ಲೇಖನಗಳು

ಬೆಳಗಾವಿ ಒಂದು ಅಧ್ಯಯನ ಹಿ ಒಂದು ಅವಲೋಕನ

ಬೆಳಗಾವಿ ಒಂದು ಅಧ್ಯಯನ ಹಿ ಒಂದು ಅವಲೋಕನ

                       ಪ್ರಾ. ಬಿ. ಎಸ್‌. ಗವಿಮಠ ಅವರು ನಮ್ಮ ನಡುವಿನ ಅಲ್ಲಮ ಪ್ರತಿಭೆ.  ಅವರ ವ್ಯಕ್ತಿತ್ವದ ಪ್ರಮುಖ ಗುಣ ವಿಶೇಷತೆಗಳು ಮೂರು- 1) ಆವೇಶ, 2) ವಿವೇಕ ಮತ್ತು 3) ಉತ್ಸಾಹ.  ಸಂವೇದನೆಗಳ ಆವೇಶ ಸಾಂಸ್ಕೃತಿಕ ವಿವೇಕ ಇತಿಹಾಸ ಕಥನಿಸುವ ಉತ್ಸಾಹ.  ಆವೇಶ, ಉದ್ವೇಗ ಮತ್ತು ಉತ್ಸಾಹಗಳನ್ನು ಸಮನ್ವಯಗೊಳಿಸುವ ಸಂಯಮ ಗವಿಮಠರ ಸಾಂಸ್ಕೃತಿಕ ವಿವೇಕ.  ಆ ವಿವೇಕದ ಅಭಿವ್ಯಕ್ತಿ “ಬೆಳಗಾವಿ ಒಂದು ಅಧ್ಯಯನ”.  ಬೆಳಗಾವಿ ಒಡಲೊಳಗಿನ ಕನ್ನಡ ಜಗತ್ತಿನ ಅನಾವರಣ, ಈ ಅಧ್ಯಯನ ಬೆಳಗಾವಿಯ ಕನ್ನಡ ಆತ್ಮಕಥನ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ವಿಜಯಪುರದ ಚರಿತ್ರೆಯನ್ನು ಖಚಿತವಾಗಿ ಹೇಳುವಂತೆ ಬೆಳಗಾವಿಯ ಇತಿಹಾಸವನ್ನು ನಿಖರವಾಗಿ ಕಥಿಸಬಲ್ಲವರು ಬಿ. ಎಸ್‌. ಗವಿಮಠರು.  ಚರಿತ್ರೆ ಭವಿಷ್ಯದ ಆಲೇಖ.  ವರ್ತಮಾನದ ವಿದ್ಯಮಾನಗಳನ್ನು ಸರಿಯಾಗಿ ಅರಿಯುವ ಸಂವೇದನಾಶೀಲ ಸಾಂಸ್ಕೃತಿಕ ಮನಸ್ಸು (ಪ್ರತಿಭೆ) ಮಾತ್ರ ನಿಖರವಾದ ಚರಿತ್ರೆಯನ್ನು ಲೇಖಿಸಲು ಸಾಧ್ಯ.  ಕೆ.ಎಲ್‌.ಇ. ಸಂಸ್ಥೆಯ ಸಾಂಸ್ಕೃತಿಕ ಸಂಕಥನ ಮತ್ತು ಬೆಳಗಾವಿ ಕನ್ನಡ ಚಾರಿತ್ರಿಕ ಕಥನ ಗವಿಮಠರು ಕನ್ನಡಕ್ಕೆ ನೀಡಿದ ಅಮೂಲ್ಯ ಕೊಡುಗೆಗಳು.  ಅದಕ್ಕಾಗಿ ನಾವೆಲ್ಲರೂ ಅವರನ್ನು ಅಭಿನಂದಿಸಬೇಕು.  ಈ ಕೃತಿಯ ಆಕೃತಿ (ದೇಹ) ಬೆಳಗಾವಿ; ಆತ್ಮ ಕನ್ನಡ; ಭಾವ ಕರ್ನಾಟಕ.  