ಅಥಣಿ

ನೂತನ ಅಧ್ಯಕ್ಷರಾಗಿ ಬಸನಗೌಡ ಆಯ್ಕೆ

ನೂತನ ಅಧ್ಯಕ್ಷರಾಗಿ ಬಸನಗೌಡ ಆಯ್ಕೆ

ಅಥಣಿ: ಕನ್ನಡ ಪರ ಹೋರಾಟಗಾರ, ಕೃಷ್ಣಾ ನದಿ ಸ್ವಚ್ಛತಾ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ, ರೈತ ಪರ ಹೋರಾಟಗಾರ ಗಡಿ ಭಾಗದ ಪುಟ್ಟ ಬೊಮ್ಮನಾಳ ಗ್ರಾಮದ ರೈತಾಪಿ ಕುಟುಂಬದ ಬಸನಗೌಡ ಪಾಟೀಲ ಅರಳಿಹಟ್ಟಿ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷ. 9 ಸದಸ್ಯ ಬಲದ ಅರಳಿಹಟ್ಟಿ ಗ್ರಾಮ ಪಂಚಾಯತನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ ಬೊಮ್ಮನಾಳ 5 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು

ಮಾತನಾಡಿದ ಬಸನಗೌಡ ಪಾಟೀಲ, ಹೋರಾಟದ ಹಿನ್ನಲೆಯಲ್ಲಿ ಬಂದಿರುವ ನಾನು ಕರ್ನಾಟಕದ ಕಟ್ಟಕಡೆಯ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಬೊಮ್ಮನಾಳ ಗ್ರಾಮದ ಪಂಚಾಯತ ಸದಸ್ಯರು ಮತ್ತು ಹಿರಿಯರು ಬೆಂಬಲಿಸಿದ ಪರಿಣಾಮ ಚುನಾವಣೆಯಲ್ಲಿ ಗೆದ್ದು ಬರಲು ಸಹಕಾರಿಯಾಯಿತು ಎಂದರು.   

     ಪಂಚಾಯತ ವ್ಯಾಪ್ತಿಯ ಅರಳಿಹಟ್ಟಿ ಮತ್ತು ಬೊಮ್ಮನಾಳ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಮತ್ತು ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಪ್ರಮಾಣಿಕವಾಗಿ ನಿಭಾಯಿಸುವೆ ಎಂದರು.    

   ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸ್ವಛ್ಚತೆಯ ಜೊತೆಗೆ ಕುಡಿಯುವ ನೀರು, ವಿದ್ಯುತ್ ಸೌಲಭ್ಯಗಳನ್ನು ಯಾವುದೇ ಅಡತಡೆ ಇಲ್ಲದೆ ನಿರ್ವಹಿಸುವೆ ಎಂದರು. ತಮ್ಮ ಅಧಿಕಾರವಧಿಯಲ್ಲಿ ರೈತ, ಬಡ, ಕೃಷಿ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದ ಅವರು ನನ್ನ ಆಯ್ಕೆಗೆ ಶ್ರಮಿಸಿದ ಹಿರಿಯರ ವಿಶ್ವಾಸ ಉಳಿಸಿಕೊಂಡು ಅಧಿಕಾರ ನಡೆಸುವೆ ಎಂದರು.ಪಂಚಾಯತ ಅಭಿವೃದ್ಧಿ ದೃಷ್ಟಿಯಿಂದ ಶಾಸಕರ, ಸಂಸದರ, ಅಧಿಕಾರಿಗಳ, ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರ ಮಾರ್ಗದರ್ಶನ ಹಾಗೂ ಸಲಹೆ ಸೂಚನೆ ಪಡೆದು ಪಾರದರ್ಶಕ ಆಡಳಿತ ನೀಡುವೆ ಎಂದ ಅವರು ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಸಹಾಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.   

    ನನ್ನ ಆಯ್ಕೆಗೆ ಶ್ರಮಿಸಿದ ಧುರೀಣರಾದ ರಮೇಶ ಅವಳೇಕರ, ಧೊಂಡಿರಾಮ ಅವಳೆಕರ, ವಿಶ್ವಾಸರಾವ ಮೋರೆ, ಪರಶುರಾಮ ನಾಯಿಕ, ಮಹಾದೇವ ಅವಳೇಕರ ಸೇರಿದಂತೆ ಅನೇಕರು ಶ್ರಮಿಸಿದ್ದಾರೆ ಎಂದ ಅವರು ಉಪಾಧ್ಯಕ್ಷೆಯಾಗಿ ಸಂಗೀತಾ ಭಾಸ್ಕರ ಕಾಂಬಳೆ ಆಯ್ಕೆಯಾಗಿದ್ದಾರೆ ಎಂದರು.     ಇದಕ್ಕೂ ಮೊದಲು ಅರಳಿಹಟ್ಟಿ ಹಾಗೂ ಬೊಮ್ಮನಾಳ ಗ್ರಾಮದಲ್ಲಿ ಪಟಾಕಿ ಹಿಡಿಸಿ, ಪರಸ್ಪರ ಗುಲಾಲ ಎರೆಚಿ ವಿಜಯೋತ್ಸವ ಆಚರಿಸಿದರು. 

ಸುದ್ದಿ ಓದಿ