ಪಕ್ಷಭೇದ ಮರೆತು ಶತಮಾನೋತ್ಸವ ಸಂಭ್ರಮಕ್ಕೆ ಕೈಜೋಡಿಸಿ
ಬ್ಯಾಡಗಿ 14: ಪಟ್ಟಣದಲ್ಲಿ 118 ವರ್ಷಗಳನ್ನು ಕಂಡಿರುವ ಎಸ್ಜೆಜೆಎಮ್ ಸರ್ಕಾರಿ ಪ್ರೌಢಶಾಲೆಗೆ ಕೊನೆಗೂ ಶತಮಾನೋತ್ಸವದ ಸಂಭ್ರಮಾಚರಣೆ ಕಾಣುವ ಸೌಭಾಗ್ಯ ಕೂಡಿ ಬಂದಿದ್ದು, ಎಲ್ಲರೂ ಪಕ್ಷಭೇದ ಮರೆತು ಶತಮಾನೋತ್ಸವದ ಸಂಭ್ರಮಕ್ಕೆ ಕೈಜೋಡಿಸಬೇಕೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮನವಿ ಮಾಡಿದರು.
ಸ್ಥಳೀಯ ಎಸ್ಜೆಜೆಎಂ ಪ್ರೌಢಶಾಲೆಯ ಸಭಾಭವನದಲ್ಲಿ ನಡೆದ ಶಾಲೆಯ ಶತಮಾನೋತ್ಸವದ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಪೂರ್ವ ಅಂದರೆ 1903ರಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ಸ್ಥಾಪನೆಗೊಂಡು ಶೈಕ್ಷಣಿಕವಾಗಿ ಮುನ್ನುಡಿ ಬರೆದ ಈ ಶಾಲೆಯು ಕಳೆದ 2003 ರಲ್ಲಿಯೇ ನೂರು ವರ್ಷಗಳನ್ನು ಪೂರೈಸಿದ್ದರೂ ಶತಮಾನದ ಸಂಭ್ರಮಕ್ಕೆ ಚಾಲನೆ ಸಿಗದೇ ಇರುವುದು ವಿಷಾದಕರ ಸಂಗತಿ. ಈ ಶಾಲೆಯಲ್ಲಿ ಕಲಿತಿರುವ ವಿದ್ಯಾರ್ಥಿಗಳು ವಿದೇಶಗಳಲ್ಲಿ ಡಾಕ್ಟರ್, ಇಂಜನೀಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ರಾಜ್ಯದಲ್ಲಿಯೂ ಸಹ ಇಂಜನೀಯರ್ಸ್, ವಕೀಲರು, ಸೈನಿಕರು, ಪೆÇಲೀಸರು, ಶಿಕ್ಷಕರು, ಉಪನ್ಯಾಸಕರು, ಹೆಸ್ಕಾಂ ಸೇರಿದಂತೆ ನೂರಾರು ಜನರ ಬದುಕಿಗೆ ಬೆಳಕು ನೀಡಿದೆ. ಜತೆಗೆ ಆದರ್ಶ ರಾಜಕಾರಣಿಗಳಿಗೆ ಕೂಡ ದಾರಿದೀಪವಾಗಿದೆ.
ಫೆ.19ರಂದು ಪಟ್ಟಣದ ಹಿರಿಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಸೇರಿ ಶಾಲೆಯ ಶತಮಾನೋತ್ಸವ ಆಚರಣೆ ಕಾರ್ಯಕ್ರಮ ನಡೆಸಲು ಉಪ ಸಮಿತಿ ರಚಿಸಿ ಜವಾಬ್ದಾರಿ ಹಂಚಿಕೊಳ್ಳುವ ಮೂಲಕ ಶತಮಾನೋತ್ಸವ ಸಂಭ್ರಮಕ್ಕೆ ಸಹಕಾರ ನೀಡಬೇಕೆಂದು ಹೇಳಿದರು.
ಮಾಜಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ಸಹಸ್ರಾರು ವಿದ್ಯಾರ್ಥಿಗಳಲ್ಲಿ ಜ್ಞಾನದ ಜ್ಯೋತಿ ಹೊತ್ತಿಸಿ ಪ್ರಗತಿ ಪಥದಲ್ಲಿ ಸಾಗುತ್ತಿರುವ ಶಾಲೆಗೆ ಶತಮಾನೋತ್ಸವ ಆಚರಣೆ ಮಾಡುವ ಬಗ್ಗೆ ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಚರ್ಚೆಯಾಗಿತ್ತು. ಆದರೆ ಅದಕ್ಕೆ ಈಗ ಕಾಲ ಕೂಡಿ ಬಂದಿದ್ದು, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರ ಸಾರಥ್ಯದಲ್ಲಿ ಶತಮಾನೋತ್ಸವ ಸಂಭ್ರಮ ನಡೆಯುವಂತಾಗಲಿ ಎಂದರು.ಈ ಸಂದರ್ಭದಲ್ಲಿ ಚಿಕ್ಕಣ್ಣ ಹಾದಿಮನಿ, ಚಂದ್ರಪ್ಪ ಶೆಟ್ಟರ, ಗಂಗಣ್ಣ ಎಲಿ, ಮುರಿಗೆಪ್ಪ ಶೆಟ್ಟರ, ಮಲ್ಲೇಶಪ್ಪ ಚಿಕ್ಕಣ್ಣನವರ, ಸುರೇಶ ಉದ್ಯೋಗಣ್ಣನವರ, ಎಸ್.ಎನ್. ಯಮುನಕ್ಕನವರ, ಎಸ್.ಎಸ್. ಹಿರೇಮಠ, ಜಿತೇಂದ್ರ ಸುಣಗಾರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.