ಲೇಖನಗಳು

ಗಂಗಾ ಕಲ್ಯಾಣ ಯೋಜನೆ ನಿಜವಾದ ಬಡ ರೈತನ ಮನೆಬಾಗಿಲಿಗೆ ತಲುಪುತ್ತಿದೆಯೇ ?

ಗಂಗಾ ಕಲ್ಯಾಣ ಯೋಜನೆ ನಿಜವಾದ ಬಡ ರೈತನ ಮನೆಬಾಗಿಲಿಗೆ ತಲುಪುತ್ತಿದೆಯೇ ?

ಗ್ರಾಮೀಣ ಭಾರತದ ಬೆನ್ನೆಲುಬು ರೈತ. ಆದರೆ ಇಂದಿಗೂ ರಾಜ್ಯದ ಅನೇಕ ಸಣ್ಣ ಮತ್ತು ಅತೀ ಸಣ್ಣ ರೈತರು ಮಳೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಿರುವುದು ಕಠೋರ ಸತ್ಯ ಮಳೆ ಬಂದರೆ ಬೆಳೆ. ಮಳೆ ಕೈಕೊಟ್ಟರೆ ಸಾಲ, ನಷ್ಟ ಮತ್ತು ನಿರಾಶೆ ಈ ಚಕ್ರದೊಳಗೆ ಸಾವಿರಾರು ರೈತ ಕುಟುಂಬಗಳು ಬದುಕು ಸಾಗಿಸುತ್ತಿವೆ. ವಿಶೇಷವಾಗಿ ಸಮಾಜದ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಅಲ್ಪಸಂಖ್ಯಾತ ಸಮುದಾಯಗಳ ರೈತರು ನೀರಾವರಿ ಸೌಲಭ್ಯಗಳ ಕೊರತೆಯಿಂದ ಕೃಷಿಯಲ್ಲಿ ಸಾಕಷ್ಟು ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ.  

ಇಂತಹ ಜನರಿಗೆ ಕೃಷಿಯಲ್ಲಿ ಸ್ವಾವಲಂಬನೆ ಬರಲಿ, ತಮ್ಮ ಭೂಮಿಯಲ್ಲಿ ನೀರಾವರಿ ವ್ಯವಸ್ಥೆ ನಿರ್ಮಿಸಿಕೊಳ್ಳಲಿ ಎಂಬ ಉದ್ದೇಶದಿಂದ ಸರ್ಕಾರ ಜಾರಿಗೆ ತಂದ ಮಹತ್ವದ ಯೋಜನೆಗಳಲ್ಲೊಂದು "ಗಂಗಾ ಕಲ್ಯಾಣ ಯೋಜನೆ". ಈ ಯೋಜನೆ ಕೇವಲ ಒಂದು ಸರ್ಕಾರಿ ಯೋಜನೆಯಲ್ಲ; ಇದು ನೀರಿಲ್ಲದೆ ನರಳುತ್ತಿದ್ದ ಬಡ ರೈತನ ಹೊಲಕ್ಕೆ ಜೀವಜಲ ತಲುಪಿಸುವ ಕನಸು, ಆದರೆ ಪ್ರಶ್ನೆ ಏನೆಂದರೆ ಈ ಕನಸು ನಿಜವಾಗಿಯೂ ಅತ್ಯಂತ ಬಡ ರೈತನ ಮನೆಬಾಗಿಲಿಗೆ ತಲುಪುತ್ತಿದೆಯೇ? ಅಥವಾ ಯೋಜನೆಯ ಲಾಭ ಕೆಲವೇ ಪ್ರಭಾವಿ ಜನರ ಕೈಯಲ್ಲಿ ಸೀಮಿತವಾಗಿದೆಯೇ?

