ಸಾಂಕ್ರಮಿಕ ರೋಗದ ಭೀತಿಯಲ್ಲಿ ಜನ: ಕೊಳೆತು ನಾರುತ್ತಿರುವ ಕಸಕ್ಕೆ ಮುಕ್ತಿ ಎಂದು !
ಬನವಾಸಿ 18: ಬನವಾಸಿ ಪಟ್ಟಣವೂ ಮಾಹಾಮಾರಿ ಕೊರೊನಾದ ಭೀತಿಯಲ್ಲಿ ತೊಂದರೆ ಅನುಭವಿಸುತ್ತಿರುವುದು ಒಂದು ಕಡೆಯಾದರೆ. ಮತ್ತೊಂದೆಡೆ ಸಾಂಕ್ರಮಿಕ ರೋಗದ ಭೀತಿಯೂ ಸಾರ್ವಜನಿಕರನ್ನು ಕಾಡುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಪಟ್ಟಣದ ವಾರ್ಡ 5ರಲ್ಲಿನ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಹಳೆ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಸುಮಾರು 5-6 ತಿಂಗಳಿಂದ ಅಕ್ಕಪಕ್ಕದ ನಿವಾಸಿಗರು ಹಾಕುತ್ತಿರುವ ಕಸ ರಸ್ತೆಯ ತುಂಬೆಲ್ಲ ಹರಡಿಕೊಂಡಿದ್ದು ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಕೊಳೆತು ಗಬ್ಬೆದ್ದು ನಾರುತ್ತಿದೆ. ಸಾಕಷ್ಟು ಬಾರಿ ಈ ಬಗ್ಗೆ ಗ್ರಾಮ ಪಂಚಾಯಿತಿಯ ಆಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಈ ಮೊದಲು ಸಹ 5-6 ತಿಂಗಳಿನಿಂದ ಬಿದ್ದಿದ್ದ ಕಸದ ಕುರಿತು ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ಬಳಿಕ ಆಧಿಕಾರಿಗಳು ಕಸ ತೆರವಿಗೆ ಮುಂದಾಗಿದ್ದರು. ಇಲ್ಲಿ ಸಾರ್ವಜನಿಕರಿಗೆ ಕಸ ಹಾಕಲು ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವುದು ಇದ್ದಕ್ಕೆ ಪ್ರಮುಖ ಕಾರಣವಾಗಿದೆ.
ಪಂಚಾಯತಿ ಅಧ್ಯಕ್ಷರ ವಾರ್ಡ್ನಲ್ಲಿಯೇ ಈ ರೀತಿ ಕಸ ತುಂಬಿಕೊಂಡಿರುವುದು ವಿಪರ್ಯಾಸದ ಸಂಗತಿ. ತಮ್ಮ ವಾರ್ಡ್ನಲ್ಲೇ ಇಂತಹ ಪರಿಸ್ಥಿತಿ ಇರುವುದು ಕಂಡರೆ ಪಟ್ಟಣದ ಸ್ವಚ್ಚತೆಗೆ ಯಾವ ರೀತಿಯ ಆದ್ಯತೆ ನೀಡುತ್ತಾರೆ ಎಂಬ ಪ್ರಶ್ನೇ ಸಾರ್ವಜನಿಕರಲ್ಲಿ ಮೂಡಿದೆ. ಪ್ರತಿ ದಿನ ಮಳೆಯಾಗುತ್ತಿದ್ದು ಕಸ ಕೊಳೆತು ಸೊಳ್ಳೆಗಳ ತಾಣವಾಗಿ ಸಾಂಕ್ರಮಿಕ ರೋಗ ಹರಡುವ ಮುನ್ನ ಕಸ ತೆರವುಗೊಳಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.
ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಚರಂಡಿಗಳ ಸ್ವಚ್ಛತೆಯಲ್ಲಿ ತೊಡಗಿದ್ದೆವೆ. ರಸ್ತೆಯ ಪಕ್ಕ ಕಸ ಹಾಕಿರುವುದು ನನ್ನ ಗಮನಕ್ಕೆ ಬಂದಿದ್ದು ಇನ್ನೂ ಎರಡು ಮೂರು ದಿನಗಳಲ್ಲಿ ಕಸ ತೆರವುಗೊಳಿಸುವ ಕೆಲಸವನ್ನು ಮಾಡುತ್ತೆವೆ.
ಸಿ ಪರಶುರಾಮ್
ಪಂಚಾಯತ್ ಅಭಿವೃದ್ದಿ ಅಧಿಕಾರಿ ಬನವಾಸಿ