ಬಸವೇಶ್ವರ ಏತ ನೀರಾವರಿ: ಎಪ್ರಿಲ್ ಅಂತ್ಯದೊಳಗಾಗಿ ರೈತರಿಗೆ ನೀರು
ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ಅಥಣಿ ಶುಗರ್ಸನ ಕಬ್ಬು ವಲಯ ಕಛೇರಿ ಉದ್ಘಾಟನೆ
ಅಥಣಿ 20: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ತೀವ್ರಗತಿ ಪಡೆದುಕೊಂಡಿದ್ದು, ಮುಂಬರುವ ಎಪ್ರಿಲ್ ತಿಂಗಳ ಅಂತ್ಯದೊಳಗಾಗಿ ಪ್ರಥಮ ಹಂತದಲ್ಲಿ ಎರಡು ಪಂಪಗಳ ಮೂಲಕ ನೀರು ಕೊಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಮಾಜಿ ಸಚಿವ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಅವರು ಜಂಬಗಿ ಗ್ರಾಮದಲ್ಲಿ ಕೃಷ್ಣಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ 9 ನೇ ಶಾಖೆ ಹಾಗೂ ಅಥಣಿ ಶುಗರ್ಸನ ಕಬ್ಬು ವಲಯ ಕಛೇರಿ ಉದ್ಘಾಟಿಸಿ ಹಾಗೂ ಸರಕಾರಿ ಶಾಲಾ ಆವರಣದಲ್ಲಿ ಪೇವಿನ್ ಅಳವಡಿಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕರೋನಾ ಸಾಂಕ್ರಾಮಿಕ ರೋಗದ ಎರಡನೇಯ ಅಲೆಯ ತೀವ್ರತೆಯ ಪರಿಣಾಮದಿಂದ ಗುತ್ತಿಗೆದಾರರೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರಿಗೆ ಕೋವಿಡ್ ರೋಗ ಅಂಟಿಕೊಂಡ ಪರಿಣಾಮ ಅವರು ಬಿಹಾರ ರಾಜ್ಯಕ್ಕೆ ವಾಪಸ್ಸಾಗಿದ್ದರಿಂದ ಕೆಲ ತಿಂಗಳುಗಳ ಕಾಲ ಈ ಯೋಜನೆಯ ಕಾರ್ಯ ಸ್ಥಗಿತಗೊಂಡಿತ್ತು. ಈಗ ಮತ್ತೆ ಬಿಹಾರದಿಂದ ಕೆಲಸಗಾರರು ಕೆಲಸಕ್ಕೆ ಮರಳಿದ್ದಾರೆ ಎಂದ ಅವರು ಇಂಟೇಕ್ ಕೆನಾಲ್, ಮೇನ್ ಲೈನ್, ಜಾಕವೆಲ್ ಕೆಲಸ ಭರದಿಂದ ಪ್ರಾರಂಭಗೊಂಡಿದೆ. ಹೀಗಾಗಿಯೇ ಎಪ್ರಿಲ್ ತಿಂಗಳ ಕೊನೆಯವರೆಗೆ ಎರಡು ಪಂಪಗಳನ್ನು ಪ್ರಾರಂಭ ಮಾಡಿ ಪ್ರಥಮ ಹಂತದಲ್ಲಿ ನೀರು ಕೊಡುವ ವ್ಯವಸ್ಥೆ ಮಾಡುತ್ತೇನೆ. ಉಳಿದಂತೆ 5 ಪಂಪಸೆಟ್ಗಳ ಮೂಲಕ ನೀರು ಹರಿಸುವ ಗುರಿ ತಮ್ಮದಾಗಿದೆ ಎಂದು ಹೇಳಿದರು.
ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರನ್ನು ಭೇಟಿ ಮಾಡಿ ಉತ್ತರ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಯ ಅನುಷ್ಠಾನಕ್ಕೆ ಚರ್ಚಿಸಿದಾಗ ತಕ್ಷಣ ಸ್ಪಂದಿಸಿದ ಸಿಎಮ್ ಬಸವರಾಜ ಬೊಮ್ಮಾಯಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಬೇಕು ಎಂದು ಸೂಚಿಸಿದ್ದಾರೆ ಎಂದ ಅವರು ಸತತ ಬರಗಾಲದಿಂದ ತತ್ತರಿಸುತ್ತಿದ್ದ ಉತ್ತರ ಭಾಗದ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ವರ್ಷವಿಡಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇತ್ತೀಚಿಗೆ ಅಥಣಿ ಶುಗರ್ಸನಿಂದ ಅಲ್ಲಲ್ಲಿ ಕೆರೆಗಳನ್ನು ನಿರ್ಮಿಸಿ ಆ ಕರೆಗಳಿಗೆ ಕೃಷ್ಣಾ ನದಿಯಿಂದ ಪೈಪಲೈನ್ ಅಳವಡಿಕೆ ಮಾಡಿ ನೀರು ತುಂಬಿಸಿ ಆ ಮೂಲಕ ರೈತರಿಗೆ ನೀರು ಕೊಡುತ್ತಿದ್ದರಿಂದ ಈ ಗ್ರಾಮಗಳಲ್ಲಿ ಲಕ್ಷಾಂತರ ಎಕರೆ ಕಬ್ಬು ಬೆಳೆಯಲಾಗುತ್ತಿದೆ. ಇದು ಇತ್ತೀಚಿಗೆ ಆದ ಬದಲಾವಣೆ ಎಂದರು.
ಕಳಪೆ ಕಾಮಗಾರಿ ಕಂಡು ಬಂದಲ್ಲಿ ತಕ್ಷಣ ನನ್ನ ಗಮನಕ್ಕೆ ತನ್ನಿ ನಾನು ಕ್ರಮ ಜರುಗಿಸುವೆ ಅಲ್ಲದೆ ಈ ನಿಟ್ಟಿನಲ್ಲಿ ನಮ್ಮ ಕಡೆಯಿಂದ ಇಬ್ಬರು ಇಂಜನೀಯರರು ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಪರೀಶೀಲಿಸಿ ಟೆಂಡರ್ ನಲ್ಲಿರುವಂತೆ ಕೆಲಸ ನಡೆದಿರುವ ಬಗೆಗೆ ಸ್ಥಳಕ್ಕೆ ಭೆಟ್ಟಿಕೊಟ್ಟು ಮಾಹಿತಿ ಪಡೆಯುತ್ತಾರೆ. ಗುಣಮಟ್ಟವನ್ನೂ ಕೂಡ ಪರೀಶೀಲಿಸಿ ನನಗೆ ವರದಿ ನೀಡುತ್ತಾರೆ ಎಂದರು.
ಪ್ರತಿ ಶಾಲೆಯಲ್ಲಿ ಮಕ್ಕಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿರುವೆ ಎಂದು ಹೇಳಿದ ಅವರು ಕೃಷ್ಣಾ ಕೋ-ಆಪ್ ಕ್ರೆಡಿಟ್ ಸೊಸೈಟಿಯನ್ನು 1995 ರಲ್ಲಿ ಪ್ರಾರಂಭಿಸಲಾಗಿದ್ದು, ಅಂದಿನಿಂದ ಇಲ್ಲಿಯವರೆಗೂ ಅವಶ್ಯಕತೆ ಇದ್ದವರಿಗೆ ಆರ್ಥಿಕ ಸಹಾಯ ನೀಡುತ್ತ ಬಂದಿದೆ ಎಂದರು.
ಮಾಜಿ ತಾ.ಪಂ ಅಧ್ಯಕ್ಷ ರಾಮ ಸೊಡ್ಡಿ, ಸಂಬರಗಿ ಪಿಕೆಪಿಎಸ್ ಅಧ್ಯಕ್ಷ ಅಬ್ದುಲ್ ಮುಲ್ಲಾ, ಜಂಬಗಿ ಗ್ರಾಮದ ಮುಖ್ಯಸ್ಥ ಪೋಟಪ ಜಾಧವ ಮಾತನಾಡಿದರು. ಗುತ್ತಿಗೆದಾರ ಆರ್.ಎಮ್.ಪಾಟೀಲ, ಜಯವಂತ ಪಾಟೀಲ, ಈಶ್ವರ ಕುಂಬಾರೆ, ವಿನಾಯಕ ಪಾಟೀಲ, ಮುರಿಗೆಪ್ಪ ಮಾಳಿ, ಅರುಣ ಜಾಧವ, ಶಶಿಧರ ಕುಂಬಾರ, ಬಾಪು ಪಾಟೀಲ, ಶಶಿಧರ ಕುಂಬಾರ, ಬಾಬಾಸಾಹೇಬ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.