ಮಾನವ ಸರಪಳಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಬಸವರಾಜ್
ರಾಣೆಬೆನ್ನೂರು 10: ನಗರದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್, ಸಮಗ್ರ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ, ಸಂಘಟನೆಯ ಜಿಲ್ಲಾ ಸಹ ಕಾರ್ಯ ದರ್ಶಿ ಬಸವರಾಜ ಭೋವಿ ಅವರು, ಶೈಕ್ಷಣಿಕ ವರ್ಷ ಆರಂಭವಾಗಿ ಐದು ತಿಂಗಳು ಕಳೆದಿವೆ. ರಾಜ್ಯದಾದ್ಯಂತ ಇರುವ ವಿದ್ಯಾರ್ಥಿಗಳ ಸಮಸ್ಯೆಗಳು ಪರಿಹಾರ ಕಾಣದೆ, ನಿರಂತರವಾಗಿ ಹೋರಾಟ ನಡೆದಿದೆ. ಪಾಠಪ್ರವಚನ ಪಟ್ಟೆಗಳು ಬಿಟ್ಟು ಬರೀ ಧರಣಿ ಪ್ರತಿಭಟನೆ ಹೋರಾಟವೇ ಮಾಡಬೇಕಾದ ದಯನೀಯ ಸ್ಥಿತಿ ನಮ್ಮದಾಗಿದೆ ಎಂದು ವಿಷಾದಿಸಿದ ಅವರು ಸರಕಾರ ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ಸೀಟು ಸಿಕ್ಕರೆ ಹಾಸ್ಟೆಲ್ ಇಲ್ಲ, ಹಾಸ್ಟೆಲ್ ಇದ್ದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ. ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಸಿಗುತ್ತಿಲ್ಲ, ಇದು ವಿದ್ಯಾರ್ಥಿ ಸಮುದಾಯದ ವಿರೋಧಿ ಧೋರಣೆಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ವಿದ್ಯಾರ್ಥಿಗಳ ಅನುಗುಣವಾಗಿ, ವಸತಿ ವ್ಯವಸ್ಥೆ ಹೆಚ್ಚಿಸ ಬೇಕಾಗಿತ್ತು ಆದರೆ ಮಾಡಿಲ್ಲ, ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡವಿಲ್ಲದೆ ನಿತ್ಯವೂ ನರಳುವಂತಾಗಿದೆ.ಬಡ ವಿದ್ಯಾರ್ಥಿಗಳಿಗೆ ವಸತಿಯಲ್ಲಿ ಅವಕಾಶ ಸಿಗುತ್ತಿಲ್ಲ ಇದರಿಂದ ಬಡವರು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದರು. ನಿತ್ಯವೂ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರುವುದರಿಂದ, ಇದೀಗ ನೀಡುತ್ತಿರುವ 1650 ರೂಪಾಯಿ ಮಾಸಿಕ ಭತ್ತೆ ಯಾವುದಕ್ಕೂ ಸಾಲುವುದಿಲ್ಲ ಎಂದು ವಿವರಿಸಿದರು.
ವಿದ್ಯಾರ್ಥಿಗಳಿಗೆ ಕೊಡಬೇಕಾದ ಸೈಕಲ್, ಸಮವಸ್ತ್ರ, ವಿದ್ಯಾರ್ಥಿವೇತನ, ವಿದ್ಯಾಸಿರಿ, ಪಠ್ಯಪುಸ್ತಕ, ಫೆಲೋಷಿಪ್, ಮತ್ತಿತರೆ ಸಹಾಯ ಕೋವಿಡ್ ನೆಪದಲ್ಲಿ ಕಳೆದ ಎರಡು ವರ್ಷಗಳಿಂದ ಬಂದ ಗೊಳಿಸಿದೆ. ಇವೆಲ್ಲವುಗಳನ್ನು ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೆಇ ಬಿ ವಿನಾಯಕ ದೇವಸ್ಥಾನದಿಂದ ಹೊರಟ ಸಾವಿರಾರು ವಿದ್ಯಾರ್ಥಿಗಳ ಸಮುದಾಯದ ಬೃಹತ್ ಮೆರವಣಿಗೆಯು, ಬಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ತಾಲೂಕ ಅಧ್ಯಕ್ಷ ಗುಡ್ಡಪ್ಪ ಮಡಿವಾಳರ ಅವರು ಮಾತನಾಡಿ, 2012ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು, ಪ್ರೊ, ಗೋವಿಂದನ್ ನೀಡಿದ ವರದಿ ಆಧರಿಸಿ, 12000 ಸರಕಾರಿ ಶಾಲೆಗಳನ್ನು ವೀಲೀನದ ನೆಪದಲ್ಲಿ ಬಂದ್ ಮಾಡಿದೆ. ಆದರೆ ಇದುವರೆಗೂ ಶಾಲೆಗಳು ಪುನರ್ ಆರಂಭಗೊಂಡಿಲ್ಲ. ಇದರ ಹಿಂದೆಯೇ ಸರ್ಕಾರ ಇದೀಗ ಮತ್ತೆ ವೀಲೀನದ ಹೆಸರಿನಲ್ಲಿ 13800 ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ.
ಸರಕಾರದ ಈ ವಿದ್ಯಾರ್ಥಿ ವಿರೋಧಿ ಧೋರಣೆ ಖಂಡನೀಯ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಇದಕ್ಕೆ ಶಿಕ್ಷಣ ಇಲಾಖೆ ಹೊರತಾಗಿಲ್ಲ, ಬಿಜೆಪಿ ಸರ್ಕಾರ ಸಮಾಜದ ಎಲ್ಲ ವ್ಯವಸ್ಥೆಯಲ್ಲಿಯೂ ಭ್ರಷ್ಟಾಚಾರ, ಲಂಚಗುಳಿತನ ನಡೆಸುವುದರ ಮೂಲಕ, ಜನಸಾಮಾನ್ಯರ ಜೀವನ ಹಾಳು ಮಾಡುತ್ತಲಿದೆ, ಗಂಭೀರ ಆರೋಪಿಸಿದರು. ಸಾಧನ ಹೇಳವರ್ ಗಂಗಾ ಮೋಟೆಬೆನ್ನೂರ್, ಆಂಜನೇಯ ಬಾರ್ಕಿ, ಮೇಹಲ್ ಖಾನ್, ಹರ್ಷ ಹೊಂಗಲ್, ಕೀರ್ತಿ ಎಸ್ಎ, ಶಿಲ್ಪ ಮಡಿವಾಳರ, ರಾಧಿಕಾ ಎಚ್, ಮಮತಾ ವಡ್ಡರ, ಅಭಿಷೇಕ್ ಕುಸುಗೂರ್, ಅಹಮದ್ ರಜಾಖಾಜಿ, ಸೇರಿದಂತೆ ಮತ್ತಿತರ ಕಾರ್ಯಕರ್ತರು ಮುಖಂಡರು ಹಾಗೂ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.