ಚರಿತ್ರೆಯೊಳಗಿನ ಬೆಳಗಾವಿ, ಬೆಳಗಾವಿಯೊಳಗಿನ ಕನ್ನಡ; ಬೆಳಗಾವಿ ಕನ್ನಡದೊಳಗಿನ ಕರ್ನಾಟಕವನ್ನು ದರ್ಶಿಸುವುದೇ ಈ ಅಧ್ಯಯನದ ಪ್ರಮುಖ ಉದ್ದೇಶವಾಗಿದೆ. 2017ರಲ್ಲಿ ಗವಿಮಠರು ಸಂಪಾದಿಸಿ, ಪ್ರಕಟಿಸಿದ ‘ಬೆಡಗಿನ ಬೆಳಗಾವಿ’ ಕೃತಿಯ ವಿಸ್ತೃತ ಮತ್ತು ಪರಿಷ್ಕೃತ ರೂಪ ಈ ಬೆಳಗಾವಿ ಅಧ್ಯಯನ.  ಇದರಲ್ಲಿ ಹನ್ನೊಂದು ಲೇಖಕರ ಹದಿನೇಳು ಲೇಖನಗಳಿದ್ದು, ಗವಿಮಠ ಅವರದ್ದೇ ಏಳು ಲೇಖನಗಳಿವೆ.  ಅವುಗಳಲ್ಲಿ ಋಟಿಠಚಿಣತಜ ಮತ್ತು ಗಿಜಡಿಥಿ ಟಿಜಿಠಟಚಿಣತಜ ಲೇಖನ ‘ನೆನೆವುದೆನ್ನ ಮನಂ ಬೆಳಗಾವಿ ದೇಶಮಂ’.  ಇದು ಭೂತವನ್ನು ವರ್ತಮಾನಗಳನ್ನು ಬೆಸೆಯುವ ಚರಿತ್ರೆಯ ಸೇತುಬಂಧ.    

                               ಬೆಳಗಾವಿಯ ವಿಕಾಸದ ನಾಲ್ಕು ಹಂತಗಳ ದಾಖಲೆಗಳ ಉಲ್ಲೇಖಗಳು ಗವಿಮಠರ ಅಧ್ಯಯನಾಸಕ್ತಿ.  ಬೆಳಗಾವಿ ನೆಲದಾಳವನ್ನು ಬಗೆದ ಶಕ್ತಿ ಮತ್ತು ಭೂತವನ್ನು ವ್ಯಾಖ್ಯಾನಿಸಿ ಚರಿತ್ರೆ ಕಟ್ಟುವ ಯುಕ್ತಿಗಳಿಗೆ ಕನ್ನಡಿ ಹಿಡಿಯುತ್ತವೆ.  ಬೆಳಗಾವಿಯ ಅದಮ್ಯ ಅಭಿಮಾನವೇ ಅವರನ್ನು ಇತಿಹಾಸ ರಚನೆಗೆ ಪ್ರೇರಣೆ ನೀಡಿದೆ. ಇಲ್ಲಿಯ ಹದಿನೇಳು ಲೇಖನಗಳನ್ನು ವಿಷಯಾನುಕ್ರಮವಾಗಿ ಮೂರು ಭಾಗಗಳಲ್ಲಿ ವಿಂಗಡಿಸಬಹುದು.  ಬೆಳಗಾವಿ ಅಧ್ಯಯನದ ಮೊದಲ ಆರು ಲೇಖನಗಳು ಬೆಳಗಾವಿಯ ರೂಪ ಕೇಂದ್ರಿತವಾಗಿದ್ದು ಚರಿತೆಯ ಆಳ ಭೇದಿಸಿ, ಭೂಗೋಳದ ನಕ್ಷೆ ಬರೆಯುತ್ತವೆ.  ಬೆಳಗಾವಿಯ ಆತ್ಮ ಕೇಂದ್ರಿತವಾದ ಅನಂತರದ ಆರು ಲೇಖನಗಳು ಬೆಳಗಾವಿ ಕನ್ನಡಿಗರ ಕನ್ನಡ ಹೋರಾಟಗಳ ಅಗ್ನಿಪಥವನ್ನು ರೇಖಿಸುತ್ತವೆ.  