ಶಿಗ್ಗಾವ್

ಅರಟಾಳ ರುದ್ರಗೌಡ್ರ, ಡಾ. ಈಶ್ವರನ್ ಕೊಡುಗೆ ಅಪಾರ

ಅರಟಾಳ ರುದ್ರಗೌಡ್ರ, ಡಾ. ಈಶ್ವರನ್ ಕೊಡುಗೆ ಅಪಾರ

ಶಿಗ್ಗಾವಿ 03: ವೈಚಾರಿಕ ಚಿಂತನೆ ಮೂಲಕ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಕನಕದಾಸರು ಹಾಗೂ ಶರೀಫರು ಈ ನೆಲದ ನಕ್ಷತ್ರಗಳು. ಜೊತೆಗೆ ತ್ಯಾಗಜೀವಿಗಳಾದ ಅರಟಾಳ ರುದ್ರಗೌಡ್ರ ಹಾಗೂ ಡಾ.ಹಿರೇಮಲ್ಲೂರ ಈಶ್ವರನ್ ಅವರು ಸ್ಮರಣೀಯರು ಎಂದು ಕಸಾಪ ತಾಲೂಕಾಧ್ಯಕ್ಷ ಡಾ.ನಾಗರಾಜ ದ್ಯಾಮನಕೊಪ್ಪ ಹೇಳಿದರು.

ಪಟ್ಟಣದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಉತ್ತರ ಸಾಹಿತ್ಯ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ನೇತಾಜಿ ಪ್ರಕಾಶನದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ ಬಸೂ ಸೂಳಿಬಾವಿ ಮಾತನಾಡಿ, ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡುವ ಹಾಗೂ ಅವುಗಳನ್ನು ನಿಯಂತ್ರಿಸುವ ಉದ್ದೇಶದಿಂದ ದ್ವಿಭಾಷಾ ನೀತಿ ಮೂಲಕ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯನ್ನು ಮುಂಚೂಣಿಯಲ್ಲಿ ತರಲಾಗುತ್ತಿದೆ. ಹಿಂದಿ ಹೇರಿಕೆ ನಿಲುವನ್ನು ವಿರೋಧಿಸಬೇಕಿದ್ದವರು ಆ ಭಾಷೆಯ ಪರ ನಿಲ್ಲುತ್ತಿರುವುದು ಆತ್ಮಸಾಕ್ಷಿ ವಂಚನೆ ಎಂದರು.

ವಿರಕ್ತಮಠದ ಶ್ರೀ ಸಂಗನಬಸವ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಧಾರವಾಡ ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ವಿಜಯಕಾಂತ ಪಾಟೀಲ, ಧಾರವಾಡದ ಹಿರೇಮಲ್ಲೂರ ಈಶ್ವರನ್ ಪಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ಶಶಿಧರ ತೋಡಕರ ಮಾತನಾಡಿದರು. 

ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಲಿಂಗಯ್ಯ ಹಿರೇಮಠ, ಶಿವಪ್ರಕಾಶ ಬಳಿಗಾರ, ಚನ್ನಪ್ಪ ಅಂಗಡಿ, ಚಂ.ಸು. ಪಾಟೀಲ, ಎ.ಎಸ್. ಮಕಾನದಾರ, ಡಾ.ಸುಮಂಗಲಾ ಅತ್ತಿಗೇರಿ ಉಪಸ್ಥಿತರಿದ್ದರು. ಬಸವರಾಜ ಶಿಗ್ಗಾವಿ ಹಾಗೂ ಸಂಗಡಿಗರು ತತ್ವಪದ ಹಾಡಿದರು. ಶಶಿಕಾಂತ ರಾಠೋಡ, ರಂಜಾನ್ ಕಿಲ್ಲೇದಾರ್ ಎಸ್.ವಿ. ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.


ಸುದ್ದಿ ಓದಿ