ಬಸವ ತತ್ವ ಭಾರತ ದೇಶದ ಸತ್ವವಾಗಿದೆ: ಹಿರೇಮಠ
ತಾಳಿಕೋಟೆ21: ಬಸವ ತತ್ವ ಭಾರತ ದೇಶದ ಸತ್ವಾಗಿದೆ. ಬಸವ ತತ್ವ ಅನುಸರಿಸಿದರೆ ದೇಶ ಸಮಭಾವ, ಸಮಾತೆ ಸಹಬಾಳ್ವೆಯ ಅಭಿವೃದ್ಧಿ ಕಾಣುತ್ತದೆ. 12ನೇಯ ಶತಮಾನದ ಬಸವಾದಿ ಪ್ರಮಥರು ಆಡಿದಂತೆ ನಡೆದಿದ್ದಾರೆ. ಅರಮನೆಯಲ್ಲಿ ಗುರುಮನೆಯಲ್ಲಿದ್ದ ವೇದ, ವೇದಾಂತ, ಉಪನಿಷತ್ತು ಮೊದಲಾದ ಸಾಹಿತ್ಯವನ್ನೆಲ್ಲ ಶರಣರು ಸಾಮಾನ್ಯ ಜನರಿಗೂ ವಚನಗಳ ಮೂಲಕ ತಲುಪಿಸಿದರು ಎಂದು ಸ್ಥಳೀಯ ನಿವೃತ್ತ ಶಿಕ್ಷಕರ ಸಂಘದ ಅಧ್ಯಕ್ಷ ಚನಮಲ್ಲಯ್ಯ ಹಿರೇಮಠ ಹೇಳಿದರು.
ಪಟ್ಟಣದ ಎಸ್.ಕೆ.ಪ್ರೌಢಶಾಲೆಯಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಂದ ಲಿಂ.ವಿರಕ್ತಸ್ವಾಮಿಗಳ, ಲಿಂ.ಸುಬ್ಬಪ್ಪ ಈಶ್ವರ್ಪ ದ್ಯಾಪುರ ಹಾಗೂ ಲಿಂ.ಗಂಗಣ್ಣ ಸಿದ್ದಣ್ಣ ಕೋಳೂರ ಅವರುಗಳ ಸ್ಮರಣಾರ್ಥ ಆಯೋಜಿಸಿದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ.ಸಾಲವಾಡಗಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಎಸ್.ಎಸ್.ಗಡೇದ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥದಿಂದ ಮಾಡುವ ಎಲ್ಲ ಬಗೆಯ ಸೇವೆಯೂ ಸಮಾಜಸೇವೆ ಎಂದರು.
ಸಾನ್ನಿಧ್ಯವನ್ನು ಖಾಸ್ಗತೇಶ್ವರಮಠದ ಆಡಳಿತಾಧಿಕಾರಿ ಮುರುಘೇಶ ವಿರಕ್ತಮಠ ವಹಿಸಿದ್ದರು. ಖಾಸ್ಗತೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗದೇವರು ಮೈಸೂರಿನಿಂದ ಧ್ವನಿ ಸಂದೇಶದ ಆಶೀರ್ವಚನ ನೀಡಿದರು. ಎಸ್.ಕೆ.ಪ್ರೌಢಶಾಲೆಯ ಉಪ್ರಾಚಾರ್ಯ ಎಸ್.ಡಿ.ಕರಜಗಿ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಕಸಾಪ ತಾಲೂಕು ಘಟಕದ ಅಧ್ಯಕ್ಷ ಆರ್.ಎಲ್.ಕೊಪ್ಪದ ವಹಿಸಿದ್ದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎಂ.ವಾಲಿ, ವೀರಶೈವ ವಿದ್ಯಾವರ್ಧಕ ಸಂಘದ ಮಹಿಳಾ ಪಿಯು ಕಾಲೇಜಿನ ಚೇರ್ಮನ್ ಕಾಶಿನಾಥ ಸಜ್ಜನ, ಎಸ್.ಕೆ.ಪದವಿಪೂರ್ವ ಕಾಲೇಜಿನ ಚೇರ್ಮನ್ ಶಂಕ್ರಗೌಡ ಹಿಪ್ಪರಗಿ, ದತ್ತಿದಾನಿಗಳಾದ ಸುಮಂಗಲಾ ಕೋಳೂರ, ಎಸ್.ಬಿ.ದ್ಯಾಪೂರ, ಮಲ್ಲಪ್ಪ ಚಲಾಕಾರ, ಡಾ.ನಜೀರ ಕೋಳ್ಯಾಳ, ಸಿದ್ಧಾರ್ಥ ಕಟ್ಟಿಮನಿ, ಎಸ್.ಕೆ.ಪ್ರೌಢಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಶಿಕ್ಷಕ ವಿಶ್ವನಾಥ ಗಣಾಚಾರಿ ನಿರೂಪಸಿದರು. ಎಸ್.ವಿ.ಜಾಮಗೊಂಡಿ ಸ್ವಾಗತಿಸಿದರು. ಆರ್.ಬಿ.ದಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು.