ಎಚ್ಯುಐಡಿ ನಿಯಮ ಕೈಬಿಡಲು ಕೇಂದ್ರ ಸರ್ಕಾರಕ್ಕೆ ಮನವಿ
ಕಾರವಾರ : ಬಂಗಾರ ಖರೀದಿಯಲ್ಲಿ ಮಾರುವವನ ಮತ್ತು ಕೊಳ್ಳುವವನ ಗುರುತು ಪತ್ತೆ ಹಚ್ಚುವ ಹಾಗೂ ಎಲ್ಲಾ ಮಾಹಿತಿಗಳನ್ನು ಕೇಂದ್ರ ಸರ್ಕಾರಕ್ಕೆ ಕೊಡುವ ನಿಯಮ, ಎಚ್ ಯುಐಡಿ ಕಾನೂನು ಬಂಗಾರ ಆಭರಣ ತಯಾರಿಸುವ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಹಾಗೂ ಕೊಳ್ಳುವವರಿಗೆ ಮಾರಕ ಎಂದು ಕಾರವಾರದ ಜ್ಯುವೆಲರಿ ಮರ್ಚೆಂಟ್ಸ ಅಸೋಸಿಯೇಶನ್ ಪ್ರತಿಭಟನೆ ನಡೆಸಿತು. ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಮುನ್ನೂರಕ್ಕೂ ಹೆಚ್ಚು ಬಂಗಾರದ ಕುಶಲ ಕರ್ಮಿಗಳು, ಸಣ್ಣ ಮತ್ತು ಮಧ್ಯಮ ವರ್ತಕರು ಕೇಂದ್ರ ಸರ್ಕಾರ 2021 ಜುಲೈ 1 ರಿಂದ ಜಾರಿಗೆ ತಂದಿರುವ ಎಚ್ ಯು ಐ ಡಿ ನಿಯಮ, ಕಾನೂನು ಕೈಬಿಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಮುಗಿಲನ್ ಅವರ ಮೂಲಕ ಪ್ರಧಾನಿ ಮೋದಿಗೆ ಮನವಿ ಕಳುಹಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಬೇಡಿಕೆಗಳನ್ನು ಸುವರ್ಣ ವರ್ತಕರು ಹೇಳಿಕೊಂಡರು.
ಹಾಲ್ ಮಾರ್ಕಗೆ ಸ್ವಾಗತವಿದೆ. ಆದರೆ ಎಚ್ ಯು ಐ ಡಿ ಕಾನೂನಿಗೆ ಪ್ರತಿಭಟನೆ ಇದೆ. ಇದು ಸಣ್ಣ ಕುಶಲಕರ್ಮಿ , ಬಂಗಾರದ ವರ್ತಕರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಎಂದು ಅಭಿಪ್ರಾಯಪಟ್ಟರು. ಬಂಗಾರ ಆಭರಣ ಮಾಡುವವರ ಹಾಗೂ ಕೊಳ್ಳುವವರ ಮೇಲೆ ಪೊಲೀಸ್ ಕಣ್ಣು ಇಡುವುದು, ಗುಪ್ತಚರ ಕೆಲಸ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಇದರಿಂದ ದೊಡ್ಡ ದೊಡ್ಡ ಬಂಗಾರದ ವ್ಯಾಪಾರಿಗಳು ಮಾತ್ರ ಉಳಿಯುತ್ತಾರೆ. ಸಣ್ಣ ಸಣ್ಣ ಆಭರಣ ತಯಾರಿಸಿ ಮಾರಾಟ ಮಾಡುವ ಕುಶಲ ಕರ್ಮಿಗಳು ದೊಡ್ಡ ವ್ಯಾಪಾರಿಗಳ ಗುಲಾಮರಾಗಿ ಬದುಕುಬೇಕಾಗುತ್ತದೆ. ಎಚ್ ಯು ಐ ಡಿ ನಿಯಮ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರಕ್ಕೆ ವಿರುದ್ಧವಾಗಿದೆ. ಈ ಕಾನೂನು ವ್ಯಕ್ತಿಯ ವಯಕ್ತಿಕ ಬದುಕಿನಲ್ಲಿ ಇಣುಕಿದಂತಿದೆ. ಯಾರು ಯಾವ ಆಭರಣ ಯಾವಾಗ ಖರೀದಿಸಿದರು ಎಂಬುದನ್ನು ಯಾಕೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಕೊಡಬೇಕು. ಎಲ್ಲವನ್ನು ಹೇಳುವುದಾದರೆ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ ಎಂದು ಬಂಗಾರದ ಸಣ್ಣ ವರ್ತಕರು ಆಕ್ರೋಶ ವ್ಯಕ್ತಪಡಿಸಿದರು. ಸಣ್ಣ ವ್ಯಾಪಾರಿಗಳು ಬದುಕದಂತಹ ವಾತಾವರಣ ಸೃಷ್ಟಿಸಲಾಗುತ್ತಿದೆ. ವಯಕ್ತಿಕವಾಗಿ ಪ್ರಜೆಗಳ ಮೇಲೆ ಕಣ್ಣಿಡುವುದು ಸರಿಯಲ್ಲ. ತಾಂತ್ರಿಕ ಕುಶಲ ಕರ್ಮಿಗಳನ್ನು ನಾಶ ಮಾಡುವ ಉದ್ದೇಶ ಎಚ್ ಯು ಐ ಡಿ ನಿಯಮದ ಹಿಂದೆಯಿದೆ. 2 ಲಕ್ಷ ಕುಶಲ ಕರ್ಮಿಗಳ ಜೊತೆ ವರ್ತಕರು ಸಣ್ಣ ಪ್ರಮಾಣದಲ್ಲಿ ಬಂಗಾರದ ಆಭರಣ ಮಾಡಿ ಬದುಕುತ್ತಿದ್ದಾರೆ. 25 ಲಕ್ಷ ಕುಟುಂಬಗಳು , ಕುಶಲ ಕರ್ಮಿ ಸಮುದಾಯ , ಆಭರಣ ಕಲಾವಿದರು ಬಂಗಾರದ ಸಣ್ಣ ಉದ್ಯಮ ಅಲವಂಬಿಸಿದ್ದಾರೆ. ಇವರಿಗೆ ಮಾರಕವಾದ ಎಚ್ ಯು ಐ ಡಿ ನಿಯಮ ಕೈಬಿಡಬೇಕೆಂದು ಜ್ಯುವಲೆರಿ ಮರ್ಚಂಟ್ಸ ಅಸೋಸಿಯೇಶನ್ ಅಧ್ಯಕ್ಷ ದೀಪಕ್ ಆರ್.ಅಣ್ವೇಕರ್ ಆಗ್ರಹಿಸಿದರು. ಅವರ ಜೊತೆ ಅಸೋಸಿಯೇಶನ್ ಪದಾಧಿಕಾರಿಗಳಾದ ಸುರಾನ್ ಎಂ.ರೇವಣಕರ್, ರಾಮದಾಸ ಎಸ್.ವರ್ಣೇಕರ, ನರೇಂದ್ರ ವಿ. ಮನವಿ ನೀಡುವಾಗ ಹಾಜರಿದ್ದರು. ನೂರಾರು ಕುಶಲಕರ್ಮಿಗಳು ಜಿಲ್ಲಾಧಿಕಾರಿ ಕಚೇರಿ ಹೊರ ಆವರಣದಲ್ಲಿ ಭಾಗವಹಿಸಿದ್ದರು.