7 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ
ರಾಣೇಬೆನ್ನೂರು ನಗರಸಭೆ ವಿಶೇಷ ಸಾಮಾನ್ಯ ಸಭೆ | ಸದಸ್ಯರ ಮಧ್ಯೆ ಮಾತಿನ ಚಕಮತಿ
ರಾಣೇಬೆನ್ನೂರು 05: ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆ ಸದಸ್ಯರ ಗದ್ದಲದಿಂದಾಗಿ ಗೊಂದಲದ ಗೂಡಾಗಿ ಪರಿಣಮಿಸಿತು.
ಸಾಮಾನ್ಯ ಸಭೆ ಏಕೆ ಕರೆಯಲಿಲ್ಲ, ಈ ವಿಶೇಷ ಸಭೆ ಏಕೆ ಕರೆಯಬೇಕಿತ್ತು, ಎಂಜಿ ರಸ್ತೆಯ ಮಳಿಗೆ ಹರಾಜು ಏಕೆ ಆಗಿಲ್ಲ ? ಎಂದು ವಿರೋಧ ಪಕ್ಷದ ನಿಂಗರಾಜ ಕೋಡಿಹಳ್ಳಿ ಆಕ್ಷೇಪ ಎತ್ತಿದಾಗ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯ ವಿಷಯಾಂತರಗೊಂಡು ಮಾತಿನ ಚಕಮಿಕಿ ನಡೆದು ಗದ್ದಲ ಏರ್ಪಟ್ಟಿತು. ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಮಧ್ಯೆ ಪ್ರವೇಶಿಸಿ ವಿಷಯಾಂತರ ಮಾಡಬೇಡಿ ನೇರವಾಗಿ ವಿಷಯಕ್ಕೆ ಬನ್ನಿ ಎಂದು ಹೇಳಿದರೂ ಮಾತಿನ ಚಕಮಕಿ ಮುಂದುವರೆಯಿತು. ಆಡಳಿತ ಪಕ್ಷದ ಪ್ರಕಾಶ ಬುರಡಿಕಟ್ಟಿ, ಮಲ್ಲಣ್ಣ ಅಂಗಡಿ, ಪ್ರಕಾಶ ಪೂಜಾರ ವಿಪಕ್ಷ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಮತ್ತೆ ಗೊಂದಲಮಯವಾಯಿತು. ಕೊನೆಗೆ ಕೆಲ ಹೊತ್ತು ಚರ್ಚೆಯ ಆನಂತರ ಸಭೆ ತಣ್ಣಗಾಯಿತು.
ಸಭೆಯಲ್ಲಿ 8 ವಿಷಯಗಳ ಬಗ್ಗೆ ಚರ್ಚೆ ನಡೆದು 7 ಕೋಟಿಗೂ ಅಧಿಕ ಮೊತ್ತದ 40ಕ್ಕೂ ಅಧಿಕ ಕಾಮಗಾರಿಗಳಿಗೆ ಸರ್ವಾನುಮತದಿಂದ ಮಂಜೂರಾತಿ ಜೊತೆಗೆ ಅನುಮೋದನೆ ನೀಡಲಾಯಿತು. ಸಭೆಗೂ ಮುನ್ನ ನಾಮನಿರ್ದೇಶಿತ 5 ಸದಸ್ಯರನ್ನು ಗೌರವಿಸಲಾಯಿತು. ಪೌರಾಯುಕ್ತ ಎನ್ ಮಹಾಂತೇಶ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ ಸೇರಿದಂತೆ ನಗರಸಭೆಯ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.