ರೈತರ ಜಮೀನುಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸಿ
ಶಿವಪೂರ, ಕಲ್ಲದೇವನಹಳ್ಳಿ ರೈತರಿಂದ ಮನವಿ
ತಾಳಿಕೋಟೆ 16: ತಾಲೂಕಿನ ಶಿವಪೂರ, ಕಲ್ಲದೇವನಹಳ್ಳಿ ಗ್ರಾಮದ ರೈತರ ಹೊಲಗಳಿಗೆ ನೀಡುತ್ತಿರುವ ವಿದ್ಯುತ್ನ್ನು 7ಗಂಟೆಗಳ ಕಾಲ ನಿರಂತರವಾಗಿ ನೀಡದೇ ಸುಮಾರು 15ರಿಂದ 20ಬಾರಿ ಕಡಿತಗೊಳಿಸುತ್ತಿರುವದರಿಂದ ರೈತರಿಗೆ ತಿರ್ವ ತೊಂದರೆಯಾಗುತ್ತಿದ್ದು ನಿರಂತರವಾಗಿ ಕಡಿತಗೊಳಿಸದೇ ವಿದ್ಯುತ್ನ್ನು ನೀಡುವಂತೆ ಒತ್ತಾಯಿಸಿ ರೈತರು ಪಟ್ಟಣದ ಹೆಸ್ಕಾಂ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಾಲೂಕಿನ ಶಿವಪೂರ, ಕಲ್ಲದೇವನಹಳ್ಳಿ, ಹಗರಗುಂಡ ಗ್ರಾಮಗಳ ವ್ಯಾಪ್ತಿಯಲ್ಲಿ 7 ಗಂಟೆಗಳ ಕಾಲ ಹಗಲಿನಲ್ಲಿ ವಿದ್ಯುತ್ ಪೂರೈಸಬೇಕು. ಈ ಕುರಿತು ಸರಕಾರದ ಆದೇಶ ಸಹ ಇದೆ. ಆದರೆ ಕಳೆದ 15 ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ರೈತರ ಜಮೀನುಗಳಿಗೆ ವಿದ್ಯುತ್ ಪೂರೈಕೆ ಆರಂಭವಾಗುತ್ತಿದ್ದಂತೆ ವಿದ್ಯುತ್ ಕಡಿತಗೊಳ್ಳುತ್ತದೆ. 7 ಗಂಟೆಯಲ್ಲಿ ಸುಮಾರು 15 ರಿದ 20 ಸಲ ವಿದ್ಯುತ್ನ್ನು ಕಡಿತಗೊಳಿಸಲಾಗುತ್ತಿದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರು ಸಹಿತ ಸರಿಯಾದ ಕ್ರಮ ಕೈಕೊಳ್ಳುತ್ತಿಲ್ಲ. ಈ ಬಗ್ಗೆ ಕೇಳಿದರೆ ಮುದ್ದೇಬಿಹಾಳ ತಾಲೂಕಿನ ಕೆಲ ಹಳ್ಳಿಗಳಿಗೆ ಹೆಚ್ಚುವರಿಯಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ಈ ರಿತಿಯಾಗುತ್ತಿದೆ ಎಂದು ಸಬೂಬು ಹೇಳುತ್ತಿದ್ದಾರೆ. ವಿದ್ಯುತ್ ಯಾಕೆ ನಿರಂತರವಾಗಿ ಕಡಿತಗೊಳ್ಳುತ್ತಿದೆ ಅಂತಾ ನಮಗೆ ತಿಳಿಯುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ತುರ್ತು ಕ್ರಮ ಕೈಕೊಂಡು ನಿರಂತರವಾಗಿ 7 ಗಂಟೆಗಳ ಕಾಲ ರೈತರ ಜಮೀನುಗಳಿಗೆ ವಿದ್ಯುತ್ ಪೂರೈಸಬೇಕು. ಒಂದು ವಾರದಲ್ಲಿ ಸಮಸ್ಯೆ ಬಗೆ ಹರಿಯದಿದ್ದರೆ ಒಂದು ವಾರದ ನಂತರ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ರೈತರು ಆಗ್ರಹಿಸಿದರು.
ಮನವಿಯನ್ನು ಸ್ವಿಕರಿಸಿದ ಹೆಸ್ಕಾಂ ಕಿರಿಯ ಅಭಿಯಂತರ ಆರ್.ಎಚ್.ಕುಲಕರ್ಣಿ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರಾದ ರವಿ ಕಟ್ಟಿಮನಿ, ಬಸಲಿಂಗಪ್ಪ ಮಕಾಳಿ, ನಗರ್ಪ ಮಕಳಿ, ಮುತ್ತಪ್ಪ ವಡಿಗೇರಿ, ನಿಂಗಪ್ಪ ಬಿರಾದಾರ, ಗಂಗಪ್ಪ ವಡಿಗೇರಿ, ಪರಸಪ್ಪ ವಡಿಗೇರಿ, ಯಮನಪ್ಪ ನಾಯ್ಕೋಡಿ, ಚಾಂದಬಾಷಾ ವಜ್ಜಲ, ಭಿಮಣ್ಣ ವಡಿಗೇರಿ, ಬಸವರಾಜ ಕೊಡೆಕಲ್ಲ ಸೇರಿದಂತೆ ರೈತರು ಇದ್ದರು.