ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತರೆ ಸುಂದರ ವ್ಯಕ್ತಿತ್ವ ಸಾಧ್ಯ : ಕುಲಕರ್ಣಿ
ಯರಗಟ್ಟಿ 23: ವಿದ್ಯಾರ್ಥಿಗಳು ತಮ್ಮೊಳಗೆ ಅಂತರ್ಗತವಾಗಿರುವ ಸಾಮರ್ಥ್ಯವನ್ನು ಅರಿತರೆ ಮಾತ್ರ ಸುಂದರವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಧಾರವಾಡದ ನಿವೃತ್ತ ಉಪನ್ಯಾಸಕ ಸುರೇಶ ಕುಲಕರ್ಣಿ ಹೇಳಿದರು.
ಪಟ್ಟಣದ ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ವ್ಯಕ್ತಿತ್ವ ವಿಕಸನದ ಕುರಿತ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ನಮ್ಮ ಮೆದುಳಿನಲ್ಲಿ 1 ಕೋಟಿ ಜಿ.ಬಿ. ಮಾಹಿತಿ ಸಂಗ್ರಹ ಸಾಮರ್ಥ್ಯವಿದೆ.
ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ನಮ್ಮ ಪಂಚೇಂದ್ರಿಯಗಳನ್ನು ಜಾಗೃತವಾಗಿಟ್ಟುಕೊಳ್ಳಬೇಕು. ಅನವಶ್ಯಕ ವಿಷಯಗಳನ್ನು ತುಂಬಿಕೊಂಡು ಮೆದಳನ್ನು ಕಸದ ಬುಟ್ಟಿಯಾಗಿಸಿಕೊಳ್ಳಬಾರದು ಎಂದು ಉಪದೇಶ ನೀಡಿದರು. ಉಪನ್ಯಾಸದ ಮಧ್ಯೆ ಅವರು ಏಕಕಾಲಕ್ಕೆ ತಮ್ಮ ಎರಡೂ ಕೈಗಳಿಂದ ಚಿತ್ರ ಬಿಡಿಸಿದ್ದು ವಿಶೇಷವಾಗಿತ್ತು.ಪ್ರಾಂಶುಪಾಲರಾದ ಪ್ರೊ. ರಾಯನಗೌಡ ಮರಿಗೌಡರ ಅಧ್ಯಕ್ಷತೆ ವಹಿಸಿದ್ದರು. ಜಕಾತಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಬಿ.ಎಸ್. ಗುಗ್ಗರನಟ್ಟಿ, ಸತ್ತಿಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ದಿವಟೆ, ಯರಗಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ತಮ್ಮಣ್ಣ ಕಾಮಣ್ಣವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಾವಿದ್ಯಾಲಯದ ಐಕ್ಯುಎಸಿ ವಿಭಾಗದ ಸಂಚಾಲಕರಾದ ಡಾ. ಸುನಂದಾ ಮಾದರ ಮತ್ತು ಕಾರ್ಯಕ್ರಮದ ಸಂಚಾಲಕರಾದ ಡಾ. ರಾಜಶೇಖರ ಬಿರಾದಾರ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.