ಕೊನೆಯ ಐದು ಲೇಖನಗಳು ಕರ್ನಾಟಕ ದೊಂದಿಗಿನ ಬೆಳಗಾವಿಯ ಹೊಕ್ಕಳು ಬಳ್ಳಿಯ ಸಂಬಂಧದ ಸಾಂಸ್ಕೃತಿಕ ಚಹರೆಗಳನ್ನು ಪ್ರದರ್ಶಿಸುತ್ತವೆ.  ಬೆಳಗಾವಿಯ ಅಂತರಂಗದ ಕರ್ನಾಟಕವನ್ನು ಕ್ಲಿಕ್ಕಿಸುವ ಗವಿಮಠರ ಆಶಯ ಸಂಪೂರ್ಣ ಸಫಲವಾಗಿದೆ.  ವಿಷಯ ಸಂಯೋಜನೆ, ಲೇಖಗಳನ್ನು ಜೋಡಿಸುವ ಕ್ರಮ, ಸಂಪಾದನಾ ಶಿಸ್ತು ಎದ್ದು ಕಾಣುತ್ತವೆ.  ಮಹಾಪ್ರಬಂಧದ ಈಡಿಚಿಟಜ ಕೊಟ್ಟರೆ ಈ ಕೃತಿ ಯಾವುದೇ ವಿಶ್ವವಿದ್ಯಾಲಯದ ಆ.ಐಣಣ. ಪದವಿ ಗಳಿಸುವುದರಲ್ಲಿ ಸಂದೇಹವೇ ಇಲ್ಲ.  ನಮ್ಮ ಬೆಳಗಾವಿ ಅಂದು ಬೆಡಗು; ಇಂದು ಬೆರಗು.  ಬೆಳಗಾವಿಯ ಇತಿಹಾಸ ನಿಜಕ್ಕೂ ಅತ್ಯಂತ ರೋಚಕ.  ಇತಿಹಾಸ ಪೂರ್ವ ಕಾಲದಲ್ಲಿ ಆದ ಮಾನವನ ಪ್ರಾಚ್ಯ ನೆಲೆಯಾಗಿತ್ತು.  ‘ಬೆಳಗಾವಿ’ ಪದ ನಿಷ್ಪತ್ತಿ ಸಂಶೋಧಕರಿಗೊಂದು ಸವಾಲು.  ಮೂಲದಲ್ಲಿ ಪುಟ್ಟ ಗ್ರಾಮವಾಗಿದ್ದ ಬೆಳಗಾವಿ ವಿವಿಧ ಕಾಲಘಟ್ಟಗಳಲ್ಲಿ ತನ್ನ ಹೆಸರನ್ನು ಬದಲಿಸಿಕೊಳ್ಳುತ್ತ ಮಹಾನಗರವಾಗಿ ಬೆಳೆದು, ಕರ್ನಾಟಕದ ಎರಡನೇ ರಾಜಧಾನಿಯಾದುದು ಸೋಜಿಗದ ಸಂಗತಿ.  ‘ಬೆಳಗಾವಿ’ ಶುದ್ಧ ಕನ್ನಡದ ಗ್ರಾಮ ನಾಮ.  ಬೆಳ್ಳ ಎಂದರೆ ಶಿವ.  ಬೆಳಗಾವಿ ಎಂದರೆ ಶಿವನ ಊರು.  ಹಳೆಯ ಬೆಳಗಾವಿ ಪ್ರದೇಶದಲ್ಲಿ ಹಳೆಯ ಶಿವಾಲಯವಿದೆ ಎಂದಿದ್ದಾರೆ ರಾಮಚಂದ್ರ ಡವಳಿಯವರು.  ಈ ಸಂಕಲನದಲ್ಲಿರುವ ಅವರ ಲೇಖನವು ಹಲವಾರು ಮಹತ್ವದ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ.  ಚಿಕ್ಕ ಹಳ್ಳಿಯಾಗಿದ್ದ ಬೆಳಗಾವಿ ಪಾಶ್ಚಾಪುರ ತಾಲೂಕಿನಲ್ಲಿತ್ತು. 