ಈ ಪ್ರಶ್ನೆಗಳೇ ಇಂದು ಗಂಭೀರ ಚರ್ಚೆಗೆ ಕಾರಣವಾಗಿವೆ. 1996-97ರಲ್ಲಿ ಪ್ರಾರಂಭವಾದ ಗಂಗಾ ಕಲ್ಯಾಣ ಯೋಜನೆಯ ಮೂಲ ಉದ್ದೇಶ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದಾಗಿತ್ತು. ಕೃಷಿಯಲ್ಲಿ ನೀರಿನ ಸಮಸ್ಯೆ ನಿವಾರಣೆಯಾದರೆ ರೈತ ಆರ್ಥಿಕವಾಗಿ ಬಲವಾಗಬಹುದು ಎಂಬ ಆಶಯದಿಂದ ಸರ್ಕಾರ ಕೊಳವೆಬಾವಿ ತೋಡಿಕೆ, ಪಂಪ್‌ಸೆಟ್ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕದಂತಹ ಸೌಲಭ್ಯಗಳನ್ನು ಒದಗಿಸಲು ಮುಂದಾಯಿತು. ನಂತರ ಈ ಯೋಜನೆಯ ವ್ಯಾಪ್ತಿಯನ್ನು ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳವರೆಗೂ ವಿಸ್ತರಿಸಲಾಯಿತು.’1999ರಲ್ಲಿ ಕೇಂದ್ರ ಸರ್ಕಾರದ ಸ್ವರ್ಣಜಯಂತಿ ಗ್ರಾಮ ಸ್ವರಾಜ್‌ಗಾರ ಯೋಜನೆ (ಖಉಖಙ) ಅಡಿಯಲ್ಲಿ ಇದನ್ನು ವೀಲೀನಗೊಳಿಸಲಾಯಿತಾದರೂ, ರಾಜ್ಯದ ವಿವಿಧ ಅಭಿವೃದ್ಧಿ ನಿಗಮಗಳು ತಮ್ಮದೇ ಅನುದಾನದ ಮೂಲಕ ಯೋಜನೆಯನ್ನು ಮುಂದುವರೆಸಿಕೊಂಡು ಬಂದಿವೆ.

ಕಾಗದದ ಮೇಲೆ ನೋಡಿದರೆ ಇದು ಅತ್ಯುತ್ತಮ ಉದ್ದೇಶದ ಯೋಜನೆ. ಆದರೆ ನೆಲಮಟ್ಟದಲ್ಲಿ ಇದರ ಅನುಷ್ಠಾನ ಕುರಿತು ಅನೇಕ ಪ್ರಶ್ನೆಗಳು ಕೇಳಿಬರುತ್ತಿವೆ. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಅನೇಕ ಬಡ ರೈತರಿಗೆ ಈ ಯೋಜನೆಯ ಪೂರ್ಣ ಮಾಹಿತಿ ಇಲ್ಲ. ಯೋಜನೆ ಇದೆ ಎಂಬುದೇ ಗೊತ್ತಿಲ್ಲದ ಕುಟುಂಬಗಳು ಸಾಕಷ್ಟಿವೆ. ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ಘೋಷಿಸಿದರೂ, ನಿಜವಾದ ಫಲಾನುಭವಿಗಳು ಯಾರು ಎನ್ನುವುದರ ಬಗ್ಗೆ ಗಂಭೀರ ಪರೀಶೀಲನೆ ಅಗತ್ಯವಾಗಿದೆ. ಏಕೆಂದರೆ ಸಮಾಜದಲ್ಲಿ ಈಗಾಗಲೇ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಮುಂದಿರುವವರು, ರಾಜಕೀಯ ಸಂಪರ್ಕ ಹೊಂದಿರುವವರು ಅಥವಾ ಅಧಿಕಾರಿಗಳ ಬಳಿ ಓಡಾಡುವ ಸಾಮರ್ಥ್ಯವಿರುವವರು ಯೋಜನೆಯ ಲಾಭ ಪಡೆಯುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯವಾಗಿ ಒಂದು ಮಾತು ಕೇಳಿಬರುತ್ತದೆ "ಯೋಜನೆ ಪಡೆಯಬೇಕಾದರೆ ಪರಿಚಯ ಇರಬೇಕು, ಹಣ ಕೊಡಬೇಕು, ಅಧಿಕಾರಿಗಳ ಹಿಂದೆ ಸುತ್ತಬೇಕು." ಈ ಮನೋಭಾವ ಯಾಕೆ ಹುಟ್ಟಿದೆ ಎಂಬುದನ್ನು ಸರ್ಕಾರ ಗಂಭೀರವಾಗಿ ಪರೀಶೀಲಿಸಬೇಕಾಗಿದೆ.  

