ಜನಸಂಪರ್ಕ ಯಾತ್ರೆಯಲ್ಲಿ ಶಾಸಕ ಬಳ್ಳಾರಿ ಹೇಳಿಕೆ ಸುಳ್ಳು: ಪಾಟೀಲ
ಬ್ಯಾಡಗಿ 09: ಪಟ್ಟಣದ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಶಾಸಕ ವೀರುಪಾಕ್ಷಪ್ಪ ಬಳ್ಳಾರಿ ಅವರು 1600 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದಾಗಿ ಹಾಗೂ 50 ಕೋಟಿ ರೂ.ಗಳ ವೆಚ್ಚದಲ್ಲಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ್ದಾಗಿ ಹೇಳಿದ್ದು ಅರ್ಥಹೀನ ವಿಷಯವಾಗಿದೆ. ಅವರು ಮಾಡಿದ ಕಾಮಗಾರಿಗಳು ನೈಜವಾಗಿದ್ದಲ್ಲಿ ಶ್ವೇತ ಪತ್ರ ಹೋರಡಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ ಆಗ್ರಹಿಸಿದ್ದಾರೆ. ಬುಧವಾರ ಅವರು ತಾಲೂಕಾ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಆಸೆ ಆಮಿಷ ತೋರಿಸಿ ಜನರನ್ನು ಸೇರಿಸಿದ್ದಾರೆ.ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಹಣ ಕೊಟ್ಟು ಜನತೆಯನ್ನು ಸೇರಿಸಿದ್ದಾಗಿ ಆರೋಪಿಸಿದರು. ಆಸೆ ಆಮಿಷದಿಂದ ಜನ ಸೇರಿಸುವಂತ ಕಾರ್ಯ ಮಾಡಿದ್ದು ಉತ್ತಮ ರಾಜಕಾರಣಿಯ ಲಕ್ಷಣವಲ್ಲವೆಂದರು.
ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ರಸ್ತೆಗಳು ಕಿತ್ತು ಗುಂಡಿಗಳು ಬಿದ್ದು ಜನತೆ ಸಾಕಷ್ಟು ನೋವು ಅನುಭವಿಸುವಂತಾಗಿದೆ. ಪಟ್ಟಣದಲ್ಲಿಯ ರಸ್ತೆ ಅಗಲೀಕರಣ ಕಾರ್ಯ ದಲ್ಲಿ ಹಿನ್ನಡೆಯಾಗಿದೆ.ನ್ಯಾಯಾಲಯದಲ್ಲಿ ವಕೀಲರು ಸರಿಯಾಗಿ ವಾದ ಮಂಡನೆ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ವಿಫಲತೆಯ ಆಗು ಹೋಗುಗಳ ಹೊಣೆಯನ್ನು ಶಾಸಕರೇ ಹೊರಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಾನಪ್ಪ ಚೂರಿ, ಪ್ರಧಾನ ಕಾರ್ಯದರ್ಶಿ ರಮೇಶ್ ಸುತ್ತಕೋಟಿ, ನ್ಯಾಯವಾದಿ ಪ್ರಕಾಶ್ ಬನ್ನಿಹಟ್ಟಿ, ಶಂಕರ್ ಕುಸಗೂರ, ಮಂಜಣ್ಣ ಬೋವಿ, ಖಾದರ್ ಸಾಬ್ ದೊಡ್ಮನಿ, ರಮೇಶ ಮೋಟೆಬೆನ್ನೂರ, ದುರ್ಗೆಶ ಗೊಣೆಮ್ಮನವರ ಇತರರಿದ್ದರು.