                            1820ರಲ್ಲಿ ಕೇವಲ 7000 ಜನಸಂಖ್ಯೆ ಹೊಂದಿತ್ತು.  ಆಗ ಮದ್ರಾಸ್ ಇಲಾಖೆಯ ಬಳ್ಳಾರಿ ಜಿಲ್ಲೆಗೆ ಸೇರಿತ್ತು.  1821ರಲ್ಲಿ ಮುಂಬೈ ಇಲಾಖೆಯ ಧಾರವಾಡ ಜಿಲ್ಲೆಯ ವ್ಯಾಪ್ತಿಗೆ ಬಂತು.  1836ರಲ್ಲಿ ಸ್ವತಂತ್ರ ಜಿಲ್ಲೆಯಾಯಿತು.  ಡವಳಿಯವರು ಬೆಳಗಾವಿಗೂ ಬಳ್ಳಾರಿ ನಾಲಾಗೂ ಕಲ್ಪಿಸುವ ಸಂಬಂಧ ಚಿಂತನೀಯವಾಗಿದೆ.  ಮೋಹನ ಕಳಸದ ಅವರ ‘ಬಳ್ಳಾರಿ ನಾಲಾ’ದ ಕುರಿತ ಲೇಖನ ಇದಕ್ಕೆ ಇನ್ನಷ್ಟು ಪೂರಕ ಮಾಹಿತಿ ಒದಗಿಸುತ್ತದೆ.  “ಬಳ್ಳಾರಿ ನಾಲಾ”ದ ಮೊದಲಿನ ಹೆಸರು ಅರವಾಳಿ.  ಅರೆ ಎಂದರೆ ಕಣಿವೆ, ಹರಿ ಎರಡು ಗುಡ್ಡಗಳ ನಡುವಿನ ಹರಿವು (ತೊರೆ).  ಎಳ್ಳೂರು ಹತ್ತಿರದ ದೇವಗಾನಹಟ್ಟಿಯ ಬಳಿ ಇದರ ಉಗಮ ಸ್ಥಳ.  1899ರಲ್ಲಿ ಅದು ‘ಬಳ್ಳಾರಿ ನಾಲಾ’ ಎಂದು ಹೆಸರು ಪಡೆಯಿತಂತೆ.  ಇದರ ಮೂಲ ಹೆಸರೇ ಬೆಳ್ಳಾರಿ ಎಂದಿರಬೇಕು ಅಥವಾ ‘ಬೆಳಾರಿ’ ಎಂದಿರಬೇಕು. ಬೆಳಗಾವಿಯ ಸುತ್ತಮುತ್ತ ಅನೇಕ ಸರೋವರಗಳಿದ್ದವು.  ಸುದರ್ಶನ ಸರೋವರ, ನಾಗರ ಸರೋವರ, ಆನೆಗೊಳ, ಜಕ್ಕೇರಿ ಹೊಂಡ ಇತ್ಯಾದಿ.  ಸುದರ್ಶನ ಸರೋವರವೇ ಬಳ್ಳಾರಿ ನಾಲಾದ ತಾಯಿ ಎಂದು ಹಂದೂರ ಇಲ್ಲಿಯ ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವರು.   ಬೆಳಗಾವಿಯ ಪ್ರಾಚೀನತೆಯನ್ನು ಸಾರುವ ಕೋಟೆ, ಕೆರೆ, ಬಾವಿ, ಸ್ಮಾರಕ, ಬಸೀದೆ, ಮಸೀದೆ, ದೇವಾಲಯ ಮೊದಲಾದವುಗಳ ಕುರಿತು ಆಳ ಮತ್ತು ವಿವರವಾದ ಅಧ್ಯಯನದ ಅಗತ್ಯವನ್ನು ಪ್ರಸ್ತುತ ಕೃತಿ ಒತ್ತಿ ಹೇಳುತ್ತದೆ.  ಜೊತೆಗೆ ಬೆಳಗಾವಿ ಸಂಶೋಧಕರ ಪಾಲಿನ ಕೈಪಿಡಿಯಾಗಿ ಮಾರ್ಗದರ್ಶನ ಮಾಡುತ್ತದೆ. ಶಾತವಾಹನರಿಂದ ಮೊದಲುಗೊಂಡು ಕದಂಬ, ಚಾಲುಕ್ಯ, ರಾಷ್ಟೊಕೂಟ, ಶಿಲಾಹಾರ, ವಿಜಯನಗರ ರಾಜರ ಆಳ್ಚಿಕೆಗಳನ್ನು ಕಂಡ ಬೆಳಗಾವಿ ಕಾಲ ಕಾಲಕ್ಕೆ ವಿಸ್ತಾರಗೊಳ್ಳುತ್ತ ಹೋಯಿತು.  ರಾಷ್ಟೊಕೂಟರ ಕಾಲದ ರಟ್ಟರ ಆಡಳಿತದಲ್ಲಿ ಪ್ರಸಿದ್ಧಿ ಪಡೆಯಿತು.  ಬೆಳಗಾವಿಯ ಕೋಟೆಯೊಂದೇ ಪಿ.ಎಚ್‌.ಡಿ. ಅಧ್ಯಯನದ ವಸ್ತುವಾಗುತ್ತದೆ.  ಮುಸ್ಲಿಂ ಅರಸರ ಕಾಲದಲ್ಲಿ ಮುಸ್ತಾಫಾಬಾದ್ ಆಯಿತು, ಅಜಂ ನಗರ ಆಯಿತು.  ಮರಾಠಾ ರಾಜರ ಆಡಳಿತದಲ್ಲಿ ಬೆಳಗಾಂವ ಆಯಿತು, ಬ್ರಿಟಿಷರ ದಾಖಲೆಗಳಲ್ಲಿ ಬೆಲಗಮ್ ಆಯಿತು. ಸ್ವಾತಂತ್ರ್ಯ ನಂತರ ಮತ್ತೆ ಬೆಳಗಾವಿ ಆಗಿದೆ. ‘ಹೆಸರಿನಲ್ಲಿ ಏನಿದೆ?’ ಎನ್ನಬೇಡಿ.   

