ಧಾರವಾಡ - ಹುಬ್ಬಳ್ಳಿ

ಛಲವಿದ್ದಾಗ ಮಾತ್ರ ಅತ್ಯುತ್ತಮ ಫಲಿತಾಂಶ ಹೊರಹೊಮ್ಮಲು ಸಾಧ್ಯ: ಡಾ. ಲಿಂಗರಾಜ ಅಂಗಡಿ

ಛಲವಿದ್ದಾಗ ಮಾತ್ರ ಅತ್ಯುತ್ತಮ ಫಲಿತಾಂಶ ಹೊರಹೊಮ್ಮಲು ಸಾಧ್ಯ: ಡಾ. ಲಿಂಗರಾಜ ಅಂಗಡಿ

ಧಾರವಾಡ 10:  ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ಶಿಸ್ತು, ಸಂಯಮ, ಶೃದ್ಧೆ, ಪರಿಶ್ರಮ, ಛಲವಿದ್ದಾಗ ಮಾತ್ರ ಅತ್ಯುತ್ತಮ ಫಲಿತಾಂಶ ಹೊರಹೊಮ್ಮಲು ಸಾಧ್ಯ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.  

ಉಪ್ಪಿನಬೆಟಗೇರಿ ಗ್ರಾಮದ ಎಸ್‌.ಜಿ.ವಿ.ಪ್ರೌಢಶಾಲೆಯಲ್ಲಿ ಶನಿವಾರದಂದು ನಡೆದ ಧಾರವಾಡ ತಾಲೂಕ ಕ.ಸಾ.ಪ.ವತಿಯಿಂದ ಲಿಂ.ಕಾಮಾಕ್ಷಮ್ಮ ಚ.ಚಿಕ್ಕಮಠ ಹಾಗೂ ಲಿಂ.ಚನ್ನವೀರಸ್ವಾಮಿ ವಿ.ಚಿಕ್ಕಮಠ ಇವರ ದತ್ತಿ ಕಾರ್ಯಕ್ರಮದ ಅಂಗವಾಗಿ ಜರುಗಿದ ಉಪನ್ಯಾಸ ಹಾಗೂ 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದ ಗ್ರಾಮದ ಎಸ್‌.ಜಿ.ವಿ. ಪ್ರೌಢಶಾಲೆಯ ಶಿಕ್ಷಕರಿಗೆ ಕ.ಸಾಪ.ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯ ಮಕ್ಕಳ ಈ ಸಾಧನೆಗೆ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಹೀಗಾಗಿ ನಾವು ಕ.ಸಾ.ಪ.ವತಿಯಿಂದ ಈ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.  

ನಿವೃತ್ತ ಉಪನ್ಯಾಸಕ ಡಾ. ಶಿವಾನಂದ ಕಲ್ಲೂರ "ಕನ್ನಡ ಭಾಷಾ ವ್ಯಾಕರಣ ಬೋಧನೆ" ಕುರಿತು ಉಪನ್ಯಾಸ ನೀಡುತ್ತಾ, ನಮ್ಮ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ನಮ್ಮ ಪೂರ್ವಜರು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಕನ್ನಡ ಭಾಷೆಯನ್ನು ಕ್ರಾಂತಿಕಾರಿ ಬದಲಾವಣೆ ಮಾಡಿದ ಕೀರ್ತಿ 12 ನೇ ಶತಮಾನದ ಶಿವಶರಣರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಹಾಗೂ ಕನ್ನಡ ಭಾಷಾ ವ್ಯಾಕರಣದ ಬಗ್ಗೆ ಸವಿವರವಾಗಿ ಮಕ್ಕಳಿಗೆ ಮಾಹಿತಿ ನೀಡಿದರು.  

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶದ ಪ್ರಗತಿ ಸಾಧಿಸಿದ್ದಕ್ಕಾಗಿ ಈ ಶಾಲೆಯ ಶಿಕ್ಷಕರನ್ನು ಕ.ಸಾ.ಪ.ವತಿಯಿಂದ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ವಿದ್ಯಾದಾನ ಸಮಿತಿಯ ವ್ಯವಸ್ಥಾಪಕ ಮಂಡಳಿಯ ಚೇರ್ಮನ್ ವೀರಣ್ಣಾ ಪರಾಂಡೆ, ಗೌರವ ಕಾರ್ಯದರ್ಶಿ ಗಂಗಪ್ಪ ಜವಳಗಿ, ತಾಲೂಕ ಕ.ಸಾ.ಪ.ಅಧ್ಯಕ್ಷ ಮಹಾಂತೇಶ ನರೇಗಲ್ಲ ಅಧ್ಯಕ್ಷತೆ ವಹಿಸಿ ಹಾಗೂ ಸನ್ಮಾನಿತ ಶಿಕ್ಷಕರ ಪರವಾಗಿ ಪ್ರಧಾನಗುರು ಎ.ಎಂ.ಮುಲ್ಲಾ ಮತ್ತು ಪತ್ರಕರ್ತ ಸಿ.ವೈ.ಲಗಮಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾದಾನ ಸಮಿತಿಯ ವ್ಯವಸ್ಥಾಪಕ ಮಂಡಳಿಯ ವೈಸ್ ಚೇರ್ಮನ್ ಚನ್ನಬಸಪ್ಪ ಮಸೂತಿ, ಸದಸ್ಯರಾದ ಪರಮೇಶ್ವರ ಬೊಬ್ಬಿ, ಪುಂಡಲೀಕ ಭಜಂತ್ರಿ, ಧರೆಪ್ಪ ಬೊಬ್ಬಿ, ಪ್ರಚಾರ್ಯೆ ಕವಿತಾ ದೇಸಾಯಿ ಉಪಸ್ಥಿತರಿದ್ದರು. ಶಿಕ್ಷಕಿ ಮಂಜುಳಾ ಗಂಗಾಧರ ಸ್ವಾಗತಿಸಿದರು, ಶಿಕ್ಷಕ ರಮೇಶ ಮಡ್ಡಿಕಾರ ನಿರೂಪಿಸಿದರು, ಶಿಕ್ಷಕಿ ಆರ್‌.ಡಿ.ಮುರಾಳ ವಂದಿಸಿದರು. 


ಸುದ್ದಿ ಓದಿ