ಬಾಲಿವುಡ್ ಸುಪ್ರಸಿದ್ಧ ಸಂಗೀತ ನಿರ್ದೇಶಕ ವನ್ರಾಜ್ ಭಾಟಿಯಾ ವಿಧಿವಶ
ಮುಂಬೈ, ಮೇ 7(ಯು ಎನ್ಐ) ಬಾಲಿವುಡ್ ಸಂಗೀತ ನಿರ್ದೇಶಕ ವನ್ರಾಜ್ ಭಾಟಿಯಾ (93) ನಿಧನರಾಗಿದ್ದಾರೆ.ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಶುಕ್ರವಾರ ಬೆಳಿಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು. ವನ್ರಾಜ್ ಭಾಟಿಯಾ.. ಮಂಥನ್, ಭೂಮಿಕಾ, ಜಾನ್ಬಿ ದೋ ಯಾರ್ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು.ಅವರು ದೂರದರ್ಶನದಲ್ಲಿ ಪ್ರಸಾರಗೊಂಡ ತಮಸ್ ಹಾಗೂ ಭಾರತ್ ಏಕ್ ಖೋಜ್ ನಂತಹ ಧಾರಾವಾಹಿಗಳಿಗೆ ಸಂಗೀತ ಒದಗಿಸಿದ್ದರು. ಶ್ಯಾಮ್ ಬೆನೆಗಲ್ ನಿರ್ದೇಶಿಸಿದ ಹೆಚ್ಚಿನ ಚಿತ್ರಗಳಿಗೆ ಭಾಟಿಯಾ ಸಂಗೀತ ಸಂಯೋಜಿಸಿದ್ದರು. ಸಿನಿಮಾ ಸಂಗೀತ ರಂಗಕ್ಕೆ ಅವರು ನೀಡಿದ ಕೊಡುಗೆ ಪರಿಗಣಿಸಿ 2012 ರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದರು. ಸುಮಾರು 700 ಕ್ಕೂ ಹೆಚ್ಚು ಜಿಂಗಲ್ಗಳನ್ನು ಸಂಯೋಜಿಸಿದ್ದರು. ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಸಂಪಾದಿಸಿದ್ದರೂ ಅವಿವಾಹಿತರಾಗಿಯೇ ಉಳಿದಿದ್ದರು. ಅನೇಕ ಜನಪ್ರಿಯ ಗೀತೆಗಳನ್ನು ನೀಡಿ ಹೆಸರು ವಾಸಿಯಾಗಿದ್ದ ಭಾಟಿಯಾ ವೃದ್ಧಾಪ್ಯದಲ್ಲಿ ಆರ್ಥಿಕ ಸಂಕಷ್ಟಗಳಿಗೆ ಸಿಲುಕಿದ್ದರು. ವೈದ್ಯಕೀಯ ವೆಚ್ಚಗಳಿಗಾಗಿ ಮನೆಯ ವಸ್ತುಗಳನ್ನು ಮಾರಾಟ ಮಾಡಬೇಕಾದ ಬಂದದ್ದು ದುರದೃಷ್ಟಕರ ಎಂದು ಸಮೀಪವರ್ತಿಗಳು ಹೇಳಿದ್ದಾರೆ.