ಅನೇಕ ಬಡ ರೈತರು ಅರ್ಜಿ ಸಲ್ಲಿಸುವ ಮುನ್ನವೇ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. "ನಮ್ಮಂತಹ ಬಡವರಿಗೆ ಯೋಜನೆ ಸಿಗುವುದಿಲ್ಲ" ಎಂಬ ನಿರಾಶೆ ಜನರಲ್ಲಿ ಆಳವಾಗಿ ಬೇರು ಬಿಟ್ಟಿದೆ. ಈ ಸ್ಥಿತಿಗೆ ಪ್ರಮುಖ ಕಾರಣಗಳಲ್ಲಿ ಒಂದು ಶಿಕ್ಷಣದ ಕೊರತೆ. ಗ್ರಾಮೀಣ ಭಾಗದ ಅನೇಕ ರೈತರಿಗೆ ಸರ್ಕಾರಿ ಯೋಜನೆಗಳ ಅರ್ಹತೆ, ಅರ್ಜಿ ವಿಧಾನ, ಆಗತ್ಯ ದಾಖಲೆಗಳು, ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ತಲುಪುತ್ತಿಲ್ಲ, ಮಾಹಿತಿ ಕೊರತೆಯೇ ಅವರನ್ನು ಯೋಜನೆಯಿಂದ ದೂರ ಮಾಡುತ್ತಿದೆ. ಕೆಲವು ಕಡೆ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳು ತಪ್ಪು ಮಾಹಿತಿ ನೀಡಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. "ಹಣ ಕೊಡದೆ ಕೆಲಸ ಆಗುವುದಿಲ್ಲ" ಎಂಬ ತಪ್ಪು ಕಲ್ಪನೆ ಬಡ ಜನರನ್ನು ಹಿಂದೆ ಸರಿಯುವಂತೆ ಮಾಡುತ್ತಿದೆ.ಸರ್ಕಾರವು ಡಿಜಿಟಲ್ ವ್ಯವಸ್ಥೆ, ಸೇವಾ ಕೇಂದ್ರಗಳಾ, ಗ್ರಾಮ ಪಂಚಾಯಿತಿ ಮಟ್ಟದ ಮಾಹಿತಿ ವ್ಯವಸ್ಥೆಗಳನ್ನು ರೂಪಿಸಿದ್ದರೂ, ಅದರ ಪ್ರಯೋಜನ ಎಲ್ಲರಿಗೂ ಸಮಾನವಾಗಿ ತಲುಪುತ್ತಿಲ್ಲ.

ಗ್ರಾಮಗಳಲ್ಲಿ ಇಂದಿಗೂ ಅನೇಕರು ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನವೇ ತಿಳಿಯದೆ ಸಂಕಷ್ಟ ಅನುಭವಿ ಸುತ್ತಿದ್ದಾರೆ. ದಾಖಲೆಗಳ ತೊಂದರೆ ಕಚೇರಿಗಳಿಗೆ ಅಲೆದಾಟ, ವಿಳಂಬ ಇವೆಲ್ಲವೂ ಬಡ ರೈತನನ್ನು ಮಾನಸಿಕವಾಗಿ ಕುಗ್ಗಿಸುತ್ತವೆ. ಗಂಗಾ ಕಲ್ಯಾಣ ಯೋಜನೆಯಂತಹ ಯೋಜನೆಗಳು ಯಶಸ್ವಿಯಾಗಬೇಕಾದರೆ ಕೇವಲ ಅನುದಾನ ಘೋಷಿಸಿದರೆ ಸಾಲದು. ಯೋಜನೆ ನಿಜವಾದ ಅರ್ಹ ಫಲಾನುಭವಿಗೆ ತಲುಪುವಂತೆ ಕಟ್ಟುನಿಟ್ಟಿನ ವ್ಯವಸ್ಥೆ ಇರಬೇಕು. ಗ್ರಾಮ ಮಟ್ಟದಲ್ಲೇ ಪಾರದರ್ಶಕ ಆಯ್ಕೆ ಪ್ರಕ್ರಿಯೆ ನಡೆಯಬೇಕು. ರಾಜಕೀಯ ಪ್ರಭಾವ, ಶಿಫಾರಸು, ಪರಿಚಯಗಳ ಆಧಾರದ ಮೇಲೆ ಯೋಜನೆ ಹಂಚಿಕೆ ಆಗಬಾರದು. ಅತ್ಯಂತ ಹಿಂದುಳಿದ, ನೀರಾವರಿ ಸೌಲಭ್ಯವಿಲ್ಲದ ರೈತರಿಗೆ ಮೊದಲ ಆದ್ಯತೆ ನೀಡಬೇಕು.

