ಕಾರವಾರ

ಪವರ್ ಹೌಸ್ ಬಳಿ ಕರಡಿ ಸಂಚಾರ

ಪವರ್ ಹೌಸ್ ಬಳಿ ಕರಡಿ ಸಂಚಾರ

ದಾಂಡೇಲಿ 27 : ಅಂಬಿಕಾನಗರ ಪವರ್ ಹೌಸ್ ಸಮೀಪ ಬೆಳಗಿನ ಜಾವ ಕರಡಿಯೊಂದು ರಸ್ತೆಯಲ್ಲಿ ಸಂಚರಿಸಿದ್ದು, ಇದು ಕೆಪಿಸಿ ನೌಕರರು ಹಾಗೂ ಸ್ಥಳೀಯರಲ್ಲಿ ಆತಂಕ ತಂದಿದೆ. ಶನಿವಾರ ಬೆಳಗ್ಗೆ ಸುಮಾರು 6 ಗಂಟೆಗೆ ದಟ್ಟ ಅರಣ್ಯದ ನಡುವಿನಿಂದ ಬಂದ  ಕರಡಿಯೊಂದು  ಅಂಬಿಕಾನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಿದೆ.  ಕರಡಿ ಓಡಾಟವನ್ನು  ವಾಹನ ಸವಾರರ ಗಮನಕ್ಕೆ ಬಂದಿದೆ. ರಸ್ತೆಯಲ್ಲಿ  ಸಹಜವಾಗಿ ಸಾಗುತ್ತಿದ್ದ ಕರಡಿಯ ಎದುರಿಗೆ ವಾಹನವ ಕಂಡು  ಗಾಬರಿಯಾದ ಕರಡಿ,  ತಕ್ಷಣ ಹಿಂದಿರುಗಿ  ಅದೇ ರಸ್ತೆಯಲ್ಲೇ ಓಡಿದೆ.  

ಈ ಅಪರೂಪದ ದೃಶ್ಯವನ್ನು ವಾಹನದಲ್ಲಿದ್ದವರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಕರಡಿ ರಸ್ತೆಯಲ್ಲಿ ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಂಡೇಲಿ ಸುತ್ತಮುತ್ತ ದಟ್ಟ ಅರಣ್ಯ ಪ್ರದೇಶ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚಾಗಿದೆ. ಆಹಾರ ಅರಸಿ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.ಕರಡಿ ಸೇರಿದಂತೆ ವನ್ಯಜೀವಿಗಳ ಚಲನವಲನದ ಬಗ್ಗೆ ಅರಣ್ಯ ಇಲಾಖೆ ನಿಗಾ ವಹಿಸಿ, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