ಬಿಇಓ ಗುರುಪ್ರಸಾದ ಜೆ.ಎನ್. ದಕ್ಷ ಅಧಿಕಾರಿ: ಲಮಾಣಿ
ರಾಣೇಬೆನ್ನೂರು 11: ಬಿಇಓ ಅಧಿಕಾರಿಗಳಾದ ಗುರುಪ್ರಸಾದ ಜೆ.ಎನ್. ಅವರು ಸರಕಾರಿ ಅನುದಾನ ಮತ್ತು ಅನುದಾನ ರಹಿತ ಶಾಲಾ ಮಕ್ಕಳು ಮತ್ತು ಬಡ ಪಾಲಕರ ಮೇಲೆ ಅಪಾರ ಗೌರವ ಹೊಂದಿದವರಾಗಿದ್ದು, ಇಲಾಖೆಯಲ್ಲಿ ದಕ್ಷ ಅಧಿಕಾರಿ ಎಂದು ದೊಡ್ಡ ಹೆಸರು ಮಾಡಿದ್ದಾರೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಲಮಾಣಿ ಹೇಳಿದರು.
ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ಜೆ.ಎನ್. ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಹಾವೇರಿ ಜಿಲ್ಲಾ ಯುವ ಘಟಕದ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಕೋವಿಡ್–19 ಹಿನ್ನೆಲೆಯಲ್ಲಿ ಜಗತ್ತಿಗೆ ಜಗತ್ತೇ ತಲ್ಲಣಗೊಂಡಿರುವಾಗ ಶಿಕ್ಷಣ ಕ್ಷೇತ್ರದಲ್ಲಿಯೂ ಸಹ ಅಪಾರ ಏರು ಪೇರು ಆಗಿದೆ. ಇತ್ತೀಚೆಗೆ ಶಾಲೆಗಳು ಪ್ರಾರಂಭಗೊಂಡಿರುವುದರಿಂದ ಪಾಲಕರ ಮೇಲೆ ಅತಿಯಾದ ಶಾಲಾ ಫೀ ಹೊರೆ ಬೀಳುವುದು ಸೇರಿದಂತೆ ಮತ್ತಿತರೆ ಹೊರೆ ಪಾಲಕರ ಮೇಲೆ ಬಿದ್ದಿದೆ. ಇದರಿಂದ ಬಡ ಪಾಲಕರು ಆತಂಕದಲ್ಲಿದ್ದಾರೆ ಎಂದು ಲಮಾಣಿ ಕಳವಳ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ಜೆ.ಎನ್., ನಾನೂ ಕೂಡ ಒಬ್ಬ ಬಡವರ ಮಗನಾಗಿದ್ದು, ಬಡ ಪಾಲಕರ ಮೇಲೆ ನನಗೆ ವಿಶೇಷ ಕಾಳಜಿ ಇದೆ. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆಲವು ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಅನುಭವಿಸುತ್ತಿರುವ ಬವಣೆ ಮತ್ತು ಬಡ ಪಾಲಕರ ಬವಣೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿದೆ. ಅತ್ಯಂತ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ. ನನ್ನ ಸಾಧನೆ ಗುರುತಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಲಮಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ರಾಜನಹಳ್ಳಿ ಮತ್ತು ಪದಾಧಿಕಾರಿಗಳು ನನಗೆ ಸನ್ಮಾನಿಸಿ ಗೌರವಿಸಿದ್ದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದರು.
ಜಿಲ್ಲಾಧ್ಯಕ್ಷೆ ಪ್ರೇಮಾ ಅಂಗಡಿ, ಡಾ.ನಾಗರಾಜ ಚಳಗೇರಿ, ಸುನಿತಾ ಬಾರ್ಕಿ, ಪೀರು ಪೂಜಾರ, ನಾಗರಾಜ ಚವ್ಹಾಣ, ಡಾಕೇಶ್ ಚವ್ಹಾಣ, ರಾಮಣ್ಣ ನಾಯಕ್ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.