ಇದಲ್ಲದೆ ಯೋಜನೆ ಕುರಿತು ಸರ್ಕಾರ ದೊಡ್ಡ ಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೇವಲ ಪತ್ರಿಕಾ ಪ್ರಕಟಣೆ ಅಥವಾ ವೆಬ್‌ಸೈಟ್ ಮಾಹಿತಿ ಸಾಕಾಗುವುದಿಲ್ಲ. ಗ್ರಾಮ ಸಭೆಗಳು, ರೈತ ಸಭೆಗಳು, ಶಾಲೆಗಳು, ಸಹಕಾರಿ ಸಂಘಗಳು, ಪಂಚಾಯಿತಿಗಳ ಮೂಲಕ ಜನರಿಗೆ ಸರಳ ಭಾಷೆಯಲ್ಲಿ ಮಾಹಿತಿ ನೀಡಬೇಕು. ಯೋಜನೆ ಪಡೆಯಲು ಯಾರಿಗೂ ಲಂಚ ಕೊಡುವ ಅಗತ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ಸರ್ಕಾರದಿಂದ ಜನರಿಗೆ ತಲುಪಬೇಕು. ಸಮಾಜದಲ್ಲಿಯೂ ಬದಲಾವಣೆ ಅಗತ್ಯವಾಗಿದೆ. ಅನೇಕ ಬಾರಿ ಬಡ ಜನರು ತಮ್ಮ ಹಕ್ಕುಗಳ ಬಗ್ಗೆ ಪ್ರಶ್ನಿಸಲು ಹೆದರುತ್ತಾರೆ. ಅಧಿಕಾರಿಗಳ ಮುಂದೆ ಮಾತನಾಡಲು ಆತ್ಮವಿಶ್ವಾಸ ಕಡಿಮೆ ಇರುತ್ತದೆ. "ಸರ್ಕಾರ ಅಂದ್ರೆ ದೊಡ್ಡವರು" ಎಂಬ ಭಯ ಮನಸ್ಸಿನಲ್ಲಿ ಇರುತ್ತದೆ.  ಈ ಮನೋಭಾವ ಬದಲಾಗಬೇಕು. ಯೋಜನೆಗಳು ಸರ್ಕಾರದ ದಯೆಯಲ್ಲ; ಅವು ಜನರ ಹಕ್ಕು. ಜನರು ಪ್ರಶ್ನಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕಾದರೆ ನೀರಿನ ಮೌಲ್ಯ ಅರಿಯಬೇಕು. ನೀರಾವರಿ ಸೌಲಭ್ಯ ಬಂದ ರೈತನ ಬದುಕು ಹೇಗೆ ಬದಲಾಗುತ್ತದೆ ಎಂಬುದನ್ನು ಅನೇಕ ಉದಾಹರಣೆಗಳು ತೋರಿಸಿವೆ.  

ಒಂದು ಕೊಳವೆಬಾವಿ ಕೇವಲ ನೀರು ಕೊಡುವುದಲ್ಲ; ಅದು ಕುಟುಂಬಕ್ಕೆ ಆರ್ಥಿಕ ಭದ್ರತೆ ಕೊಡುತ್ತದೆ. ರೈತ ಬೆಳೆ ವೈವಿಧ್ಯತೆ ಮಾಡಬಹುದು. ಹಾಲು ಉತ್ಪಾದನೆ, ತೋಟಗಾರಿಕೆ, ಪಶುಸಂಗೋಪನೆ ಮುಂತಾದ ಉಪಕೃಷಿ ಚಟುವಟಿಕೆಗಳಿಗೆ ಅವಕಾಶ ಸಿಗುತ್ತದೆ. ಮಕ್ಕಳ ಶಿಕ್ಷಣ, ಕುಟುಂಬದ ಆರೋಗ್ಯ, ಜೀವನಮಟ್ಟ ಉತ್ತಮವಾಗಬಹುದು. ಆದರೆ ಯೋಜನೆಯ ಸದುಪಯೋಗ ನಿಜವಾದ ಬಡ ರೈತನಿಗೆ ತಲುಪದಿದ್ದರೆ ಸರ್ಕಾರದ ಉದ್ದೇಶವೇ ವಿಫಲವಾಗುತ್ತದೆ. ಒಂದು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪರಿಸ್ಥಿತಿ ಇದ್ದು, ಇನ್ನೊಂದು ಕಡೆ ಬಡ ರೈತನಿಗೆ ಸಿಗಬೇಕಾದ ಸೌಲಭ್ಯ ಪ್ರಭಾವಿಗಳ ಕೈಗೆ ಹೋಗುವುದು ಸಾಮಾಜಿಕ ಅನ್ಯಾಯವೇ ಸರಿ. ಇಂದು ಅಗತ್ಯವಿರುವುದು ಕೇವಲ ಹೊಸ ಯೋಜನೆಗಳಲ್ಲ; ಈಗಿರುವ ಯೋಜನೆಗಳ ಸಮರ​‍್ಕ ಅನುಷ್ಠಾನ. ಸರ್ಕಾರ ಪ್ರತಿಯೊಂದು ತಾಲೂಕು ಮಟ್ಟದಲ್ಲಿ ಯೋಜನೆ ಫಲಾನುಭವಿಗಳ ಮಾಹಿತಿ ಸಾರ್ವಜನಿಕ  ವಾಗಿ ಪ್ರಕಟಿಸಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು.

