ಮಂಗಳೂರು ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷ: ಬೆಂಗಳೂರಿಗೆ ತೆರಳುತ್ತಿದ್ದ ವಿಮಾನದ ಟೇಕಾಫ್ ರದ್ದು, 236 ಮಂದಿ ಸುರಕ್ಷಿತ
ನವೆಂಬರ್ 16ರಂದು ಸಂಜೆ ಸುಮಾರು 6.05 ಗಂಟೆಗೆ ಈ ಘಟನೆ ಸಂಭವಿಸಿದೆ. ವಿಮಾನವು ರನ್ವೇಯಲ್ಲಿ ವೇಗ ಪಡೆದುಕೊಂಡು ಟೇಕಾಫ್ ಆಗಲು ಸಿದ್ಧವಾಗುತ್ತಿದ್ದ ವೇಳೆ ತಾಂತ್ರಿಕ ಸಮಸ್ಯೆ ಪತ್ತೆಯಾಗಿದೆ. ಕೂಡಲೇ ಪೈಲಟ್ ತುರ್ತು ಬ್ರೇಕ್ ಹಾಕಿ ವಿಮಾನವನ್ನು ನಿಲ್ಲಿಸಿದ್ದಾರೆ. ವಿಮಾನವು ಗಾಳಿಗೆ ಏರಿರಲಿಲ್ಲ.
ಬಳಿಕ ವಿಮಾನವನ್ನು ಪಾರ್ಕಿಂಗ್ ಪ್ರದೇಶಕ್ಕೆ ಕರೆದೊಯ್ದು ವಿಮಾನಯಾನ ಸಂಸ್ಥೆಯ ಎಂಜಿನಿಯರಿಂಗ್ ತಂಡದಿಂದ ತಾಂತ್ರಿಕ ಪರಿಶೀಲನೆ ನಡೆಸಲಾಯಿತು. ಪರಿಶೀಲನೆಯ ನಂತರ ವಿಮಾನವನ್ನು 'ಏರ್ಕ್ರಾಫ್ಟ್ ಆನ್ ಗ್ರೌಂಡ್' (AOG) ಎಂದು ಘೋಷಿಸಲಾಯಿತು. ಅಂದರೆ ತಾಂತ್ರಿಕ ಸಮಸ್ಯೆ ಸರಿಪಡಿಸುವವರೆಗೆ ವಿಮಾನ ಹಾರಾಟ ನಡೆಸಲು ಅನುಮತಿ ಇರುವುದಿಲ್ಲ.
ಈ ನಡುವೆ, ಟೇಕಾಫ್ ಪ್ರಯತ್ನದ ವೇಳೆ ವಿಮಾನದ ರೆಕ್ಕೆಯ ಭಾಗದಿಂದ ಕಿಡಿಗಳು ಹೊರಬರುತ್ತಿರುವುದಾಗಿ ಹೇಳಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತುರ್ತು ಬ್ರೇಕ್ ಹಾಕಿದ ನಂತರವೂ ವಿಮಾನವು ವೇಗದ ಪರಿಣಾಮ ಸ್ವಲ್ಪ ದೂರ ಚಲಿಸಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಘಟನೆಯ ನಂತರ ವಿಮಾನ ನಿಲ್ದಾಣ ಹಾಗೂ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಪ್ರಯಾಣಿಕರಿಗೆ ಅಗತ್ಯ ನೆರವು ಒದಗಿಸಿದರು. ಪ್ರಯಾಣಿಕರ ಮುಂದಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ಬೆಂಗಳೂರಿನಿಂದ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಲಾಯಿತು.
ಆದರೆ, 229 ಪ್ರಯಾಣಿಕರ ಪೈಕಿ ಕೇವಲ 34 ಮಂದಿ ಮಾತ್ರ ಪರ್ಯಾಯ ವಿಮಾನದಲ್ಲಿ ಪ್ರಯಾಣಿಸಲು ಮುಂದಾದರು. ಈ ವಿಶೇಷ ವಿಮಾನವು ನವೆಂಬರ್ 17ರಂದು ಮಧ್ಯರಾತ್ರಿ 12.10ಕ್ಕೆ ಮಂಗಳೂರಿನಿಂದ ಹೊರಟಿತು.
ವಿಮಾನದಲ್ಲಿ ನ್ಯಾಯಾಧೀಶರೊಬ್ಬರು, ಶಾಸಕರೊಬ್ಬರ ಕುಟುಂಬದ ಸದಸ್ಯರು ಹಾಗೂ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
ಬೆಂಗಳೂರಿನಲ್ಲೂ ಇಂಡಿಗೊ ವಿಮಾನದ ಟೇಕಾಫ್ ರದ್ದು
ಇದೇ ವೇಳೆ, ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮದುರೈಗೆ ತೆರಳಬೇಕಿದ್ದ ಇಂಡಿಗೊ ವಿಮಾನದಲ್ಲಿಯೂ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೇಕಾಫ್ ರದ್ದುಗೊಳಿಸಲಾಯಿತು.
ಇಂಡಿಗೊ ಸಂಸ್ಥೆಯ 6E 6526 ಸಂಖ್ಯೆಯ ವಿಮಾನವು ಬೆಳಗ್ಗೆ 7.20ಕ್ಕೆ ಹೊರಡಬೇಕಿತ್ತು. ರನ್ವೇಯಲ್ಲಿ ವಿಮಾನ ವೇಗ ಪಡೆದುಕೊಳ್ಳುತ್ತಿದ್ದಾಗ ಪೈಲಟ್ ತಾಂತ್ರಿಕ ಸಮಸ್ಯೆಯನ್ನು ಗಮನಿಸಿ ತುರ್ತು ಬ್ರೇಕ್ ಹಾಕಿದರು.
ಈ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರಿಗೆ ತುರ್ತು ಸುರಕ್ಷತಾ ಭಂಗಿಯಲ್ಲಿ ಕುಳಿತುಕೊಳ್ಳುವಂತೆ ವಿಮಾನ ಸಿಬ್ಬಂದಿ ಸೂಚಿಸಿದರು. ಸುಮಾರು 30 ನಿಮಿಷಗಳ ಕಾಲ ವಿಮಾನ ರನ್ವೇಯಲ್ಲಿಯೇ ನಿಂತಿದ್ದು, ಬಳಿಕ ಅದನ್ನು ಪಾರ್ಕಿಂಗ್ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
ನಂತರ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ಬೆಳಗ್ಗೆ 9.20ಕ್ಕೆ ಹೊರಡಲು ನಿಗದಿಯಾಗಿದ್ದ ಮತ್ತೊಂದು ವಿಮಾನದಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಯಿತು.
ಇದಕ್ಕೂ ಮೊದಲು ಸೆಪ್ಟೆಂಬರ್ 6ರಂದು ಬೆಂಗಳೂರಿನಿಂದ ಲಂಡನ್ಗೆ ತೆರಳುತ್ತಿದ್ದ ವರ್ಜಿನ್ ಅಟ್ಲಾಂಟಿಕ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. 270 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನವು ಟೇಕಾಫ್ ಆದ ಕೆಲವೇ ಸಮಯದಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.
ಪದೇಪದೇ ವರದಿಯಾಗುತ್ತಿರುವ ಇಂತಹ ಘಟನೆಗಳು ವಿಮಾನಯಾನ ಸುರಕ್ಷತೆ ಹಾಗೂ ವಿಮಾನಗಳ ನಿಯಮಿತ ತಾಂತ್ರಿಕ ಪರಿಶೀಲನೆಯ ಮಹತ್ವವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ.