ಬೈಲಹೊಂಗಲ

ಮಲ್ಲಮ್ಮನ ಬೆಳವಡಿಯಲ್ಲಿ ಆಕರ್ಷಕ ಡಿಜಿಟಲ್ ಗ್ರಂಥಾಲಯ

ಮಲ್ಲಮ್ಮನ ಬೆಳವಡಿಯಲ್ಲಿ ಆಕರ್ಷಕ ಡಿಜಿಟಲ್ ಗ್ರಂಥಾಲಯ

ಮಕ್ಕಳ, ಮಹಿಳಾ, ಸ್ಪರ್ಧಾತ್ಮಕ ಪರೀಕ್ಷೆ, ಸುಸಜ್ಜಿತ ಆಫಿಸ ಪುಸ್ತಕಗಳು, ಮಕ್ಕಳ ಪಠ್ಯಪುಸ್ತಕ ಸಹಿತ ನೊಂದಣಿ ಮತ್ತು ವಿಚಾರಣೆಗಾಗಿ ಪ್ರತ್ಯೇಕ ವಿಭಾಗ  

ಬೈಲಹೊಂಗಲ 04: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂದಿಗೂ ಗುಣಮಟ್ಟದ ಶಿಕ್ಷಣ ಗಗನಕುಸುಮವೇ ಸರಿ. ಆದರೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಮಾತ್ರ ಶಿಕ್ಷಣ ಮತ್ತು ಅಧ್ಯಯನಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಇಲ್ಲಿ ನಿರ್ಮಾಣವಾದ ಡಿಜಿಟಲ್ ಗ್ರಂಥಾಲಯ ಮಕ್ಕಳ ಓದುವ ಹವ್ಯಾಸಕ್ಕೆ ಹೊಸ ಹುರುಪು ತಂದುಕೊಟ್ಟಿದೆ. ನಗರ ಪ್ರದೇಶದ ಗ್ರಂಥಾಲಯ ಮೀರಿಸುವಂತಹ ಡಿಜಿಟಲ್ ಗ್ರಂಥಾಲಯ ಇದಾಗಿದ್ದು, ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. 

14 ನೇ ಹಣಕಾಸು ಉಳಿಕೆ ಬಡ್ಡಿಮೊತ್ತ ರೂ.3.90 ಲಕ್ಷ ಗ್ರಾಪಂ.ಸ್ವಂತ ಸಂಪನ್ಮೂಲದಲ್ಲಿ ಗ್ರಂಥಾಲಯವನ್ನು ಆಕರ್ಷಕವಾಗಿ ಉನ್ನತಿಕರಿಸಲಾಗಿದೆ. ಗ್ರಂಥಾಲಯದಲ್ಲಿ ಮಕ್ಕಳ ವಿಭಾಗ, ಮಹಿಳಾ ವಿಭಾಗ, ಸ್ಪರ್ಧಾತ್ಮಕ ಪರೀಕ್ಷೆ ವಿಭಾಗ, ಸುಸಜ್ಜಿತ ಆಫಿಸ ಪುಸ್ತಕಗಳು, ಮಕ್ಕಳ ಪಠ್ಯಪುಸ್ತಕ ಸಹಿತ (ಬಯಲು ಗ್ರಂಥಾಲಯ ಹುಲ್ಲುಹಾಸಿನ) ನೊಂದಣಿ ಮತ್ತು ವಿಚಾರಣೆಗಾಗಿ  ಪ್ರತ್ಯೇಕ ವಿಭಾಗ ಇವೆ. ಡಿಜಿಟಲ್ ಗ್ರಂಥಾಲಯ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧಿಕಾರಿಗಳು ಶಿಕ್ಷಣ ಮತ್ತು ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು,  ಆ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಕನಸಿನ ಹೆಜ್ಜೆಯಿಟ್ಟಿದ್ದಾರೆ. ಶಿಕ್ಷಣ ಮತ್ತು ಅಧ್ಯಯನಕ್ಕೆ ಆದ್ಯತೆ ನೀಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ.  

ಉಪಯುಕ್ತ ಪುಸ್ತಕಗಳು, ಕಂಪ್ಯೂಟರ್ ಹಾಗೂ ಇಂಟರ್ ನೆಟ್ ಸೌಲಭ್ಯ ಇಲ್ಲಿ ಲಭ್ಯವಿದೆ.  ಆರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಇಲ್ಲಿ ಇಂಟರ್‌ನೆಟ್ ಮೂಲಕ ಓದಬಹುದು. ಮಕ್ಕಳನ್ನು ಓದಿನತ್ತ ಸೆಳೆಯುವ ನಿಟ್ಟಿನಲ್ಲಿ ಆಕರ್ಷಕ ಪೇಂಟಿಂಗ್, ಸಾಹಿತಿ ಮತ್ತು ಸಾಧಕರ ಚಿತ್ರ ಹಾಕಲಾಗಿದೆ. ವಿವಿಧ ನುಡಿ ಬರಹಗಳನ್ನು ಹಾಕಲಾಗಿದ್ದು, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಇಲ್ಲಿ ಸಿಗಲಿದೆ. 

ಸಿಇಓ ದರ್ಶನ ಅವರ ಬಹಳ ದಿನಗಳ ಡಿಜಿಟಲ ಗ್ರಂಥಾಲಯ ಕನಸು ಈಗ ನನಸಾಗಿದೆ. ತಾಪಂ.ಇಓ ಸುಭಾಷ ಸಂಪಗಾಂವಿ ಅವರ ಮಾರ್ಗದರ್ಶನದಲ್ಲಿ  ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡಲು  ಮಲ್ಲಮ್ಮನ ಬೆಳವಡಿಯ ಗ್ರಾಪಂ.ಅಧ್ಯಕ್ಷರ ಹಾಗೂ ಸರ್ವ ಸದಸ್ಯರ ಸಹಕಾರ ಕಾರಣ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಒಳ್ಳೆಯ ಜ್ಞಾನ ಪಡೆದುಕೊಳ್ಳಲು ಗ್ರಾಪಂ.ಗ್ರಂಥಾಲಯ ತುಂಬಾ ಉಪಯುಕ್ತವಾಗಿದೆ  

ಉಸ್ಮಾನ ನದಾಫ  

ಪಿಡಿಓ 


ಸುದ್ದಿ ಓದಿ