                           ಹೆಸರಿನಲ್ಲಿಯೇ ಬೆಳಗಾವಿ ಚರಿತ್ರೆಯ ಬೆಡಗಿದೆ; ಬೆರಗಿದೆ.  ಈ ಪುಸ್ತಕದ ಮೂರನೇ ಲೇಖನವು ಬೆಳಗಾವಿಯ ಮೂಲ ಹೆಸರು ಜೀರ್ಣಸಿತಪುರ ಎಂದು ಹೇಳುತ್ತದೆ.  ಸಾತವಾಹನರ ಪೂರ್ವದಲ್ಲಿ ಈ ಹೆಸರಿತ್ತೆಂದು ಬಾಹುಬಲಿ ಹಂದೂರ ಅಭಿಪ್ರಾಯಪಡುತ್ತಾರೆ.  ಆದರೆ ಇದು ಬೆಳಗಾವಿ ಪದದ ಸಂಸ್ಕೃತೀಕರಣ.  ಜೀರ್ಣಸಿತಪುರವೆಂದರೆ ಹಳೆಯ ಬೆಳಗಾವಿ.  ಬಿದಿರಳ್ಳಿಯ ಸಂಸ್ಕೃತ ರೂಪ ವೇಣುಗ್ರಾಮ. ಇಂದು ಬೆಳಗಾವಿ ಭಾಷಾ ಮತ್ತು ಗಡಿ ವಿವಾದದ ಕೇಂದ್ರವಾಗಿ ಅನಗತ್ಯ ಸುದ್ದಿಯಲ್ಲಿದೆ.  ಮರಾಠಾ ಅರಸರ ಕಾಲದಲ್ಲಿ ಸಹಜವಾಗಿ ಮರಾಠಿ ಬೆಳಗಾವಿಯನ್ನು ಆಕ್ರಮಿಸಿತು.  ಆದರೆ ಬ್ರಿಟಿಷರಿಗೆ ಬೆಳಗಾವಿ ಕರ್ನಾಟಕದ ಒಂದು ಭಾಗವೆಂದು ಮನವರಿಕೆಯಾಗಿತ್ತು. ಆ ಎಲ್ಲ ದಾಖಲೆಗಳನ್ನು ಚಿ.ಮೂ. ‘ಬ್ರಿಟಿಷರ ಕಾಲದ ಬೆಳಗಾವಿ’ ಲೇಖನದಲ್ಲಿ ಉಲ್ಲೇಖಿಸಿರುವರು.  ಈ ಲೇಖನವು ‘ಬೆಳಗಾವಿ ಅಧ್ಯಯನ’ದ ಮೌಲ್ಯವನ್ನು ಹೆಚ್ಚಿಸಿದೆ.  ಗಡಿ ವಿವಾದವಿಂದು ಸುಪ್ರೀಂ ಕೋರ್ಟಿನಲ್ಲಿದೆ.  ಕನ್ನಡಿಗರ ವಾದಕ್ಕೆ ಬೇಕಾದ ಅತ್ಯಂತ ಮಹತ್ವದ ದಾಖಲೆಗಳೆಲ್ಲವೂ ಗವಿಮಠರ ಈ ಪುಸ್ತಕದಲ್ಲಿವೆ.  ಬೆಳಗಾವಿ ಕನ್ನಡಿಗರ ಕನ್ನಡಪರ ಚಳವಳಿಗಳ ಕುರಿತು ಆರು ಲೇಖನಗಳಿದ್ದು ಒಂದು ಶತಮಾನದ ಕಾಲಾವಧಿಯ ಹೋರಾಟವನ್ನು ಅನಂತ ಕಲ್ಲೋಳ, ಶಂಕರ ಬುಚಡಿ, ರಾಘವೇಂದ್ರ ಜೋಶಿ, ಆರ್‌. ಎಸ್‌. ಚಾಪಗಾವಿ, ಅಶೋಕ ಚಂದರಗಿ ಮತ್ತು ಗವಿಮಠರ ಲೇಖನಗಳು ವಿವರವಾಗಿ ನಿರೂಪಿಸುತ್ತವೆ.  ಇವರೆಲ್ಲರೂ ಆ ಹೋರಾಟದ ಭಾಗವಾಗಿರುವುದು ಇನ್ನೂ ವಿಶೇಷ. 

