ಮುದ್ದೆಬಿಹಾಲ್

ಕಬ್ಬು ಬೆಳೆಗಾರರ ಹಿತರಕ್ಷಣೆ: ಅಕ್ಟೋಬರ್ 17 ರಂದು ಪ್ರಲ್ಹಾದ್ ಜೋಶಿ ಮನೆಗೆ ಪಾದಯಾತ್ರೆ ರೈತ ಸಂಘಟನೆಗಳ ಕರೆ

ಕಬ್ಬು ಬೆಳೆಗಾರರ ಹಿತರಕ್ಷಣೆ: ಅಕ್ಟೋಬರ್ 17 ರಂದು ಪ್ರಲ್ಹಾದ್ ಜೋಶಿ ಮನೆಗೆ ಪಾದಯಾತ್ರೆ  ರೈತ ಸಂಘಟನೆಗಳ ಕರೆ
Protecting the interests of sugarcane growers: Farmers' organizations call for a *padayatra* (march)

ಮುದ್ದೇಬಿಹಾಳ 15 : ರಾಜ್ಯಾದ್ಯಂತ ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಪ್ರತಿಭಟನೆಯನ್ನು ಹಿಂಪಡೆದಿದ್ದು, ಬದಲಿಗೆ ಅಕ್ಟೋಬರ್ 17ರಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸಕ್ಕೆ ಪಾದಯಾತ್ರೆ ನಡೆಸಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ತಿಳಿಸಿದ್ದಾರೆ. ಪಟ್ಟಣದಲ್ಲಿ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ರೈತರು ಉಗ್ರ ಹೋರಾಟ ನಡೆಸಿದ್ದರು.

ಆದರೆ, ರಸ್ತೆ ತಡೆಯಿಂದಾಗಿ ಸಾರ್ವಜನಿಕರಿಗೆ, ಹಾಲು, ತರಕಾರಿ, ಈರುಳ್ಳಿ ಮುಂತಾದ ಅಗತ್ಯ ವಸ್ತುಗಳನ್ನು ಸಾಗಿಸುವ ಇತರ ರೈತ ಬಾಂಧವರಿಗೆ ತೀವ್ರ ತೊಂದರೆಯಾಗುತ್ತಿತ್ತು. ಅಲ್ಲದೆ ಪೊಲೀಸ್ ಇಲಾಖೆಯ ಮನವಿ ಹಾಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆಯ ನಂತರ ಹೆದ್ದಾರಿ ತಡೆಯನ್ನು ಕೈಬಿಡಲಾಗಿದೆ ಎಂದು ಅವರು ಹೇಳಿದರು. ಕೇಂದ್ರ ಸಚಿವರ ಭರವಸೆ ಹುಸಿ: ರೈತರ ಆಕ್ರೋಶ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು 31 ಜನ ರೈತ ಮುಖಂಡರನ್ನು ಕರೆಸಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಆದರೆ ನಂತರ ನಿಜವಾದ ಹೋರಾಟಗಾರರನ್ನು ಸಭೆಗೆ ಕರೆಯದೆ, ಕೇವಲ ತಮ್ಮದೇ ಪಕ್ಷದ ಸಮಿತಿಯ ಜನರನ್ನು ಕರೆಸಿ ರೈತರಿಗೆ ಅವಮಾನ ಮಾಡಿದ್ದಾರೆ ಎಂದು ಶಾಂತಗೌಡ ನಡಹಳ್ಳಿ ಆರೋಪಿಸಿದ್ದಾರೆ. ಹಿಂದಿನ ವರದಿಗಳಿದ್ದರೂ ಮತ್ತೆ ಸಮಿತಿ ರಚನೆಗೆ ವಿರೋಧ: ಈಗಾಗಲೇ 2012ರಲ್ಲಿ ರಂಗರಾಜನ್ ಸಮಿತಿ ಹಾಗೂ 2018ರಲ್ಲಿ ನೀತಿ ಆಯೋಗದ ರಮೇಶ್ ಚಂದ್ರ ನೇತೃತ್ವದ ಸಮಿತಿಗಳು ಸಕ್ಕರೆ ಕಾರ್ಖಾನೆ ಮತ್ತು ರೈತರ ಆದಾಯ ಹಂಚಿಕೆ ಕುರಿತು ಶೇಕಡಾ 75:25 ಅನುಪಾತದ ಸೂತ್ರದ ವರದಿ ನೀಡಿವೆ. ಆದರೂ ಅವುಗಳನ್ನು ಜಾರಿಗೆ ತರದೆ, ಈಗ ಮತ್ತೆ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ರ ಅವರ ನೇತೃತ್ವದಲ್ಲೇ ಮತ್ತೊಂದು ಸಮಿತಿ ರಚಿಸಿ ಸಮಯ ಕಳೆಯಲಾಗುತ್ತಿದೆ.

ಕೇವಲ ರಾಜಕೀಯ ಉದ್ದೇಶಕ್ಕೆ ಸಮಿತಿಗಳನ್ನು ರಚಿಸದೆ, ಶಶಿಕಾಂತ್ ಗುರೂಜಿ, ಚುನ್ನಪ್ಪ ಪೂಜಾರಿ ಅವರಂತಹ ನೈಜ ರೈತ ಹೋರಾಟಗಾರರನ್ನು ಸಮಿತಿಯಲ್ಲಿ ಒಳಗೊಳ್ಳಬೇಕು ಎಂದು ಒತ್ತಾಯಿಸಿದರು. ಅಕ್ಟೋಬರ್ 17ರಂದು ಬೃಹತ್ ಪಾದಯಾತ್ರೆ: ಬೆಳೆಗಾರರ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಿಸಿರುವ ಸಂಘಟನೆಗಳು, ಅಕ್ಟೋಬರ್ 17ರಂದು ಬೆಳಗ್ಗೆ 6 ಗಂಟೆಗೆ ಯಲಗೂರದಿಂದ ಪಾದಯಾತ್ರೆ ಪ್ರಾರಂಭಿಸಲಿವೆ. ಮುದ್ದೇಬಿಹಾಳ ಹಾಗೂ ವಿಜಯಪುರ ಜಿಲ್ಲೆಯ ಪ್ರತಿಯೊಂದು ಹಳ್ಳಿಯ ಕಬ್ಬು ಬೆಳೆಗಾರರು ಪಕ್ಷ, ಜಾತಿ, ಮತ ಭೇದ ಮರೆತು ತಮ್ಮ ಸ್ವಂತ ಖರ್ಚಿನಲ್ಲಿ ಬುತ್ತಿ ಕಟ್ಟಿಕೊಂಡು ಈ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಾಂತಗೌಡ ಪಾಟೀಲ ನಡಹಳ್ಳಿ ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಾಲಪ್ಪಗೌಡ  ಲಿಂಗದಳ್ಳಿ ಸಂಗನಗೌಡ ಕೊಳೂರ  ಶಿವನಗೌಡ  ಬಿರಾದಾರ ಸೇರಿದಂತೆ  ಹಲವರು ಇದ್ದರು 


ಸುದ್ದಿ ಓದಿ