ಯರಗಟ್ಟಿ

ಬಸವ ಪಂಚಮಿ ಆಚರಣೆ: ಮಾನವ ಬಂಧುತ್ವ ವೇದಿಕೆಯಿಂದ ಜಾಗೃತಿ

ಬಸವ ಪಂಚಮಿ ಆಚರಣೆ: ಮಾನವ ಬಂಧುತ್ವ ವೇದಿಕೆಯಿಂದ ಜಾಗೃತಿ

ಯರಗಟ್ಟಿ 21: ಹಾಲು, ತುಪ್ಪವನ್ನು ಮೌಢ್ಯದ ಹೆಸರಲ್ಲಿ ವ್ಯರ್ಥಮಾಡದೆ, ಅಗತ್ಯವಿರುವವರಿಗೆ ನೀಡಿದರೆ ಹಬ್ಬಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ತಾಲ್ಲೂಕು ಮಾನವ ಬಂಧುತ್ವ ವೇದಿಕೆ ಸಂಚಾಲಕ ಮಾಲಿಂಗಪ್ಪ ಅಲಬಾಳ ತಿಳಿಸಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಬಸವ ಪಂಚಮಿ ಆಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ರೋಗಿಗಳಿಗೆ, ವೃದ್ಧರು, ಅಂಗವಿಕಲರು, ಮಕ್ಕಳಿಗೆ ಹಾಲು, ಹಣ್ಣು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಾನವ ಬಂಧುತ್ವ ವೇದಿಕೆಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಹಲ ವರ್ಷಗಳಿಂದ ಆಚರಿಸಲಾಗುತ್ತಿದೆ. ಜನರು ಲಕ್ಷಾಂತರ ಲೀಟರ್ ಹಾಲು, ತುಪ್ಪ, ಹಣ್ಣನ್ನು ಹುತ್ತ, ನಾಗರ ಕಲ್ಲುಗಳ ಮೇಲೆ ಸುರಿಯುತ್ತಾರೆ. ಹಾವು ಹಾಲು ಕುಡಿಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾದರೂ ಜನರು ಮೌಢ್ಯ ಅನುಸರಿಸುತ್ತಿದ್ದಾರೆ ಎಂದರು.

ನಾಗರ ಹಾವು ನಾವು ಇಡುವ ಹಾಲು ಕುಡಿಯುತ್ತದೆ, ಹಣ್ಣು ಸೇವಿಸುತ್ತದೆ. ಇದರಿಂದ ಪೂಜಿಸುವ ನಮಗೆ ಶುಭವಾಗುತ್ತದೆ ಎನ್ನುವ ಮೂಢನಂಬಿಕೆಯಿಂದ ಪೌಷ್ಟಿಕ ಆಹಾರವಾದ ಹಾಲು, ತುಪ್ಪ ಮಣ್ಣು ಪಾಲಾಗುತ್ತಿದೆ. ಇಂತಹ ಕಂದಾಚಾರ ಹೋಗಲಾಡಿಸಲು ಶಿಕ್ಷಣದಿಂದ ಸಾಧ್ಯ ಎಂದು ತಿಳಿಸಿದರು.ದಲಿತ ಜಾಗೃತಿ ವೇದಿಕೆ ಮುಖಂಡರಾದ ಭಾಸ್ಕರ ಹಿರೇಮೆತ್ರಿ ತಳ ಸಮುದಾಯದ ಯುವಜನರಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಮೌಢ್ಯ ಹೋಗಲಾಡಿಸಲು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರ ಸಾರಥ್ಯದಲ್ಲಿ ಮಾನವ ಬಂಧುತ್ವ ವೇದಿಕೆ ಸ್ಥಾಪನೆಯಾಗಿದೆ. ಜನರಿಗೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಆದರ್ಶ ಸಾರಲು ವೇದಿಕೆ ಶ್ರಮಿಸುತ್ತಿದೆ ಎಂದರು.

ಮೌಢ್ಯದಿಂದ ಜ್ಞಾನದತ್ತ, ಕತ್ತಲಿಂದ ಬೆಳಕಿನೆಡೆಗೆ ಎನ್ನುವ ಮಹತ್ತರ ಯೋಜನೆಗಳು ವೇದಿಕೆಯ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಯುವ ಪೀಳಿಗೆ ಶಿಕ್ಷಣ ಪಡೆದು ಮೌಢ್ಯ ಧಿಕ್ಕರಿಸಿ ಪ್ರಜ್ಞಾವಂತ ಸಮಾಜ ಕಟ್ಟಲು ಮುಂದಾಗಬೇಕು ಎಂದು ತಿಳಿಸಿದರು.ಗೋಕಾಕ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ರಾಮಗಾನಟ್ಟಿ, ಯರಗಟ್ಟಿ ಮಹಿಳಾ ಬ್ಲಾಕ್ ಕಾಂಗ್ರೆಸ್ಸುನಿತಾ ಗಿರೇವಗೋಳ, ಕಾಂಗ್ರೆಸ್ ಮುಖಂಡರಾದ ಶಿವಾನಂದ ಕರಿಗೋಣ್ಣವರ, ಶಂಕರ ಇಟ್ನಾಳ, ಮಲಿಕಸಾಬ ಬಾಗವಾನ, ಚಾಯಪ್ಪ ಹುಂಡೆಕಾರ, ಬಂಗಾರೆಪ್ಪ ಹರಳಿ, ಭಾಸ್ಕರ ಹಿರೇಮೆತ್ರಿ, ಬಸವರಾಜ ಸತ್ತೂರಿ, ರಫೀಕ ಡಿ ಕೆ, ಕಿರಣ ಗಿರೇವಗೋಳ, ಪರಮೇಶ ಚತ್ರಕೊಟಿ, ಬಸವರಾಜ ಪೂಜೇರ, ಗೋಪಾಲ ದಳವಾಯಿ, ಶ್ರೀಕಾಂತ ಮೆಟಗುಡ್ಡ, ಹೊನ್ನಪ್ಪ ಖಂಡ್ರಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ವಿವಿಧ ಪರ ಸಂಘಟನೆಗಳ ಕಾರ್ಯಕರ್ತರು, ಮಾನವ ಬಂಧತ್ವ ವೇದಿಕೆ ಸದಸ್ಯರು ಮತ್ತಿತರರು ಇದ್ದರು 

ಸುದ್ದಿ ಓದಿ