                          ಬೆಳಗಾವಿಯಲ್ಲಿ ಜರುಗಿನ ಕರ್ನಾಟಕ ಏಕೀಕರಣ ಪರಿಷತ್ತು ಸಭೆಗಳು, ಅ.ಭಾ.ಕ.ಸಾ.ಸಮ್ಮೇಳನಗಳು, ಕೆ.ಎಲ್‌.ಇ. ಸಂಸ್ಥೆಯ ಆರಂಭ, ನಾಡಹಬ್ಬ ಆಚರಣೆ, ನಾಗನೂರು ಮಠದ ಪ್ರಸಾದ ನಿಲಯ ಸ್ಥಾಪನೆ, ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರಕಟಣೆ, ಸಾಹಿತಿಗಳ ಕರೆ ಮೊದಲಾದ ಮಹತ್ವದ ವಿಷಯಗಳನ್ನು ಅನಂತ ಕಲ್ಲೋಳ ಕಥಿಸಿದರೆ ಎರಡನೇ ಘಟ್ಟದ ಹೋರಾಟ 1950ರಿಂದ 70ರವರೆಗಿನ ವಿದ್ಯಮಾನಗಳನ್ನು ಶಂಕರ ಬುಚಡಿಯವರು ಸವಿಸ್ತಾರವಾಗಿ ಪ್ರಸ್ತಾಪಿಸುತ್ತಾರೆ.  ಫಜಲ ಅಲಿ ಆಯೋಗದ ವರದಿಯಂತೆ ಕರ್ನಾಟಕ ರಾಜ್ಯ ರಚನೆಗೊಂಡ ಮೇಲೆ ಹತಾಶರಾದ ಬೆಳಗಾವಿ ಮರಾಠಿಗರು ಕನ್ನಡಿಗರ ಮೇಲೆ ಎಸಗಿದ ದೌರ್ಜನ್ಯ, ಮಹಾಜರ ಆಯೋಗದ ರಚನೆ, ಅದರ ವಿರುದ್ಧ ಕನ್ನಡಿಗರ ಆಕ್ರೋಶ, ಮಹಾಜನರಿಗೆ ಸಲ್ಲಿಸಿದ ಮನವಿಗಳು (್ಲ್ಘ್ಪೂ್ಠ್ಲೈಿ ಮುಸ್ಲಿಂ ಮುಖಂಡರು) ಮೊದಲಾದ ಚಾರಿತ್ರಿಕ ಸಂಗತಿಗಳನ್ನು ಬುಚಡಿಯವರು ಪ್ರಸ್ತಾಪಿಸಿದ್ದಾರೆ.  ಬೆಳಗಾವಿ ಕರ್ನಾಟಕದಲ್ಲಿ ಉಳಿಯಿತು.  ಆದರೆ ಕೆಲ ಮರಾಠಿ ಪುಂಡರ ಪುಂಡಾಟಿಕೆ ಹೆಚ್ಚಾಯಿತು.  ನಗರಸಭೆಗೆ ಕನ್ನಡ ಫಲಕ ಹಾಕಲು ದೊಡ್ಡ ಹೋರಾಟ ಮಾಡಬೇಕಾಯಿತು. ಆ ಕನ್ನಡಿಗರ ಕರ್ಮಕಥೆ ರಾಘವೇಂದ್ರ ಜೋಶಿಯವರ ಲೇಖನದಲ್ಲಿದೆ.  ನವೆಂಬರ್ 1 ರಂದು ಕರಾಳದಿನ ಆಚರಿಸುತ್ತಿದ್ದವರಿಗೆ ಸವಾಲಾಗಿ ಕನ್ನಡಿಗರು ಸಂಘಟಿತಗೊಂಡು 1973ರಲ್ಲಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಿದ್ದು ಬೆಳಗಾವಿಯ ಹೊಸ ಚರಿತ್ರೆಗೆ ನಾಂದಿಯಾಯಿತು.  