ಬಳ್ಳಾರಿ: ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಗಳ ವಿಧಾನಗಳ ಕಾಯ್ದೆ ಕಾರ್ಯಾಗಾರ ಸಮಾನ ಲಿಂಗಾನುಪಾತಕ್ಕೆ ಶ್ರಮಿಸಿ: ನ್ಯಾ.ಹಂದ್ರಾಳ್ ಹೇಳಿಕೆ
ಬಳ್ಳಾರಿ 18 : ಮಹಿಳೆಯರ ಸಂಖ್ಯೆ ದಿನೇ ದಿನೇ ತೀರಾ ಕಡಿಮೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಮಹಿಳೆಯರ ಲಿಂಗಾನುಪಾತ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸಮಾನ ಲಿಂಗಾನುಪಾತಕ್ಕೆ ಸರ್ವರು ಶ್ರಮಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್ ಹೇಳಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಗಳ ವಿಧಾನಗಳ(ಲಿಂಗ ಆಯ್ಕೆ ನಿಷೇಧ) ಕಾಯ್ದೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಭ್ರೂಣಲಿಂಗ ಪತ್ತೆ ಕಾನೂನಿಗೆ ವಿರುದ್ಧ ಹಾಗೂ ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪಿಸಿಪಿಎನ್ಡಿಟಿ ಕಾಯ್ದೆ ಜಾರಿಗೆ ತರಲಾಗಿದೆ. ಇದಕ್ಕೆ ಸಮುದಾಯದ ಸಹಕಾರವು ಅಗತ್ಯವಾಗಿದೆ. ಸಮುದಾಯದ ಎಲ್ಲರು ಕೈ ಜೋಡಿಸಿ ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಮಾತನಾಡಿ, ಗಂಡು-ಹೆಣ್ಣು ಎರಡು ಸಮಾನ ಎಂಬುದರ ಕುರಿತು ಅರಿವು ಮೂಡಿಸಬೇಕಿದೆ. ದೇವರು ಯಾವುದೇ ಮಗುವನ್ನು ನೀಡಿದರೂ ಕೂಡ ಅದನ್ನು ಪಡೆದುಕೊಳ್ಳುವುದು ನಮ್ಮ ಕರ್ತವ್ಯ. ನಿಸರ್ಗವನ್ನು ಅಲುಗಾಡಿಸುವ ಮತ್ತು ಅದಕ್ಕೆ ವಿರುದ್ಧವಾಗಿ ಹೋಗುವ ಕೆಲಸ ನಾವು ಮಾಡಬಾರದು ಭ್ರೂಣಲಿಂಗ ಪತ್ತೆ ಮಾಡಿ ಅದು ಹೆಣ್ಣುಮಗು ಅಂತ ತಿಳಿದು ಅದನ್ನು ತೆಗೆಸಿಹಾಕಿದರೇ ಆ ಮಹಿಳೆಗೆ ತನ್ನ ಇಡೀ ಜೀವನಪೂರ್ತಿ ಕಾಡುತ್ತಿರುತ್ತದೆ. ಈ ರೀತಿಯ ಪ್ರಕರಣಗಳನ್ನು ನಾನು ಅನೇಕ ನೋಡಿದ್ದೇನೆ ಎಂದರ
ಕೆಲ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧವೆಂದು ಪರಿಗಣಿಸಲಾಗುತ್ತದೆ. ಮೊದಲ ಅಪರಾಧಕ್ಕೆ ರೂ.50 ಸಾವಿರ ದಂಡ ಮತ್ತು 3 ವರ್ಷ ಜೈಲು. ಮತ್ತೇ ಎರಡನೇ ಬಾರಿ ಈ ಕಾಯ್ದೆ ಉಲ್ಲಂಘಿಸಿದವರಿಗೆ ರೂ.1ಲಕ್ಷ ದಂಡ ಮತ್ತು 5 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಮಹಿಳೆಯರು, ಗಂಡ, ಅತ್ತೆ, ಮಾವ ಹಾಗೂ ಇತರೆ ಸಂಬಂಧಿಕರು ಭ್ರೂಣಲಿಂಗ ಪತ್ತೆ ಕ್ರಿಯೆಗೆ ಪ್ರೋತ್ಸಾಹಿಸಿದರೆ ಅಂತವರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವರಾಜ ಹೆಡೆ ಅವರು ಅಧ್ಯಕ್ಷತೆ ವಹಿಸಿದ್ದರು. ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆ ಸಮಿತಿ ಸದಸ್ಯ ಹಾಗೂ ವಕೀಲರಾದ ಪಾಟೀಲ್ ಸಿದ್ದಾರೆಡ್ಡಿ, ಎಫ್ಪಿಎಐಕಾರ್ಯದರ್ಶಿ ಪಿ.ಜಿ.ವಿಠ್ಠಲ್, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಸ್ತ್ರೀರೋಗ ತಜ್ಞರಾದ ಡಾ.ಪ್ರಶಾಂತ ಮತ್ತಿತರರು ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ನಿರೂಪಿಸಿದರು. ಕೆ.ಎಚ್.ಗೋಪಾಲ್ ಪ್ರಾರ್ಥಿಸಿದರು . ಬಂಡೆಪ್ಪ ಟೊಣ್ಣಿ ವಂದಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆ ಬಗ್ಗೆ ಕಾನೂನು ಸಲಹೆ ಹಾಗೂ ಉಪನ್ಯಾಸ ನಡೆಯಿತು.