ದಲ್ಲಾಳಿ ವ್ಯವಸ್ಥೆಗೆ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ಉಚಿತ ಮಾರ್ಗದರ್ಶನ ನೀಡಬೇಕು. ಶಿಕ್ಷಣವೇ ಈ ಸಮಸ್ಯೆಗೆ ದೀರ್ಘಕಾಲದ ಪರಿಹಾರ, ಜನರು ಶಿಕ್ಷಣ ಪಡೆದಾಗ ಮಾತ್ರ ತಮ್ಮ ಹಕ್ಕುಗಳ ಅರಿವು ಬರುತ್ತದೆ. ಮಾಹಿತಿ ಪಡೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ. ಯಾರಿಂದಲೂ ಮೋಸಹೋಗುವುದಿಲ್ಲ. ಆದ್ದರಿಂದ ಸರ್ಕಾರ ಮತ್ತು ಸಮಾಜ ಎರಡೂ ಗ್ರಾಮೀಣ ಶಿಕ್ಷಣ ಹಾಗೂ ಜಾಗೃತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂದಿನ ಕಾಲದಲ್ಲಿ ಮಾಹಿತಿ ಹೊಂದಿರುವವನೇ ಶಕ್ತಿಶಾಲಿ. ಆದರೆ ದುರದೃಷ್ಟವಶಾತ್ ಗ್ರಾಮೀಣ ಭಾಗದ ಅನೇಕ ಬಡ ಜನರು ಮಾಹಿತಿಯ ಕೊರತೆಯಿಂದಲೇ ಹಿಂದುಳಿದಿದ್ದಾರೆ. ಈ ಅಂತರವನ್ನು ಕಡಿಮೆ ಮಾಡುವುದು ಸರ್ಕಾರದ ಮತ್ತು ಸಮಾಜದ ಜವಾಬ್ದಾರಿ. ಗಂಗಾ ಕಲ್ಯಾಣ ಯೋಜನೆ ಕೇವಲ ನೀರಾವರಿ ಯೋಜನೆ ಅಲ್ಲ;

ಅದು ಗ್ರಾಮೀಣ ಬಡ ರೈತನ ಬದುಕು ಬದಲಾಯಿಸುವ ಶಕ್ತಿ ಹೊಂದಿರುವ ಯೋಜನೆ. ಆದರೆ ಅದು ಕಾಗದದಲ್ಲಿ ಮಾತ್ರ ಉಳಿಯಬಾರದು. ನಿಜವಾದ ಫಲಾನುಭವಿಯ ಹೊಲದಲ್ಲಿ ನೀರು ಹರಿದಾಗ ಮಾತ್ರ ಯೋಜನೆಯ ಯಶಸ್ಸು ಅರ್ಥಪೂರ್ಣವಾಗುತ್ತದೆ.ಸರ್ಕಾರ, ಅಧಿಕಾರಿಗಳು, ಸಮಾಜ ಮತ್ತು ಜನರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಈ ಯೋಜನೆಯ ನಿಜವಾದ ಉದ್ದೇಶ ನೆರವೇರುತ್ತದೆ. ಇಲ್ಲವಾದರೆ ಬಡ ರೈತನ ಹೆಸರಿನಲ್ಲಿ ರೂಪುಗೊಂಡ ಯೋಜನೆಗಳು ಕೆಲವೇ ಜನರ ಲಾಭದ ಸಾಧನಗಳಾಗಿ ಉಳಿದುಬಿಡುವ ಅಪಾಯ ಇದೆ. ಈಗಾದರೂ ಎಚ್ಚೆತ್ತುಕೊಳ್ಳಬೇಕು. ಯೋಜನೆಗಳು ಪ್ರಭಾವಿಗಳಿಗೆ ಅಲ್ಲ, ನಿಜವಾದ ಅಗತ್ಯವಿರುವ ಜನರಿಗೆ ತಲುಪಬೇಕು. ಆಗ ಮಾತ್ರ ಬಡವರ ಕಲ್ಯಾಣಾಗುತ್ತದೆ , ಯೋಜನೆಯು ತಂದಿದ್ದು ಸಾರ್ಥಕವಾಗುತ್ತದೆ ಹಾಗೂ ಗ್ರಾಮೀಣ ಭಾರತದ ಅಭಿವೃದ್ಧಿಗೆ ಅರ್ಥ ಸಿಗುತ್ತದೆ. 


ಸುದ್ದಿ ಓದಿ