ಯರಗಟ್ಟಿ

ಕರ್ನಾಟಕ ಏಕೀಕರಣಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರ: ಬಿರಾದಾರ

ಕರ್ನಾಟಕ ಏಕೀಕರಣಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರ: ಬಿರಾದಾರ

ಯರಗಟ್ಟಿ 30: ಇಪ್ಪತ್ತಕ್ಕೂ ಹೆಚ್ಚು ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸುವಲ್ಲಿ ಗಡಿನಾಡಿನ ಸ್ವಾಭಿಮಾನದ ಗೂಡಾದ ಬೆಳಗಾವಿ ಜಿಲ್ಲೆಯ ಕೊಡುಗೆಯು ಅಪಾರವಾದುದು ಎಂದು ಸ್ಥಳೀಯ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಯರಗಟ್ಟಿ ತಾಲೂಕು ಘಟಕದ ವತಿಯಿಂದ ಕರ್ನಾಟಕಅ50 ಸಂಭ್ರಮಾಚರಣೆ ಪ್ರಯುಕ್ತ ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ "ಕರ್ನಾಟಕದ ಏಕೀಕರಣಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದ ಅವರು, ಗಂಗಾಧರರಾವ ದೇಶಪಾಂಡೆ, ಶಿವಬಸವ ಸ್ವಾಮೀಜಿ, ಅಣ್ಣೂ ಗುರೂಜಿ, ದಾತಾರ್ ಸೇರಿದಂತೆ ಹಲವು ಮಹನೀಯರು ತಮ್ಮ ಮನೆ-ಮಠ, ಬಂಧು-ಬಾಂಧವರನ್ನು ತೊರೆದು ಹೋರಾಡಿದ ಫಲವೇ ಅಖಂಡ ನಿರ್ಮಾಣವಾಗಿದೆ. ಅವರ ತ್ಯಾಗದ ಫಲವಾದ ಕರುನಾಡಿನ ಪರಂಪರೆ, ಸಂಸ್ಕೃತಿ-ಸಂಸ್ಕಾರಗಳನ್ನು ಉಳಿಸಿ-ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಪ್ರತಿಪಾದಿಸಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸವದತ್ತಿ ಮತಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಅವರು ಕನ್ನಡ ನಾಡು-ರಕ್ಷಣೆಗೆ ದುಡಿದ ಮಹನೀಯರ ಸ್ಮರಣೆಯ ಕಾರ್ಯಕ್ರಮಗಳನ್ನು ಯರಗಟ್ಟಿ ಕನ್ನಡ ಸಾಹಿತ್ಯ ಪರಿಷತ್ತು ವರ್ಷವಿಡಿ ಆಯೋಜಿಸುವ ಯೋಜನೆ ಮಾಡಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಪ್ರಶಂಸಿಸಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬೈಲಹೊಂಗಲದ ಮಾಜಿ ಶಾಸಕ ವಿಶ್ವನಾಥ ಪಾಟೀಲ ಅವರು ಕನ್ನಡ ನಾಡು ರೂಪುಗೊಳ್ಳಲು ಶ್ರಮಿಸಿದ ಹಿರಿಯರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುವುದರೊಂದಿಗೆ ನಿತ್ಯ ಜೀವನದಲ್ಲಿ ಕನ್ನಡ ಬಳಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಮಾತನಾಡಿ ಮಕ್ಕಳು ಕನ್ನಡದಲ್ಲಿ ಕಥೆ, ಕವಿತೆ ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಸಾ.ಪ. ಯರಗಟ್ಟಿ ತಾಲುಕು ಘಟಕದ ಅಧ್ಯಕ್ಷ ತಮ್ಮಣ್ಣ ಕಾಮಣ್ಣವರ ಅವರು ಮಾತನಾಡಿ ಕರುನಾಡಿಗೆ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷ ಪೂರೈಸಿದ ಪ್ರಯುಕ್ತ ಯರಗಟ್ಟಿ ತಾಲೂಕು ಘಟಕದ ವತಿಯಿಂದ ವರ್ಷವಿಡಿ ಪ್ರತಿ ತಿಂಗಳಿಗೊಂದರಂತೆ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಕಲೆ, ಇತಿಹಾಸವನ್ನು ಕುರಿತ ಉಪನ್ಯಾಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ವರ್ಷದ ಕೊನೆಯಲ್ಲಿ ಪುಸ್ತಕ ಹೊರತರುವ ಯೋಜನೆಯಿದೆ ಎಂದು ತಿಳಿಸಿದರು. 

ಡಾ. ಮಲ್ಲಿಕಾರ್ಜುನ ಇಂಚಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ, ಪ್ರೊ. ರಾಯನಗೌಡರ ಮರಿಗೌಡರ, ರಮೇಶಗೌಡ ದೇವರಡ್ಡಿ, ರಂಗಪ್ಪ ಜೂಗನವರ, ಶಿವಯೋಗಿ ಕುರುಬಗಟ್ಟಿಮಠ, ಡಾ. ಶಂಕರಲಿಂಗಪ್ಪ ಮತ್ತು ಭಾಸ್ಕರ ಹಿರೇಮೇತ್ರಿ, ಡಾ. ವಿಶ್ವನಾಥ ತಾವಂಶಿ, ದೇವೇಂದ್ರ ಕಮ್ಮಾರ, ಶಿವಾನಂದ ಕರಿಗೊಣ್ಣವರ, ರಮೇಶ ಪಾಟೀಲ, ಮಹಾಂತೇಶ ಉಪ್ಪಿನ, ನಿಖಿಲ ಪಾಟೀಲ ಉಪಸ್ಥಿತರಿದ್ದರು. ಶಿವಕುಮಾರ ಜಕಾತಿ ನಿರೂಪಿಸಿದರು, ವಿಜಯ ಮರಡ್ಡಿ ಸ್ವಾಗತಿಸಿದರು, ಸುರೇಶ ಗಲಗಲಿ ವಂದಿಸಿದರು. 


ಸುದ್ದಿ ಓದಿ