ಕಾರವಾರ

ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ಮನವಿ

ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ಮನವಿ

ಮುಂಡಗೋಡ 05: ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ಮುಂಡಗೋಡ ತಾಲೂಕು ಸೂರ್ವವಂಶ ಕ್ಷತ್ರಿಯ ಖಾಟಿಕ್ ಮಹಿಳಾ ಸಮಾಜದವರು ಶುಕ್ರವಾರ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಜನಾಂಗವನ್ನು ಗುರುತಿಸಲು ತೋರುಬೆರಳು ತೋರಿಸಿದಾಗ ದಿಗ್ಗನೆದ್ದು ಕಾಣುವ ಅಸ್ಪೃಶ್ಯರೆಂದರೆ ಖಾಟಿಕ್ ಸಮಾಜದವರೆಂದು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ವರದಿಗಳೇ ಹೇಳಿವೆ. ಖಾಟಿಕ್ ಸಮಾಜವು ನಮ್ಮ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಹಾಗೂ ಕಡಿಮೆ ಜನಸಂಖ್ಯೆ ಉಳ್ಳ ಸಮಾಜವಾಗಿದೆ. ಭಾರತ ಸ್ವಾತಂತ್ರ್ಯಕ್ಕೂ ಮೊದಲು ಹಾಗೂ ನಂತರ ಸರ್ಕಾರಗಳು ದಲಿತ ಮತ್ತು ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಹಲವು ಕಲ್ಯಾಣ ಮತ್ತು ಅಭಿವೃದ್ದಿ ಯೋಜನೆಗಳನ್ನು ರೂಪಿಸುತ್ತ ಬಂದಿದೆ. ಖಾಟಿಕ್ ಸಮುದಾಯಕ್ಕೆ ಸೇರಿದ ಸಮಾನಾಂತರ ಪದಗಳಾದ ಕಟುಗ, ಕಟುಕ ಕಲಾಲ, ಸೂರ್ಯವಂಶ ಕ್ಷತ್ರಿಯ ಹಿಂದು ಕಲಾಲ, ಹಿಂದು ಖಾಟಿಕ, ಶೇರೆಗಾರ, ಅರೆ, ಅರೆ ಕಸಾಯಿ, ಅರೆ ಖಾಟಿಕಲು, ಕಲಾಲ ಖಾಟಿಕ, ಕಸಾಬ, ಕಸಾಯಿ, ಮರಟ್ಟಿ ಈ ಸಮುದಾಯವು ಸಾಮಾನ್ಯವಾಗಿ ಕುರಿ ಮೇಕೆ ಕತ್ತರಿಸಿ ಸ್ವಚ್ಚಗೊಳಿಸಿ ಮಾಂಸ ಮಾರಾಟ ಮಾಡುವ ವೃತ್ತಿಯವರಾಗಿದ್ದು, ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಇದನ್ನು ಈಗಾಗಲೇ ಅಸ್ಪೃಶ್ಯ ಜಾತಿಯ ಉದ್ಯೋಗ ಕಸಬು ಎಂದು ಪರಿಗಣಿಸಲಾಗಿದೆ. ಕರ್ನಾಟಕ ರಾಜ್ಯ ಹೊರತುಪಡಿಸಿ ನೆರೆ ಹೊರೆ ರಾಜ್ಯಗಳಾದ ಮಹಾರಾಷ್ಟ್ರ, ಮದ್ಯಪ್ರದೇಶ, ಹರಿಯಾಣ, ಹಿಮಾಚ್ಚಲ ಪ್ರದೇಶ, ಪಂಜಾಬ ರಾಜಸ್ತಾನ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಉತ್ತರಾಚಲ, ಚತ್ತಿಸಘಡ, ಚಂಡಿಗಡ ಹಾಗೂ ದೆಹಲಿ ರಾಜ್ಯಗಳಲ್ಲಿ ಖಾಟಿಕ್ ಜಾತಿಗಳು ಈಗಾಗಲೇ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿವೆ. 

ಇತ್ತೀಚಿನ ದಿನಗಳಲ್ಲಿ ಮಾಂಸ ಮಾರಾಟಗಳಲ್ಲಿ ಇತರೇ ಜಾತಿಯವರೂ ತೊಡಗಿಸಿಕೊಂಡಿರುವುದರಿಂದ ಖಾಟಿಕ್ ಜನಾಂಗ ಜೀವನ ಸಾಗಿಸುವುದು ಕಷ್ಟಸಾದ್ಯವಾಗುತ್ತಿದೆ. ಇದನ್ನು ಗುರುತಿಸಿ ಸರ್ಕಾರ ಸೂಕ್ತ ಆದೇಶ ಹೊರಡಿಸಿ ಖಾಟಿಕ್ ಹಾಗೂ ಇದರ ಉಪ ಜಾತಿಗಳ ಇರುವಿಕೆಯನ್ನು ಪರಿಶೀಲಿಸಿ ಕುಲಶಾಸ್ತಿಯನ್ನು ಅಧ್ಯಯನ ನಡೆಸಿ ಅಗತ್ಯ ಅನುದಾನ ಮಂಜೂರಿ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಎಮ್.ಸಿ ಕಲಾಲ, ನಾಗರಾಜ ಕಲಾಲ, ಶಶಿಕಲಾ ಮಿರಜಕರ, ಗಾಯತ್ರಿ ಕಲಾಲ, ವರಮಹಾಲಕ್ಷ್ಮಿ ಕಲಾಲ, ಅನ್ನಪೂರ್ಣ ಕಲಾಲ, ಗೀತಾ ಕಲಾಲ, ಭಾರತಿ ಕಲಾಲ, ಪ್ರಭಾ ಕಲಾಲ, ಶಿಲ್ಪ ಕಲಾಲ, ಪಾರ್ವತಮ್ಮ ಕಲಾಲ, ಲಕ್ಷ್ಮಿ ಕಲಾಲ, ಸವಿತಾ ಕಲಾಲ, ಶೋಭಾ ಕಲಾಲ, ವತ್ಸಲಾ ಮಿರಜಕರ, ಅರ್ಪಿತಾ ಕಲಾಲ, ಮೇಘನಾ ಕಲಾಲ, ರಾಧಾ ಕಲಾಲ, ರೇಣುಕಾ ಕಲಾಲ, ಮಂಜುಳಾ ಕಲಾಲ, ನಂದಾ ಕಲಾಲ, ದ್ರಾಕ್ಷಾಯಿಣಿ ಕಲಾಲ, ರೂಪಾ ಕಲಾಲ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