ಅನಂತರದ ಗಲಭೆಗಳು, ಚುನಾವಣೆಗಳು, ಚಳವಳಿಗಳು, ಗಿನ್ನಿಸ್ ದಾಖಲೆ ಬರೆದ ಹೋರಾಟಗಾರರು, ಶಕ್ತಿಯುತವಾದ ಕನ್ನಡ ಸಂಘಟನೆಗಳು, ಒಡೆದ ಮನೆಯಾದ ಮ.ಏ.ಸಮಿತಿ ಇತ್ಯಾದಿ ವಿಷಯಗಳನ್ನು ಜೋಶಿಯವರು ಬೆಳಗಾವಿಯ ಆತ್ಮಕಥೆ ಯಂತೆ ಬರೆದಿದ್ದಾರೆ. 

                                1973, 86ರ ಹಿಂಸಾಚಾರದ ನಂತರ ಮ.ಏ.ಸಮಿತಿ ಪ್ರಾಬಲ್ಯ ಕುಗ್ಗಿ ಹೋಗಿತ್ತು.  ಅದಕ್ಕೆ ಜೀವ ತುಂಬಿದ ಘಟನೆ ಮೋರೆ ಮುಖಕ್ಕೆ ಮಸಿ ಬಳೆದದ್ದು ಎನ್ನುತ್ತಾರೆ ರಾಘವೇಂದ್ರ ಜೋಶಿ.  ಜೋಶಿಯವರ ಲೇಖನದ ಕೊನೆಯ ಮಾತು ನಗ್ನಸತ್ಯ.  ಭಾಷಾ ವಿವಾದ ಈಗ ಮುಗಿದ ಅಧ್ಯಾಯ. ಸತ್ತ ಹುಲಿಗೆ ಜೀವ ತುಂಬುವ ಪಂಚತಂತ್ರದ ಬುದ್ಧಿಜೀವಿಗಳ ಕಥೆ ನಮ್ಮದಾಗಬಾರದೆಂಬ ಅವರ ಕಳಕಳಿ ಅರ್ಥಪೂರ್ಣವಾದುದು. ಬೆಳಗಾವಿ ರಾಜಕಾರಣಕ್ಕೊಂದು ತಿರುವು ನೀಡಿದ ಘಟನೆ ಸಿದ್ದನಗೌಡ ಪಾಟೀಲರು ಬೆಳಗಾವಿ ಮೇಯರ್ ಆದದ್ದು.  ಕನ್ನಡದ ಮೊದಲ ಮೇಯರ್ ಆಗುವ ಮೂಲಕ ಬೆಳಗಾವಿ ಕನ್ನಡಿಗರಿಗೆ ದೀವಳಿಗೆ ಖುಷಿ ನೀಡಿದ ಪ್ರಸಂಗವನ್ನು ಚಾಪಗಾವಿಯವರು ರಸವತ್ತಾಗಿ ವಿವೇಚಿಸಿದ್ದಾರೆ.  ನಾಟ್ಯಭೂಷಣ ಏಣಗಿ ಬಾಳಪ್ಪನವರ ‘ಕಲಾ ವೈಭವ’ದ ಪ್ರಸ್ತಾಪವಿಲ್ಲದಿದ್ದರೆ ಏಕೀಕರಣದ ಕಥೆ ಪೂರ್ಣವಾಗುವುದಿಲ್ಲ.  ಬಾಳಪ್ಪನವರ ‘ಕಲಾ ವೈಭವ ನಾಟ್ಯ ಸಂಘ’ದ  ಕನ್ನಡ ಪ್ರೇಮದ ಮೈನವಿರೇಳಿಸುವ ಕಥನ.  ಮರಾಠೆಯವರ ಲೇಖನ, ಬಾಳಪ್ಪನವರು ತಮ್ಮ ಕಲೆಯಿಂದ ಮಹಾರಾಷ್ಟೊದ ಮರಾಠಿಗರ ಮನಗೆದ್ದು ಕನ್ನಡಕ್ಕೆ ಶಕ್ತಿ ತುಂಬಿದ ಬೆಳಗಾವಿಯ ನಟ ಸಾಮ್ರಾಟರು.  ಮರಾಠೆಯವರು ಪ್ರಸ್ತಾಪಿಸಿದ ಒಂದು ಸಣ್ಣ ಪ್ರಸಂಗವನ್ನು ಹೇಳಿ ನನ್ನ ಮಾತು ಮುಗಿಸುತ್ತೇನೆ.

                      1956 ನವೆಂಬರ 1ರಂದು ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.  ರಾಜ್ಯದ ತುಂಬೆಲ್ಲ ರಾಜ್ಯೋತ್ಸವದ ಸಂಭ್ರಮ.  ಆದರೆ ಬೆಳಗಾವಿಯಲ್ಲಂದು ಕರಾಳ ದಿನ.  ಬೆಳಗಾವಿ ಸಂಪೂರ್ಣ ಬಂದ್ ಆಗಿತ್ತು.  ಆ ಸಂದರ್ಭದಲ್ಲಿ ಬನೆಳಗಾವಿಯ ಶಿವಾನಂದ ಥೇಟರಿನಲ್ಲಿ ಕಲಾ ವೈಭವ ಕ್ಯಾಂಪ ಮಾಡಿತ್ತು.  ‘ಕನ್ನಡ ರಾಜ್ಯೋತ್ಸವದಂದು ಕನ್ನಡ ನಾಡಿನ ಕನ್ನಡ ನಾಟಕ ಅಡದಿದರೆ ಹೇಗೆ?’  ಬಾಳಪ್ಪನವರು ಸ್ನೇಹಿತರೊಂದಿಗೆ ಚರ್ಚಿಸಿ, ನಾಟಕ ಆಡಲೇಬೇಕೆಂದು ತೀರ್ಮಾನಿಸಿದರು.  ಬಾಳಪ್ಪನವರ ಬೆಂಬಲಕ್ಕೆ ಟೊಂಕು ಕಟ್ಟಿ ನಿಂತ ಅಣ್ಣೂ ಗುರೂಜಿಯವರು ‘ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ ನಾಟಕ ನಡೀಬೇಕು’ ಎಂದರು.  ಕಲಾವೈಭವದ ಜಗಜ್ಯೋತಿ ಬಸವೇಶ್ವರರು ಬೆಳಗಾವಿಯಲ್ಲಿ ಕನ್ನಡ ವಿಜಯೋತ್ಸವಕ್ಕೆ ಸಾಕ್ಷಿಯಾದರು.  ಪ್ರದರ್ಶನ ಯಶಸ್ವಿಯಾಯಿತು.  ಏಣಗಿ ಬಾಳಪ್ಪನವರು ಬೆಳಗಾವಿ ರಾಜ್ಯೋತ್ಸವದ ಪ್ರಥಮ ಪುರುಷರಾದರು.  ‘ನಿಮ್ಮ ನೆನಹು ಉದಯ: ಮರೆವು ಅಸ್ತಮಾನ’ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ, ಕನ್ನಡದ ಏಕೀಕರಣಕ್ಕಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ಮಹನೀಯರನ್ನು ಮರೆಯಬಾರದು.  ಹಣತೆ ಹಚ್ಚಿದವರು ನಿತ್ಯ ಸ್ಮರಣೀಯರು.  ‘ಬೆಳಗಾವಿ ಒಂದು ಅಧ್ಯಯನ’ ಸಂಪಾದನೆಯ ಮೂಲಕ ಆ ಹಣತೆಗಳಿಗೆ ಮತ್ತೇ ಎಣ್ಣೆ ಉಣಿಸಿದ ಪ್ರಾ. ಬಿ. ಎಸ್‌. ಗವಿಮಠರಿಗೆ ಧನ್ಯವಾದಗಳು.   

-ಡಾ. ವಿ.ಎಸ್‌.ಮಾಳಿ 

ಹಿರಿಯ ಸಾಹಿತಿಗಳು 

ಬೆಳಗಾವಿ 


ಸುದ್ದಿ ಓದಿ