲಿ ಮಳೆಯಾದರೆ ಡ್ಯಾಮ್ನಲ್ಲಿ ನೀರು ತುಂಬಿರುತ್ತದೆ. ಅದಕ್ಕಾಗಿ ಮುನ್ನೆಚ್ಚರಿಕೆಯಾಗಿ ಡ್ಯಾಂ ನಲ್ಲಿ ನೀರು ತುಂಬುತ್ತಿದ್ದಂತೆ  ನೀರನ್ನು ಹೊರಗೆ ಬಿಡಬೇಕು. ಒಮ್ಮೆಲೆ ತುಂಬಿದಾಗ ನೀರನ್ನು ಬಿಟ್ಟರೆ ಪ್ರವಾಹ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗೆ ಪ್ರವಾಹ ಸಂಭವಿಸಿದಾಗ ಅದರ ನಿಯಂತ್ರಣಕ್ಕೆ  ಮತ್ತು ಹಾನಿಯ ವಿವರ ಸಂಗ್ರಹಿಸುವುದಕ್ಕೆ ಅಧಿಕಾರಿ ವರ್ಗದವರು ಇಲ್ಲಿಯೇ ಇರಬೇಕಾಗುತ್ತದೆ. ಇದರಿಂದ ಸಮಯ ಶ್ರಮ ವ್ಯರ್ಥವಾಗುತ್ತದೆ. ಡ್ಯಾಂ ನ ಸುರಕ್ಷತೆ ದೃಷ್ಟಿಯಿಂದಲೂ ಹೆಚ್ಚುವರಿ ನೀರು ಇಟ್ಟುಕೊಳ್ಳದೆ ಹೊರಬಿಡಬೇಕು. 2019ರಲ್ಲಿ ಉಂಟಾದ  ಪ್ರವಾಹದ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ಕೆಪಿಸಿ ಅಧಿಕಾರಿಗಳು ಎಚ್ಚರಿಕೆವಹಿಸಬೇಕು. ಸ್ಥಳೀಯರಿಗೆ ಡ್ಯಾಂನಲ್ಲಿ ನೀರಿನ ಒಳ ಹರಿವು ಮತ್ತು ಹೊರ ಹರಿವಿನ ಪ್ರಮಾಣದ ಮಾಹಿತಿಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು. 

ಎನ್‌ಪಿ.ಸಿಎಲ್ ಸಿಎಸ್‌ಆರ್ ಅನುದಾನವನ್ನು ಚಿಕ್ಕ ಚಿಕ್ಕ ಕಾಮಗಾರಿಗೆ ಬಳಸುವ ಬದಲು ಅವಶ್ಯಕವಾಗಿರುವ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕದ್ರಾದಿಂದ ಮಲ್ಲಾಪುರ ಸಂಪರ್ಕಿಸಲು ಸೇತುವೆ ಅವಶ್ಯಕವಾಗಿದ್ದು ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. 

ಪ್ರವಾಹವಾದಾಗಲೆಲ್ಲ ಎಂಟು ಹತ್ತು ದಿನಗಳವರೆಗೆ ವಿದ್ಯುತ್ ಇರುವುದಿಲ್ಲ. ಸಂಪರ್ಕ ಸಾಧಿಸಲು ನೆಟ್ವರ್ಕ ಸಮಸ್ಯೆಯೂ ಕಾಡುತ್ತದೆ. ಈಗ ಕೋವಿಡ್ ಇರುವುದರಿಂದ ಆನ್‌ಲೈನ್ ತರಗತಿಗಳು ನಡೆಯುತ್ತಿದೆ. ಆದರೆ ಈಗ ವಿದ್ಯುತ್ ಸಮಸ್ಯೆ ಕಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಇದರಿಂದ ತರಗತಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಎನ್‌.ಪಿ.ಸಿ.ಎಲ್‌.ನ ಸಿಎಸ್‌ಆರ್ ನಿಧಿಯಿಂದ ಅಂಡರ್‌ಗ್ರೌಂಡ್ ವಿದ್ಯುತ್ ಸಂಪರ್ಕಕ್ಕೆ ವಿಸ್ತೃತ ವರದಿ ತಯಾರಿಸಬೇಕು. ಮಲ್ಲಾಪುರದಲ್ಲಿ ವಿದ್ಯುತ್ ವ್ಯತ್ಯಯವಾದಾಗ ಕದ್ರಾದಿಂದ ಮಲ್ಲಾಪುರಕ್ಕೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಹೆಸ್ಕಾಂ ಎಇಇಗೆ ಶಾಸಕಿ ಸೂಚಿಸಿದರು. 

ಪ್ರವಾಹದಿಂದ ರಸ್ತೆಗಳು ಹಾಳಾದಲ್ಲಿ ತುರ್ತು ಕ್ರಮ ಕೈಗೊಳ್ಳಲು ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಸಮರೋಪಾದಿಯಲ್ಲಿ ಕಾರ್ಯ ನಿರ್ವಹಣೆ ಮಾಡಲು ಸರ್ವ ಸನ್ನದ್ದರಾಗಿರಬೇಕು ಎಂದು ಪಿಡಬ್ಲುಡಿ, ಪಿಆರ್‌ಇಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಕದ್ರಾ ಡ್ಯಾಂ ವೀಕ್ಷಣೆ: 

ಕೆಪಿಸಿ ಅಧಿಕಾರಿಗಳೊಂದಿಗೆ ಸಭೆ  ನಡೆಸಿದ ಬಳಿಕ  ಕದ್ರಾ ಡ್ಯಾಂ ವೀಕ್ಷಿಸಿದರು. ಬಳಿಕ ಡ್ಯಾಂ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಾಬು ನಾಯ್ಕ. ಸದಸ್ಯರು, ಕೆಪಿಸಿ ಮುಖ್ಯ ಎಂಜಿನಿಯರ್  ನಿಂಗಣ್ಣ, ಎನ್‌ಪಿಸಿಎಲ್ ಸ್ಥಾನಿಕ ನಿರ್ದೇಶಕ ರಾಜೇಂದ್ರಕುಮಾರ ಗುಪ್ತಾ, ತಹಶೀಲ್ದಾರ  ನಿಶ್ಚಲ್ ನರೋನಾ, ಡಿವೈಎಸ್‌ಪಿ  ಅರವಿಂದ ಕಲಗುಜ್ಜಿ, ವಿವಿಧ  ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