ಮುದ್ದೆಬಿಹಾಲ್

ಬಸರಕೋಡ-ಮಾದಿನಾಳ ಸಂಪರ್ಕ ರಸ್ತೆ ಜಲಾವೃತ: ಭಾರೀ ಮಳೆಗೆ ಕುಸಿದ ಗೋಡೆ-ಐವರು ಪ್ರಾಣಾಪಾಯದಿಂದ ಪಾರು

ಬಸರಕೋಡ-ಮಾದಿನಾಳ ಸಂಪರ್ಕ ರಸ್ತೆ ಜಲಾವೃತ: ಭಾರೀ ಮಳೆಗೆ ಕುಸಿದ ಗೋಡೆ-ಐವರು ಪ್ರಾಣಾಪಾಯದಿಂದ ಪಾರು

---- 

ಮುದ್ದೇಬಿಹಾಳ 13: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆ ಕುಸಿತ ಘಟನೆಗಳು ವರದಿಯಾಗುತ್ತಿದ್ದು ಏತನ್ಮಧ್ಯೆ ತಾಲೂಕಿನ ಸಿದ್ದಾಪೂರ ಪಿ.ಟಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಮನೆಯ ಗೋಡೆ ಕುಸಿದು ಪಕ್ಕದಲ್ಲಿದ್ದ ಪತ್ರಾಸ್ ಶೆಡ್ ಮೇಲೆ ಬಿದ್ದ ಪರಿಣಾಮ ಇಬ್ಬರು  ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. 

ಪತ್ರಾಸ್ ಶೆಡ್ ಮೇಲೆ ಏಕಾಏಕಿ ಮನೆಯ ಗೋಡೆ ಕುಸಿದ ಕಾರಣ ಶೇಡ್‌ನಲ್ಲಿದ್ದ ಬಸಪ್ಪ ಗುಡದಿನ್ನಿ ಹಾಗೂ ಅಯ್ಯಮ್ಮ ಗುಡದಿನ್ನಿ ದಂಪತಿ ಗಂಭೀರವಾಗಿ ಗಾಯೊಂಡರು.ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು  ಬಾಗಲಕೋಟ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನುಳಿದಂತೆ ಅವರ ಮಕ್ಕಳಾದ ಭೀಮವ್ವ,ರೂಪಾ,ಪ್ರಕಾಶ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಸಿದ್ದಾಪೂರ ಪಿ.ಟಿ ಗ್ರಾಮದ ದ್ಯಾಮಣ್ಣ  ಗೋಡಿಕಾರ ಇವರ ಮನೆಯ ಗೋಡೆ ಭಾಗಶಃ ಕುಸಿದು ಅದರ ಪಕ್ಕದಲ್ಲಿದ್ದ ಬಸಪ್ಪ  ಗುಡದಿನ್ನಿ ಅವರ ತಗಡಿನ ಶೆಡ್ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಅದೃಷ್ಟವಶಾತ್ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಗಾಯಾಳುಗಳನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ ಸಂದರ್ಭ ಆಸ್ಪತ್ರೆಗೆ ಭೇಟಿ ನೀಡಿದ ತಹಸೀಲ್ದಾರ್ ಬಿ.ಎಸ್‌.ಕಡಕಭಾವಿ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ನೀರೀಕ್ಷಕ  ಡಿ.ಎಸ್‌.ತಳವಾರ(ಪವನ್) ,ಸಿದ್ದಾಪೂರ  ಪಿ.ಟಿ ಗುಡದಿನ್ನಿ ದಂಪತಿ ಬಾಗಲಕೋಟೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಅವರು ಆಸ್ಪತ್ರೆಯ ಬಿಲ್‌ಗಳನ್ನು ಕಂದಾಯ ಇಲಾಖೆಗೆ ನೀಡಿದರೆ ಅವರಿಗೆ ಸರಕಾರದಿಂದ ಪರಿಹಾರ ದೊರಕಿಸಿಕೊಡಲಾಗುತ್ತದೆ.ಅಲ್ಲದೇ ಶೆಡ್ ಹಾಗೂ ಮನೆ ಬಿದ್ದಿರುವುದಕ್ಕೆ ಇಲಾಖೆಯ ನಿಯಮಾವಳಿಗಳನ್ವಯ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಇದಲ್ಲದೇ ಮಳೆಯಿಂದಾಗಿ ಬಸರಕೋಡದಿಂದ ಮಾದಿನಾಳ ಸಂಪರ್ಕಿಸುವ ರಸ್ತೆ ಜಲಾವೃತವಾಗಿ ಜನರ ಓಡಾಟಕ್ಕೆ ತೊಂದರೆಯುಂಟಾಯಿತು.ಅಲ್ಲದೇ ಯರಝರಿ ಗ್ರಾಮದೊಳಕ್ಕೆ ಮತ್ತೆ ಮಳೆ ನೀರು ಹಳ್ಳದೊಳಕ್ಕೆ ನುಗ್ಗುವ ಭೀತಿ ಜನರನ್ನು ಆವರಿಸಿದೆ.ಹಳ್ಳದ ಅಕ್ಕಪಕ್ಕದಲ್ಲಿದ್ದ ಮುಳ್ಳು ಕಂಟಿಗಳನ್ನು ತೆರವುಗೊಳಿಸುವ ಕಾರ್ಯ ಈವರೆಗೂ ಸಂಬಂಧಿಸಿದ ಇಲಾಖೆಯವರು ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. 


ಸುದ್ದಿ ಓದಿ